ಕೆರಗೋಡಿಗೆ ಹೊರಗಿನವರಿಂದ ವಿಷ: ಶಾಸಕ ಪಿ.ರವಿಕುಮಾರ್‌

| Published : Feb 05 2024, 01:45 AM IST

ಸಾರಾಂಶ

ನಾನು ಶ್ರೀರಾಮ, ಹನುಮ ವಿರೋಧಿಯಲ್ಲ. ನಮ್ಮ ಮನೆಗೂ ಕೂಡ ಕೇಸರಿ ಧ್ವಜ ನೀಡಲಿ ತೆಗೆದುಕೊಳ್ಳುತ್ತೇನೆ. ಬೆಂಕಿ ಹಚ್ಚುವ ಕೆಲಸ ಮಾಡುವುದು ಬೇಡ. ಚುನಾವಣೆಗಾಗಿ ನಾನು ರಾಜಕೀಯ ಮಾಡಲ್ಲ. ಕಾಲಭೈರವ, ಶನಿಮಹಾತ್ಮ, ಶ್ರೀಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿಯೇ ಬಂದು ಮಾತನಾಡುತ್ತಿದ್ದೇನೆ. ನಾನು ಯಾವ ದೇವರ ವಿರೋಧಿಯೂ ಅಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಾಂತಿ, ನೆಮ್ಮದಿ ನೆಲಸಿದ್ದ ಕೆರಗೋಡು ಗ್ರಾಮಕ್ಕೆ ಹೊರಗಿನವರು ಬಂದು ವಿಷ ಹಾಕಿದ್ದಾರೆ. ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಪ್ರಚೋದನೆಗೆ ಒಳಗಾಗಬೇಡಿ. ಗ್ರಾಮದಲ್ಲಿ ಶಾಂತಿ ಕಾಪಾಡುವುದು ಮುಖ್ಯ ಎಂದು ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಮನವಿ ಮಾಡಿದರು.

ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆರಗೋಡು ಜನರಿಗೆ ಶಾಂತಿ ಬೇಕಿದೆ. ಎಲ್ಲ ಪಕ್ಷದ ಮುಖಂಡರು, ಬಜರಂಗದಳ, ಆರ್‌ಎಸ್‌ಎಸ್‌ ಸೇರಿದಂತೆ ಯಾರ್‍ಯಾರು ಹೋರಾಟ ಮಾಡುತ್ತಿದ್ದೀರೋ ಅವರಲ್ಲಿ ಕೇಳಿಕೊಳ್ಳುವುದೇನೆಂದರೆ, ಕೆರಗೋಡು ಜನರಿಗೆ ನೆಮ್ಮದಿ ಬೇಕಿದೆ, ಸುಮ್ಮನೆ ಬೆಂಕಿ ಹಚ್ಚುವ ಕೆಲಸ ಮಾಡುವುದು ಬೇಡ. ಯಾರೂ ಕೂಡ ಬಂದ್‌ಗೆ ಕರೆ ನೀಡಬೇಡಿ. ಈಗಾಗಲೇ ವ್ಯಾಪಾರಸ್ಥರು ನಷ್ಟದಲ್ಲಿದ್ದಾರೆ ಅವರಿಗೆ ತೊಂದರೆ ಕೊಡುವುದು ಬೇಡ ಎಂದು ಫೆ.7 ಮತ್ತು ಫೆ.9 ರಂದು ಬಂದ್‌ಗೆ ಕರೆ ನೀಡಿರುವವರಲ್ಲಿ ಮನವಿ ಮಾಡಿದರು.

ಕೆರಗೋಡು ಸಮೀಪವಿರುವ ಹಲ್ಲೇಗೆರೆ ಇದೀಗ ವಿಶ್ವದ ಗಮನ ಸೆಳೆಯುತ್ತಿದೆ. ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಸೇರಿದಂತೆ ದಲೈಲಾಮ ಕೂಡ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. 100 ಕೋಟಿ ರು. ವೆಚ್ಚದಲ್ಲಿ ಭೂಮಿ ಆಧ್ಯಾತ್ಮಿಕ ಕೇಂದ್ರ ಸ್ಥಾಪನೆಯಾಗುತ್ತಿದೆ. ಇದರಿಂದ ಕೆರಗೋಡು ವ್ಯಾಪ್ತಿಯಲ್ಲಿ ಭೂಮಿಗೆ ಚಿನ್ನದ ಬೆಲೆ ಬರುತ್ತದೆ. ಬೇಡದೇ ಇರೋ ವಿಚಾರಕ್ಕೆ ತಲೆಹಾಕಿ ಅಭಿವೃದ್ಧಿಗೆ ತೊಂದರೆ ಕೊಡುವುದು ಬೇಡ ಎಂದರು.

ಜಿಲ್ಲಾಡಳಿತ ಕೆರಗೋಡು ಜನರೊಂದಿಗೆ ಶೀಘ್ರದಲ್ಲೇ ಶಾಂತಿಸಭೆ ನಡೆಯಲಿದೆ. ಸದ್ಯಕ್ಕೆ ನಡೆದರೆ ಬೇರೆ ರೀತಿಯಲ್ಲೇ ಮಾತು ಹೋಗುತ್ತದೆ. ಶ್ರೀರಾಮ ಮತ್ತು ಶ್ರೀಆಂಜನೇಯನೂ ನಮ್ಮವರೇ ಅವರೆಲ್ಲರನ್ನೂ ಪೂಜೆ ಮಾಡುತ್ತೇವೆ, ಕಾನೂನು ಸುವ್ಯವಸ್ಥೆ ಕಾಪಾಡಲು ನಾವೇ ಮಾಡುತ್ತೇವೆ. ಅವರಿಗೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಾನು ಶ್ರೀರಾಮ, ಹನುಮ ವಿರೋಧಿಯಲ್ಲ. ನಮ್ಮ ಮನೆಗೂ ಕೂಡ ಕೇಸರಿ ಧ್ವಜ ನೀಡಲಿ ತೆಗೆದುಕೊಳ್ಳುತ್ತೇನೆ. ಬೆಂಕಿ ಹಚ್ಚುವ ಕೆಲಸ ಮಾಡುವುದು ಬೇಡ. ಚುನಾವಣೆಗಾಗಿ ನಾನು ರಾಜಕೀಯ ಮಾಡಲ್ಲ. ಕಾಲಭೈರವ, ಶನಿಮಹಾತ್ಮ, ಶ್ರೀಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿಯೇ ಬಂದು ಮಾತನಾಡುತ್ತಿದ್ದೇನೆ. ನಾನು ಯಾವ ದೇವರ ವಿರೋಧಿಯೂ ಅಲ್ಲ ಎಂದು ಸ್ಪಷ್ಟಪಡಿಸಿದರು.