ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ, ಆರು ಬಾರಿಯ ಶಾಸಕ ವಿ.ಡಿ.ಸತೀಶನ್‌ (61) ಅವರನ್ನು ಪಕ್ಷದ ಹೈಕಮಾಂಡ್‌ ಆಯ್ಕೆ ಮಾಡಿದೆ. ಇದರೊಂದಿಗೆ ಫಲಿತಾಂಶ ಪ್ರಕಟವಾದ 11 ದಿನಗಳ ಬಳಿಕ ಮುಂದಿನ ಸಿಎಂ ಯಾರೆಂಬ ಕುತೂಹಲಕ್ಕೆ ಪಕ್ಷ ತೆರೆ ಎಳೆದಿದೆ.

ತಿರುವನಂತಪುರ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ, ಆರು ಬಾರಿಯ ಶಾಸಕ ವಿ.ಡಿ.ಸತೀಶನ್‌ (61) ಅವರನ್ನು ಪಕ್ಷದ ಹೈಕಮಾಂಡ್‌ ಆಯ್ಕೆ ಮಾಡಿದೆ. ಇದರೊಂದಿಗೆ ಫಲಿತಾಂಶ ಪ್ರಕಟವಾದ 11 ದಿನಗಳ ಬಳಿಕ ಮುಂದಿನ ಸಿಎಂ ಯಾರೆಂಬ ಕುತೂಹಲಕ್ಕೆ ಪಕ್ಷ ತೆರೆ ಎಳೆದಿದೆ.ನೂತನ ಸಿಎಂ ರೇಸ್‌ನಲ್ಲಿ ಸಂಸದ ವೇಣುಗೋಪಾಲ್‌ ಅವರೇ ಮುಂಚೂಣಿಯಲ್ಲಿದ್ದರು. ಬಹುತೇಕ ಶಾಸಕರು, ಸಂಸದರು, ಸ್ವತಃ ರಾಹುಲ್‌ ಒತ್ತಾಸೆಯೂ ವೇಣು ಪರವೇ ಇತ್ತು. ಆದರೆ ಕೇರಳದಲ್ಲಿ ಯುಡಿಎಫ್‌ ಮೈತ್ರಿಕೂಟದ ಪ್ರಮುಖ ಪಕ್ಷವಾದ ಮುಸ್ಲಿಂ ಲೀಗ್‌ ಹಾಗೂ ಇನ್ನಿತರೆ ಪಕ್ಷಗಳ ಒತ್ತಡದ ಕಾರಣ ಸತೀಶನ್‌ಗೆ ಹುದ್ದೆ ಒಲಿದಿದೆ ಎನ್ನಲಾಗಿದೆ.

ರಾಜ್ಯ ವಿಧಾನಸಭೆಯ 140 ಸ್ಥಾನಗಳ ಪೈಕಿ ಯುಡಿಎಫ್ ಈ ಬಾರಿ 103 ಸ್ಥಾನ ಗೆದ್ದಿತ್ತು. ಈ ಪೈಕಿ ಕಾಂಗ್ರೆಸ್‌ 63 ಸ್ಥಾನ ಮತ್ತು ಮುಸ್ಲಿಂ ಲೀಗ್ 22 ಸ್ಥಾನ ಗೆದ್ದಿತ್ತು. ಉಳಿದಂತೆ ಎಲ್‌ಡಿಎಫ್‌ 35, ಬಿಜೆಪಿ 3 ಸ್ಥಾನ ಗೆದ್ದಿದ್ದವು.

ಸತೀಶನ್‌ ಯಾಕೆ?:

ರಾಜ್ಯದಲ್ಲಿ ಹಿಂದಿನ ಎಲ್‌ಡಿಎಫ್‌ ಸರ್ಕಾರದ ಅವಧಿಯಲ್ಲಿ ವಿಪಕ್ಷ ನಾಯಕರಾಗಿದ್ದ ಸತೀಶನ್‌, ಪ್ರತಿಪಕ್ಷ ನಾಯಕರಾಗಿ ಪಕ್ಷ ಸಂಘಟಿಸಿದವರು, ಜನಾನುರಾಗಿಯೂ ಹೌದು. ಕೇರಳ ಕಾಂಗ್ರೆಸ್‌ ಕಾರ್ಯಕರ್ತರಿಗೂ ಅಚ್ಚುಮೆಚ್ಚು. ಜತೆಗೆ, ಯುಡಿಎಫ್‌ ಮೈತ್ರಿಕೂಟದ ಅಂಗಪಕ್ಷಗಳಾದ ಮುಸ್ಲಿಂ ಲೀಗ್‌, ಕೇರಳ ಕಾಂಗ್ರೆಸ್‌ ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್‌ ಪಾರ್ಟಿ ಬೆಂಬಲವೂ ಇದೆ. ಬೇರೆಯವರನ್ನು ಸಿಎಂ ಗಾದಿಗೆ ಆಯ್ಕೆ ಮಾಡಿದರೆ ಮಿತ್ರಪಕ್ಷಗಳು ಬೆಂಬಲ ಹಿಂಪಡೆವ ಆತಂಕವಿತ್ತು. 32 ಸ್ಥಾನ ಗೆದ್ದಿರುವ ಮಿತ್ರಪಕ್ಷಗಳು ಹೀಗೇನಾದರೂ ಮಾಡಿದರೆ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಸಾಧ್ಯತೆ ಇತ್ತು. ಅಲ್ಲದೆ, 2019, 2024ರಲ್ಲಿ ವಯನಾಡು ಲೋಕಸಭಾ ಕ್ಷೇತ್ರದಿಂದ ರಾಹುಲ್‌ ಗಾಂಧಿ, ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲಲು ಮುಸ್ಲಿಂ ಲೀಗ್‌ ಪಾತ್ರ ಮಹತ್ವದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಸತೀಶನ್‌ ಆಯ್ಕೆ ಅನಿವಾರ್ಯವಾಯಿತು.

ಗೆಲುವಿನ ರೂವಾರಿ:

ಈ ಬಾರಿಯ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್‌ನ ಅಭೂತಪೂರ್ವ ಗೆಲುವಿನ ಹಿಂದೆ ಸತೀಶನ್‌ ಪಾತ್ರ ಮಹತ್ವದ್ದಿದೆ. ಭ್ರಷ್ಟಾಚಾರ ಆರೋಪ, ಆಡಳಿತ ವೈಫಲ್ಯ ಮತ್ತಿತರ ವಿಚಾರ ಮುಂದಿಟ್ಟುಕೊಂಡು ಪಿಣರಾಯಿ ವಿಜಯನ್‌ ಸರ್ಕಾರದ ವಿರುದ್ಧ ಸತೀಶನ್‌ ಹೋರಾಟ ರೂಪಿಸಿದ್ದರು.

ಕೇರಳದಲ್ಲಿ ಹೊಸ ಅಧ್ಯಾಯ:

ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆ ಸತೀಶನ್‌ ಅವರು, ಕೇರಳದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಕೇರಳದ ಜನ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ನಾವು ಕೊಟ್ಟ ಭರವಸೆ ಈಡೇರಿಸಲು ಶ್ರಮಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪಕ್ಷದ ಗೆಲುವಿಗಾಗಿ ಕೆ.ಸಿ.ವೇಣುಗೋಪಾಲ್‌ ಅವರು ವಹಿಸಿದ ಪಾತ್ರಕ್ಕೂ ಸತೀಶನ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ವಿ.ಡಿ.ಸತೀಶನ್ ರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಪಕ್ಷದ ನಿರ್ಧಾರ ಒಪ್ಪಿಕೊಳ್ಳುವುದಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ. ಜತೆಗೆ, ಯುಡಿಎಫ್‌ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿಯೂ ತಿಳಿಸಿದ್ದಾರೆ.