ಸಾರಾಂಶ
ಬೆಂಗಳೂರು : ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರು. ಅತ್ಯಂತ ಹಿಂದುಳಿದ ಜಾತಿಗಳನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವ ಕೆಲಸ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ವಿಧಾನಸೌಧ ಮುಂಭಾಗದಲ್ಲಿರುವ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿ, ಉಳುವವನೇ ಭೂಮಿಯ ಒಡೆಯನಾಗುವ ದೊಡ್ಡ ಕೆಲಸ ಮಾಡಿದರು. ಜೀತ ಪದ್ಧತಿ, ಮಲ ಹೊರುವ ಪದ್ಧತಿಗಳನ್ನು ರದ್ದುಪಡಿಸಿದರು. ಋಣ ಪರಿಹಾರ ಕಾಯ್ದೆ ಜಾರಿಗೆ ತಂದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲದಕ್ಕಿಂತ ಹೆಚ್ಚಿನದಾಗಿ ಹಾವನೂರು ಆಯೋಗವನ್ನು ರಚನೆ ಮಾಡುವ ಮೂಲಕ ಹಿಂದುಳಿದವರಿಗೆ ಉದ್ಯೋಗ, ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಕೆಲಸ ಮಾಡಿದರು. ಮೈಸೂರು ರಾಜ್ಯ ಏಕೀಕರಣವಾಗಿ ವಿಶಾಲ ಕರ್ನಾಟಕವಾದರೂ ಮೈಸೂರು ಎಂದು ಕರೆಯಲಾಗುತ್ತಿತ್ತು. 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿ ಹೆಸರು ಬದಲಾಯಿಸಿದರು ಎಂದು ಸ್ಮರಿಸಿದರು.
ಸೌಲಭ್ಯ ವಂಚಿತರಿಗೆ ನ್ಯಾಯ
ಬಡವರು. ದಲಿತರು, ಹಿಂದುಳಿದವರು ಸೇರಿದಂತೆ ಯಾವ್ಯಾವ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲವೋ ಅವರಿಗೆ ನ್ಯಾಯ ಕೊಡಿಸಿದರು. ಸಾಮಾಜಿಕ ನ್ಯಾಯ ಎಂದರೆ ಇನ್ನೊಬ್ಬರಿಂದ ಕಿತ್ತು ಕೊಡುವುದಲ್ಲ. ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಡುವುದು. ಈ ಕೆಲಸವನ್ನು ಅರಸು ಅವರು ಮಾಡಿದರು. ನಮಗೆಲ್ಲಾ ಆಡಳಿತದಲ್ಲಿ ಸ್ಫೂರ್ತಿಯಾಗಿದ್ದಾರೆ. ಬಸವಣ್ಣ, ಬುದ್ಧ, ಅರಸು, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ ಮತ್ತಿತರರು ಇದ್ದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ ಮತ್ತಿತರರು ಹಾಜರಿದ್ದರು.