ಸಾರಾಂಶ
ಕಾಂಗ್ರೆಸ್ ಶಾಸಕರ ಲಿಸ್ಟ್ ರೆಡಿ ಇದೆ ಎಂದು ಹೇಳಿರುವವರನ್ನು ಕರೆದುಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಹಾಸನ: ಕಾಂಗ್ರೆಸ್ ಶಾಸಕರ ಲಿಸ್ಟ್ ರೆಡಿ ಇದೆ ಎಂದು ಹೇಳಿರುವವರನ್ನು ಕರೆದುಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾವುದೇ ಪಟ್ಟಿ ಇಲ್ಲ. ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಇದೆ. ಆದರೆ ಈಗಲೇ ಕೊಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಎಂ.ಬಿ.ಪಾಟೀಲ್‌ಗೆ ಕೊಟ್ಟಿದ್ದಾರೆ. ಆ ಲಿಸ್ಟ್ ಕೊಡ್ಲಾ! ಲಿಸ್ಟ್ ಇದೆ. ಈಗಲೇ ಕೊಡಲ್ಲ. ಅವರೆಲ್ಲಾ ಕಾಂಗ್ರೆಸ್‌ಗೆ ಬಂದ ಮೇಲೆ ಹೇಳ್ತಿನಿ ಎಂದು ಗೊಂದಲವಾಗಿ ಹೇಳಿಕೆ ನೀಡಿದರು. ಸೆಪ್ಟೆಂಬರ್‌ನಲ್ಲಿ ಕ್ರಾಂತಿ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಸೆಪ್ಟೆಂಬರ್ ಕ್ರಾಂತಿ ಈವಾಗಲೇ ಹೇಳಲ್ಲ ಎಂದು ಹೇಳಿದರು.
ಆಪರೇಷನ್ ಕಮಲಕ್ಕಾಗಿ ಶಾಸಕರ
ಹೈಜಾಕ್ ಗೊತ್ತಿಲ್ಲ: ಪರಮೇಶ್ವರ್
ತುಮಕೂರು: ಆಪರೇಷನ್ ಕಮಲಕ್ಕೆ ಯತ್ನ ನಡೆಯುತ್ತಿದೆ. ಶಾಸಕರ ಹೈಜಾಕ್‌ಗೆ ಯತ್ನ ನಡೆಯುತ್ತಿದೆ ಎಂಬ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕಾಶಪ್ಪನವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಆ ಬಗ್ಗೆ ಅವರನ್ನೇ ಕೇಳಬೇಕು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಹೈಕಮಾಂಡ್‌ನಿಂದ 55 ಕಾಂಗ್ರೆಸ್ ಶಾಸಕರ ಟಾರ್ಗೆಟ್ ಕುರಿತ ಕಾಶಪ್ಪನವ ಹೇಳಿಕೆ ಬಗ್ಗೆ ಸುರ್ಜೇವಾಲಾ ಭೇಟಿ ಕುರಿತು ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ರಾಜಕೀಯವಾಗಿ ಭಿನ್ನ ಅಭಿಪ್ರಾಯಗಳು ಇದ್ದೇ ಇರುತ್ತವೆ. ಇದು ಎಲ್ಲ ಪಕ್ಷಗಳಲ್ಲೂ ಸರ್ವೇ ಸಾಮಾನ್ಯ. ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆ ನಡೆಸುತ್ತಿರುವುದು ಕ್ಷೇತ್ರಗಳ ಅಭಿವೃದ್ಧಿ ವಿಚಾರದ ಕುರಿತು ಮಾಹಿತಿ ಪಡೆದುಕೊಳ್ಳಲು ಅಷ್ಟೇ ಎಂದರು.
ಪೊಲೀಸ್ ಇಲಾಖೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಿ ನಂತರ ಆ ಬಗ್ಗೆ ನಿರ್ಧಾರ ಮಾಡಲಾಗುವುದು. ಮೂರು ಪಾಳಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸ್ಥಿತಿಗತಿಯನ್ನೂ ನೋಡಬೇಕಲ್ಲವೆ, ದಿಢೀರನೆ ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂದರು.