ಇದೀಗ ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖಾದರ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರೊಂದಿಗೆ ‘ಕನ್ನಡಪ್ರಭ’ ಮುಖಾಮುಖಿಯಾಗಿದ್ದು ಹೀಗೆ.
ಬಸವರಾಜ ಹೊರಟ್ಟಿ
- ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ
ವಿಜಯ್ ಮಲಗಿಹಾಳ
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಬಾರಿ ಬೆಳಗಾವಿ ಅಧಿವೇಶನ ಬಂದಾಗಲೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು ಎಂಬ ಕೂಗು ಕೇಳಿಬರುತ್ತದೆ. ಆದರೆ, ಗಂಭೀರ ಚರ್ಚೆ ಆಗಿದ್ದು ಮಾತ್ರ ತೀರಾ ಕಡಿಮೆ. ಈ ನಡುವೆ ವಿಧಾನಮಂಡಲಕ್ಕೆ ಸಂಬಂಧಿಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ತಮ್ಮೊಂದಿಗೆ ಚರ್ಚೆಯನ್ನೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಹಿರಂಗವಾಗಿ ಆಕ್ರೋಶವನ್ನೂ ಹೊರಹಾಕಿದ್ದರು. ಇದೀಗ ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖಾದರ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರೊಂದಿಗೆ ‘ಕನ್ನಡಪ್ರಭ’ ಮುಖಾಮುಖಿಯಾಗಿದ್ದು ಹೀಗೆ.
*ಮತ್ತೊಂದು ಬೆಳಗಾವಿ ಅಧಿವೇಶನ ಬಂದಿದೆ. ಸಿದ್ಧತೆ ಹೇಗಿದೆ?
ಬೆಳಗಾವಿ ಅಧಿವೇಶನ ಸಂಬಂಧ ಈ ತಿಂಗಳ 19ರಂದು ವಿಧಾನಸಭೆ ಸ್ಪೀಕರ್ ಮತ್ತು ನಾನು ಬೆಳಗಾವಿಗೆ ಹೋಗಿ ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಮಾಡಿದ್ದೇವೆ. ಈ ಬಾರಿ ಅಧಿವೇಶನ ಹೇಗೆ ನಡೆಯಬೇಕು? ಊಟ, ವಸತಿ ವ್ಯವಸ್ಥೆ ಹೇಗಿರಬೇಕು? ಯಾವುದೇ ಸಮಸ್ಯೆಗಳಾಗಂತೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದೇವೆ. ಸುವರ್ಣಸೌಧದ ಆವರಣದಿಂದ ಒಂದು ಕಿ.ಮೀ. ದೂರದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬೇಕು. ಕಳೆದ ಬಾರಿಯಂತೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು. ಸಂಬಂಧಪಟ್ಟ ಮಂತ್ರಿಗಳೇ ಪ್ರತಿಭಟನಾ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸುತ್ತಾರೆ. ಸದನ ಕಲಾಪಗಳು ಸುಗಮವಾಗಿ ನಡೆಯಬೇಕು. ಒಂದು ವೇಳೆ ಏನಾದರೂ ಸಮಸ್ಯೆಗಳಾದರೆ, ಸಂಬಂಧಿತ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದೇವೆ.
*ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕು ಎಂಬ ಬೇಡಿಕೆ ನಿಜವಾಗಿಯೂ ಈಡೇರುವುದೇ?
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ಮುಗಿದ ಬಳಿಕ ಇಡೀ ದಿನ ಉತ್ತರ ಕರ್ನಾಟಕ ಸಂಬಂಧಿತ ವಿಷಯಗಳು, ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು. ಆ ಭಾಗದ ಶಾಸಕರು ಮಾತ್ರವಲ್ಲದೆ ಹಳೇ ಮೈಸೂರು ಭಾಗದ ಶಾಸಕರು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ, ಉದಾಹರಣೆಗೆ ಕಬ್ಬಿಗೆ ಬೆಂಕಿ ಹಚ್ಚಿದ ಘಟನೆ, ಅತಿವೃಷ್ಟಿ, ಅನಾವೃಷ್ಟಿ, ಅಭಿವೃದ್ಧಿ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ಕೇಳಿದರೆ ಅವಕಾಶ ಕಲ್ಪಿಸಲಾಗುವುದು. ಈ ಭಾಗದ ಬಗ್ಗೆ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಶಾಸಕರು ಈ ಅಧಿವೇಶನವನ್ನು ಸದುಪಯೋಗಪಡಿಸಿಕೊಳ್ಳಬೇಕು.
*ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಯುವ ಈ ಅಧಿವೇಶನವನ್ನು ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಸಮರ್ಥವಾಗಿ ಬಳಸಿಕೊಳ್ಳಬಹುದಲ್ಲವೇ?
ಹೌದು. ಬೆಳಗ್ಗೆ ಪ್ರಶ್ನೋತ್ತರ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆಗಳು ಎರಡು-ಮೂರು ಗಂಟೆಗಳಲ್ಲಿ ಮುಗಿಯುತ್ತವೆ. ಚರ್ಚೆಗೆ ಅವಕಾಶ ನೀಡುವ ಅಧಿಕಾರ ನನ್ನ ಕೈಯಲ್ಲಿರುತ್ತದೆ. ನಿಯಮಗಳನ್ನು ಪರಿವರ್ತಿಸಿ ಚರ್ಚೆಗೆ ಸಮಯ ನೀಡಬಹುದು. ನಾನಂತು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಗೆ ಸಾಕಷ್ಟು ಸಮಯ ನೀಡುತ್ತೇನೆ. ಶಾಸಕರು ನಿಯಮದ ಪ್ರಕಾರ ವಿಷಯಗಳನ್ನು ಚರ್ಚೆಗೆ ತರಬೇಕು. ಆಗ ನಾನು ಆದ್ಯತೆ ಮೇರೆಗೆ ಚರ್ಚೆಗೆ ಸಮಯ ಕೊಡುತ್ತೇನೆ. ಜನಪ್ರತಿನಿಧಿಗಳು ಸುಮ್ಮನೆ ಕುಳಿತರೆ ಆಗುವುದಿಲ್ಲ. ಶಿಕ್ಷಣ, ಅಂಗನವಾಡಿ, ಆರೋಗ್ಯ, ರೈತರು, ಕೃಷಿಗೆ ಸಂಬಂಧಿತ ಸಮಸ್ಯೆಗಳು ಹೆಚ್ಚಿರುತ್ತವೆ. ಹೀಗಾಗಿ ಸಂಬಂಧಪಟ್ಟ ಸಚಿವರು ಅಧಿವೇಶನ ಆರಂಭಕ್ಕೂ ಮುನ್ನ ಸಮಸ್ಯೆ ಆಲಿಸಿ ಪರಿಹರಿಸಿದರೆ ಬೇರೆ ವಿಷಯಗಳ ಚರ್ಚೆಗೆ ಹೆಚ್ಚಿನ ಸಮಯ ಸಿಗುತ್ತದೆ. ಈ ಬಗ್ಗೆ ನಾನು ಕೆಲ ಸಚಿವರ ಜೊತೆಗೂ ಮಾತನಾಡುತ್ತೇನೆ.
*ಬೆಳಗಾವಿ ಸುವರ್ಣ ವಿಧಾನಸೌಧ ಕಟ್ಟಡವನ್ನು ವರ್ಷಪೂರ್ತಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ನಿರೀಕ್ಷೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ?
ಕೋಟ್ಯಂತರ ರು. ವೆಚ್ಚ ಮಾಡಿ ಈ ಭವ್ಯ ಕಟ್ಟಡ ನಿರ್ಮಿಸಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬುದು ನಮ್ಮ ಆಶಯ. ಈ ಹಿಂದೆ ನಾನು ಭರವಸೆ ಸಮಿತಿ ಅಧ್ಯಕ್ಷನಾಗಿದ್ದಾಗ ಸಭೆ ಮಾಡಿ ಸುವರ್ಣ ವಿಧಾನಸೌಧ ಕಟ್ಟಡ ಬಳಕೆ ಬಗ್ಗೆ ಕೆಲ ಸೂಚನೆಗಳನ್ನು ನೀಡಿದ್ದೆ. ವಿಧಾನಸೌಧದ ಮಾದರಿಯಲ್ಲೇ ವ್ಯವಸ್ಥೆ ಮಾಡುವಂತೆ ಹೇಳಿದ್ದೆ. ಬಳಿಕ ಕೆಲ ಇಲಾಖೆಗಳನ್ನು ಇಲ್ಲಿಗೆ ವರ್ಗಾಯಿಸಲಾಗಿತ್ತು. ಬಳಿಕ ಮತ್ತೆ ಬೆಂಗಳೂರಿನತ್ತ ಮುಖ ಮಾಡಲಾಯಿತು. ಈ ಬಗ್ಗೆ ಗಟ್ಟಿಯಾಗಿ ಕೇಳುವಂಥ ಶಾಸಕರು ಇಲ್ಲ.
*ಸುವರ್ಣವಿಧಾನಸೌಧದ ಆವರಣದಲ್ಲಿ ಶಾಸಕರ ಭವನ ನಿರ್ಮಿಸುವ ಪ್ರಸ್ತಾಪ ನೆನೆಗುದಿಗೆ ಬಿದ್ದಂತಿದೆ?
ನೋಡಿ ಪ್ರತಿ ಅಧಿವೇಶನ ನಡೆಸುವ ವೇಳೆ ವಿಧಾನಮಂಡಲದ ಉಭಯ ಸದನಗಳ ಶಾಸಕರ ವಸತಿ ಮತ್ತಿತರ ವ್ಯವಸ್ಥೆಗೆ ಸುಮಾರು 12 ಕೋಟಿ ರು. ವ್ಯಯವಾಗುತ್ತದೆ. ಇಲ್ಲಿವರೆಗೆ ಸುಮಾರು ನೂರಕ್ಕೂ ಹೆಚ್ಚು ಕೋಟಿ ರು.ಗಳನ್ನು ಇದಕ್ಕಾಗಿ ವೆಚ್ಚ ಮಾಡಿದ್ದೇವೆ. ಹಿಂದೆಯೇ ಶಾಸಕರ ಭವನ ನಿರ್ಮಿಸಿದ್ದರೆ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು. ಈ ಬಗ್ಗೆ ಮಾಜಿ ಸಂಸದ ಪ್ರಭಾಕರ್ ಕೋರೆ, ತಾಜ್ ಗ್ರೂಪ್‌ನವರು ಪ್ರಸ್ತಾಪ ನೀಡಿದ್ದಾರೆ. ಈಗಲಾದರೂ ವಿಳಂಬ ಮಾಡದೆ ಶಾಸಕರ ಭವನ ನಿರ್ಮಿಸುವ ಬಗ್ಗೆ ಸರ್ಕಾರ ಆಸಕ್ತಿ ತೋರಬೇಕು.
*ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಉಂಟಾಗುವ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ?
ಇದನ್ನು ದುಬಾರಿ ವೆಚ್ಚ ಎಂದು ಹೇಳಲಾಗುವುದಿಲ್ಲ. ಶಾಸಕರು ಮತ್ತು ಅಧಿಕಾರಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ನಾವೇ ಮಾಡಿರುತ್ತೇವೆ. ಹಾಗಂತ ನಾವು ಟಿಎ, ಡಿಎ ಕೊಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಕೆಲವರು ಇಲ್ಲಿ ನಾವು ಊಟ ಮಾಡುವುದೇ ಇಲ್ಲ ಎನ್ನುತ್ತಾರೆ. ಇದನ್ನು ವಿನಾಕಾರಣ ಖರ್ಚು ಎಂದು ಹೇಳಲಾಗುವುದಿಲ್ಲ. ವ್ಯವಸ್ಥೆ ಮಾಡುವುದು ಅನಿವಾರ್ಯ. ಮನುಷ್ಯನಿಗೆ ಮನಸ್ಸು ಮುಖ್ಯ. ಹೀಗಾಗಿಯೇ ಶನಿವಾರವೂ ಸದನ ನಡೆಸಿ ಎಂದು ಹೇಳಿದ್ದೇನೆ. ಈ ಬಾರಿ ಪ್ರಯತ್ನ ಮಾಡಲಾಗುವುದು.
*ವಿಧಾನಸಭೆ ಮತ್ತು ವಿಧಾನಪರಿಷತ್ ನಡುವೆ ಸಮನ್ವಯ ಕೊರತೆ ಕಾಣುತ್ತಿದೆಯೇ?
ಅಂಥ ಭಿನ್ನಾಭಿಪ್ರಾಯಗಳು ಏನೂ ಇಲ್ಲ. ಅಧಿವೇಶನ ಆರಂಭಕ್ಕೂ ಮುನ್ನ ಸ್ಪೀಕರ್ ಮತ್ತು ನಾನು ಸದನ ಸಲಹಾ ಸಮಿತಿ ಸಭೆ ಮಾಡುತ್ತೇವೆ. ವಿಧಾನಸಭೆ ಮತ್ತು ವಿಧಾನಪರಿಷತ್ ಆ ದಿನದ ಅಜೆಂಡಾಗಳನ್ನು ತಿಕ್ಕಾಟ ಆಗದಂತೆ ರೂಪಿಸುತ್ತೇವೆ. ಏಕೆಂದರೆ, ಮಂತ್ರಿಗಳು ಎರಡೂ ಸದನಗಳಿಗೆ ಒಟ್ಟಿಗೆ ಹೋಗಲು ಆಗುವುದಿಲ್ಲ. ಹೀಗಾಗಿ ಯಾವ ವಿಷಯ ಯಾವಾಗ ತೆಗೆದುಕೊಳ್ಳಬೇಕು? ಆಗ ಯಾವ ಮಂತ್ರಿಗಳು ಇರಬೇಕು ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಈ ಬಗ್ಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಮತ್ತು ಮುಖ್ಯ ಸಚೇತಕರ ಜತೆಗೂ ನಾನು ಮಾತನಾಡಿದ್ದೇನೆ.
*ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮತ್ತು ನಿಮ್ಮ ನಡುವೆ ಹೊಂದಾಣಿಕೆ ಕೊರತೆ ಇದೆಯಂತೆ?
ಅಂತಹ ದೊಡ್ಡ ಹೊಂದಾಣಿಕೆ ಕೊರತೆ ಏನೂ ಇಲ್ಲ. ಈ ಹಿಂದೆ ಸ್ಪೀಕರ್ ಅವರು ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ಮಾಡಿದಾಗ ಮತ್ತು ಲೈಟಿಂಗ್ ವ್ಯವಸ್ಥೆ ಮಾಡಿದಾಗ ನನ್ನೊಂದಿಗೆ ಚರ್ಚಿಸಿರಲಿಲ್ಲ. ಸದನದ ಪ್ರೊಟೋಕಾಲ್ ಇದೆ. ವಿಧಾನಮಂಡಲ ಎಂದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಬರುತ್ತದೆ. ಕೆಲವೊಂದು ವಿಚಾರಗಳಲ್ಲಿ ಇಬ್ಬರು ಸೇರಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ರಾಜ್ಯಪಾಲರ ನಂತರ ಕ್ರಮವಾಗಿ ಮೊದಲು ವಿಧಾನಪರಿಷತ್ತಿನ ಸಭಾಪತಿ, ನಂತರ ವಿಧಾನಸಭೆಯ ಸಭಾಧ್ಯಕ್ಷರು ಬರುತ್ತಾರೆ. ಆದರೆ, ಸಭಾಧ್ಯಕ್ಷರು ನಮ್ಮನ್ನು ಕೇಳದೆ ಕೆಲ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಉಳಿದಂತೆ ಅವರ ಸದನ ಅವರು ನಡೆಸುತ್ತಾರೆ. ನಮ್ಮ ಸದನ ನಾನು ನಡೆಸುತ್ತೇನೆ. ಈ ಬಗ್ಗೆ ನಾನು ಅವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದೆ. ನಂತರ ನಮ್ಮಿಬ್ಬರ ಮಧ್ಯೆ ಯಾವುದೇ ಸಮಸ್ಯೆಗಳು ಬಂದಿಲ್ಲ.
*ವಿಧಾನಸಭೆಯ ಸಭಾಧ್ಯಕ್ಷರು ಮತ್ತು ವಿಧಾನಪರಿಷತ್ತಿನ ಸಭಾಪತಿ ಹುದ್ದೆಗಳು ಪ್ರಶ್ನಾತೀತವೇ?
ಹೌದು. ಪ್ರಶ್ನಾತೀತ. ಯಾರೂ ಪ್ರಶ್ನೆ ಮಾಡುವಂತಿಲ್ಲ. ಏಕೆಂದರೆ, ಎರಡೂ ಸಾಂವಿಧಾನಿಕ ಹುದ್ದೆಗಳು. ಉಭಯ ಸದನಗಳಲ್ಲಿ ಕೈಗೊಂಡ ತೀರ್ಮಾನ ಮತ್ತು ನೀಡಿದ ಆದೇಶವನ್ನು ಯಾರೂ ಪ್ರಶ್ನಿಸುವಂತಿಲ್ಲ.
*ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಹಾಲಿ ಸ್ಪೀಕರ್ ವಿರುದ್ಧ ಆಡಳಿತ ಸುಧಾರಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ?
ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆರೋಪಗಳ ಬಗ್ಗೆ ಗಮನಿಸಿದ್ದೇನೆ. ಈ ಬಗ್ಗೆ ಅವರನ್ನೇ ಕೇಳಬೇಕು. ಖರ್ಚು ವೆಚ್ಚಗಳಿಗೆ ನಿಯಂತ್ರಣವೇ ಇಲ್ಲ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ, ಹಣಕಾಸು ಇಲಾಖೆಗೆ ಅದರ ನಿಯಂತ್ರಣದ ಅಧಿಕಾರವಿದೆ.
*ವಿಧಾನಮಂಡಲವನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು ಎಂಬ ಆಗ್ರಹವನ್ನೂ ಕಾಗೇರಿ ಅವರು ಮಾಡಿದ್ದಾರೆ?
ಆರ್‌ಟಿಐ ವ್ಯಾಪ್ತಿಗೆ ತರುವುದಕ್ಕೆ ವಿಧಾನಪರಿಷತ್ತಿನ ಸಭಾಪತಿಯಾಗಿ ನನ್ನ ಸಮ್ಮತಿ ಇದೆ. ತಪ್ಪೇನಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ನಾನು ವಿಧಾನಸಭೆಯ ಸ್ಪೀಕರ್ ಮಾತನಾಡುವುದಿಲ್ಲ.
