ಜಾತಿ ಸಮೀಕ್ಷೆಯಲ್ಲಿ ಮಾದಿಗರು ಪಾಲ್ಗೊಳ್ಳಬೇಕು: ಮಾದಿಗ ಮುಖಂಡರ ಜಾಗೃತಿ ಸಭೆ ನಿರ್ಣಯ

| N/A | Published : Apr 28 2025, 01:33 AM IST / Updated: Apr 28 2025, 05:47 AM IST

ಜಾತಿ ಸಮೀಕ್ಷೆಯಲ್ಲಿ ಮಾದಿಗರು ಪಾಲ್ಗೊಳ್ಳಬೇಕು: ಮಾದಿಗ ಮುಖಂಡರ ಜಾಗೃತಿ ಸಭೆ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ಮೇ 5 ರಿಂದ 17 ರವರೆಗೆ ನಡೆಯುವ ಮನೆ ಮನೆ ಜಾತಿ ಸಮೀಕ್ಷೆಯಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ರಾಜ್ಯ ಮಾದಿಗ ಮುಖಂಡರ ಜಾಗೃತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ಮೇ 5 ರಿಂದ 17 ರವರೆಗೆ ನಡೆಯುವ ಮನೆ ಮನೆ ಜಾತಿ ಸಮೀಕ್ಷೆಯಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ರಾಜ್ಯ ಮಾದಿಗ ಮುಖಂಡರ ಜಾಗೃತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಆಶ್ರಯದಲ್ಲಿ ಭಾನುವಾರ ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾದಿಗ ಮುಖಂಡರ ಜಾಗೃತಿ ಸಭೆಯಲ್ಲಿ ಪ್ರಮುಖವಾಗಿ ಆರು ನಿರ್ಣಯಗಳನ್ನು ಕೈಗೊಂಡು ಅಂಗೀಕರಿಸಲಾಯಿತು.

ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಮೇ 5 ರಿಂದ 17ರವರೆಗೆ ನಡೆಯುವ ಮನೆ ಮನೆಗೆ ಜಾತಿ ಸಮೀಕ್ಷೆಯ ಮಾದಿಗ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರು ಗಣತಿಯಲ್ಲಿ ಭಾಗವಹಿಸಬೇಕು. ಗಣತಿಯಲ್ಲಿ ಭಾಗವಹಿಸಲು ಸಾಧ್ಯವಾಗದವರು ಪ್ರತಿ ಮತಗಟ್ಟೆಗಳಲ್ಲಿ ಮೇ 19ರಿಂದ ರಿಂದ 21ರವರೆಗೆ ಖುದ್ದಾಗಿ ಬಂದು ಮಾಹಿತಿ ನೀಡಬಹುದು. ಒಂದು ವೇಳೆ ಎರಡರಲ್ಲೂ ಭಾಗವಸದೇ ಇರುವವರು ಆನ್‌ಲೈನ್ ಮೂಲಕ ಮೇ 19ರಿಂದ 23ರವರೆಗೆ ಸ್ವಯಂ ಘೋಷಣೆ ಮಾಡಿಕೊಳ್ಳಕು. ಮೇ 5ರಿಂದ 23ರವರೆಗೆ ಮಾದಿಗ ಸಮುದಾಯದವರು ಹಬ್ಬ, ಹರಿದಿನ, ಜಯಂತಿ, ಸಭೆ-ಸಮಾರಂಭ ಮಾಡದೆ ಕಡ್ಡಾಯವಾಗಿ ಆಯಾ ಬೂತ್‌ಮಟ್ಟದಲ್ಲಿ, ಹಳ್ಳಿ-ಕಾಲೋನಿ ಹಾಗೂ ಬಡಾವಣೆಗಳಲ್ಲಿದ್ದು ಗಣತಿದಾರಿಗೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಲ್ಲದೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಶಾಲಾ ಕಾಲೇಜುಗಳಲ್ಲಿ ದಾಖಲಿಸಿಕೊಂಡಿದ್ದರೆ, ರಾಜ್ಯಾದ್ಯಂತ ಗಣತಿದಾರರಿಗೆ ಮಾದಿಗ ಸಮುದಾಯದವರು ಕಲಂ ನಂ.61ರಂತೆ ಮಾದಿಗ ಎಂದೇ ಬರೆಯಿಸಬೇಕು. ಮೇ 5ರ ಒಳಗೆ ರಾಜ್ಯಾದ್ಯಂತ ಮಾದಿಗ ನಾಯಕರ ತಂಡ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ, ಮೈಸೂರು ಭಾಗದಲ್ಲಿ ಪ್ರವಾಸ ಮಾಡಿ ಸಮುದಾಯದ ಸಮೀಕ್ಷೆಯ ಜಾಗೃತಿ ಸಭೆ ನಡೆಸಬೇಕು. ಸಮುದಾಯದಲ್ಲಿ ಸಮೀಕ್ಷೆಯ ಜಾಗೃತಿ ಮೂಡಿಸಲು ಸಚಿವರನ್ನು, ಮಾಜಿ ಮಂತ್ರಿಗಳನ್ನು, ಶಾಸಕರನ್ನು ಹೋರಾಟಗಾರರನ್ನು ಜಿಲ್ಲಾವಾರು ಉಸ್ತುವಾರಿಗಳನ್ನಾಗಿ ನೇಮಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್, ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ.ಬಾಬುರಾವ್ ಮುಡಬಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮಾಯಕೊಂಡ ಶಾಸಕ ಬಸವಂತಪ್ಪ, ಮಾಜಿ ಧಾನಪರಿಷತ್ತಿನ ಸದಸ್ಯ ಆರ್.ಧರ್ಮಸೇನ, ಸಮತಾ ಜೀವನ್ ಸಂಸ್ಥೆಯ ಅಧ್ಯಕ್ಷ ಹೆಚ್.ಆರ್.ತೇಗನೂರ್, ಕೆಪಿಎಸ್‌ಸಿ ಮಾಜಿ ಸದಸ್ಯ ಹೆಚ್.ಎನ್. ದುಗ್ಗಪ್ಪ ಮುಂತಾದವರು ಉಪಸ್ಥಿತರಿದ್ದರು. 

ಸಿದ್ದು, ರೇವಂತ್‌ ರೆಡ್ಡಿ ಅಭಿನಂದಿಸಲು ನಿರ್ಧಾರ:

ಒಳಮೀಸಲಾತಿ ಜಾರಿಗೆ ನಿಖರವಾದಂತಹ ದತ್ತಾಂಶ ಲಭ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗವು ಮಧ್ಯಂತರ ವರದಿ ನೀಡಿದಾಗ ಪರಿಶಿಷ್ಟ ಜಾತಿಯವರಿಗೆ ಸೀಮಿತಗೊಳಿಸಿ ಅವರ ಅಂಕಿ-ಸಂಖ್ಯೆ ನಿಖರವಾಗಿ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸಲು ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆಯಲ್ಲಿ ಎಲ್ಲ ಮುಖಂಡರು ಅಭಿನಂದನೆ ಸಲ್ಲಿಸಿದರು. ಹಾಗೆಯೇ, ಒಳಮೀಸಲಾತಿ ಜಾರಿಯಾದ ನಂತರ ರಾಯಚೂರಿನಲ್ಲಿ ಅದ್ದೂರಿಯಾಗಿ ಜಯಂತ್ಯುತ್ಸವ ಆಚರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರನ್ನು ಅಭಿನಂದಿಸಲು ನಿರ್ಧರಿಸಲಾಗಿದೆ.