ಸೇನೆ ಹಿಂಪಡೆಯಿರಿ: ಭಾರತಕ್ಕೆ ಮಾಲ್ಡೀವ್ಸ್‌ ಸೂಚನೆ

| Published : Nov 19 2023, 01:30 AM IST

ಸಾರಾಂಶ

ಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ನಿಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್‌ ಭಾರತಕ್ಕೆ ಸೂಚಿಸಿದ್ದಾರೆ

ಹಳೆಯ ನೆರವು ಮರೆತ ಅಧ್ಯಕ್ಷ ಮುಯಿಜ್‌ಮಾಲೆ: ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ನಿಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್‌ ಭಾರತಕ್ಕೆ ಸೂಚಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ಆಗಮಿಸಿದ್ದ ಕೇಂದ್ರ ಸಚಿವ ಕಿರಣ್‌ ರಿಜಿಜು ಅವರಿಗೆ ಈ ಸಂದೇಶ ರವಾನಿಸಲಾಗಿದೆ.

ಈ ಹಿಂದೆ ಸುನಾಮಿ, ಆಂತರಿಕ ಸಂಘರ್ಷ ಮೊದಲಾದ ಸಂದರ್ಭಗಳಲ್ಲಿ ಭಾರತವೇ ಮೊದಲನೆಯದಾಗಿ ಮಾಲ್ಡೀವ್ಸ್‌ಗೆ ವಿವಿಧ ರೀತಿಯ ನೆರವು ನೀಡಿತ್ತು. ಆದರೆ ಅದನ್ನು ಮರೆತಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ, ಚೀನಾ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಿಂದೂ ಮಹಾಸಾಗರದ ಆಯಕಟ್ಟಿನ ಪ್ರದೇಶದಲ್ಲಿರುವ ಮಾಲ್ಡೀವ್ಸ್‌ಗೆ ಭಾರತ ಹಲವು ಸೇನಾ ಕಾಪ್ಟರ್, ಕಣ್ಗಾವಲು ವಿಮಾನಗಳನ್ನು ಉಡುಗೊರೆಯಾಗಿ ನೀಡಿದೆ. ಇದರ ನಿರ್ವಹಣೆಗೆಂದೇ ಅಂದಾಜು 75 ಯೋಧರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ನೆರೆ ದೇಶದ ಸೇನೆ ಇರುವಿಕೆ ಭದ್ರತೆಗೆ ಅಪಾಯ ಎಂಬ ಕಾರಣ ನೀಡಿ ಇದೀಗ ಯೋಧರನ್ನು ಹೊರ ಹಾಕುವ ಕೆಲಸವನ್ನು ಮಾಲ್ಡೀವ್ಸ್‌ ಮಾಡುತ್ತಿದೆ.