ಸಾರಾಂಶ
ಮಲ್ಲಿಕಾರ್ಜುನ ಖರ್ಗೆ ಅವರು ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಖರ್ಗೆ ಅವರ ಮುಂದಿನ ರಾಜಕೀಯ ಭವಿಷ್ಯ ಅವರೇ ನಿರ್ಧಾರ ಮಾಡುತ್ತಾರೆ ಎಂದು ಮಾರ್ಮಿಕವಾಗಿ ಮಾತುಗಳನ್ನು ಆಡಿದ್ದಾರೆ.
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಖರ್ಗೆ ಅವರ ಮುಂದಿನ ರಾಜಕೀಯ ಭವಿಷ್ಯ ಅವರೇ ನಿರ್ಧಾರ ಮಾಡುತ್ತಾರೆ. ಅವರ ನಿರ್ಧಾರವನ್ನು ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರು ತನ್ನಿಂತಾನೇ ಒಪ್ಪುತ್ತಾರೆ’ ಎಂದು ಮಾರ್ಮಿಕವಾಗಿ ಮಾತುಗಳನ್ನು ಆಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರೂ ಮುಖ್ಯಮಂತ್ರಿ ಸ್ಥಾನಕ್ಕೆ ದಾವೆದಾರ ಆಗಲಿದ್ದಾರೆಯೇ ಎಂಬ ಕುತೂಹಲ ಹುಟ್ಟು ಹಾಕಿದೆ.
ಕಲಬುರಗಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ‘ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸ್ತುತ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್ ಅವರು ಇದ್ದಂತಹ (ಎಐಸಿಸಿ ಅಧ್ಯಕ್ಷ) ಸ್ಥಾನದಲ್ಲಿದ್ದಾರೆ. ಅವರ ಮುಂದಿನ ರಾಜಕೀಯ ಭವಿಷ್ಯ ಏನೇ ಇದ್ದರೂ ಅವರೇ ನಿರ್ಧಾರ ಮಾಡುತ್ತಾರೆ. ಅವರು ಏನೇ ತೀರ್ಮಾನ ಅಥವಾ ನಿರ್ಧಾರ ತೆಗೆದುಕೊಂಡರೂ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಆಟೋ ಮ್ಯಾಟಿಕ್ (ತನ್ನಿಂತಾನೇ) ಆಗಿ ಒಪ್ಪುತ್ತಾರೆ. ಹೀಗಾಗಿ ಅವರ ರಾಜಕೀಯ ಭವಿಷ್ಯವನ್ನು ಅವರೇ ನಿರ್ಧರಿಸುತ್ತಾರೆ’ ಎಂದು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲ, ಈ ಹೇಳಿಕೆ ಯಾವ ಸಂದೇಶ ನೀಡುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನೀವು ಯಾವ ರೀತಿ ಬರೆಯುತ್ತೀರೋ ಅದೇ ಸಂದೇಶ ಹೋಗುತ್ತದೆ’ ಎಂದು ಪ್ರಿಯಾಂಕ್ ಖರ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಚರ್ಚೆ ಆಗುತ್ತಿರುವ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.
ದಲಿತ ಸಿಎಂ ಕೂಗು ಮುನ್ನೆಲೆಗೆ:
ರಾಜ್ಯದಲ್ಲಿ ಬಹುವರ್ಷಗಳಿಂದ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬರುತ್ತಿದೆ. ಆದರೆ ಎಂದೂ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಥವಾ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಬೇಸರ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರಲಿಲ್ಲ. ಇದೀಗ ಮೊದಲ ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಯಿಂದಾಗಿ ಮತ್ತೆ ದಲಿತ ಮುಖ್ಯಮಂತ್ರಿ ಕೂಗು ರಾಜ್ಯದಲ್ಲಿ ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಶವಂತಪುರ ಕ್ಷೇತ್ರಕ್ಕೆ ರುದ್ರೇಶ್ ಮುಂದಿನ ಬಿಜೆಪಿ ಅಭ್ಯರ್ಥಿ ಎಂದಿದ್ದ ಬಿಎಸ್‌ವೈ
ಈ ಹಿಂದೆ ನಾನು ಸಿಎಲ್‌ಪಿ ಅಧ್ಯಕ್ಷನಾಗಿ ಶ್ರಮಿಸಿದ್ದೆ, ಆದರೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದರು ಎಂದಿದ್ದ ಮಲ್ಲಿಕಾರ್ಜುನ ಖರ್ಗೆ
ಅದರ ಬೆನ್ನಲ್ಲೇ ‘ಖರ್ಗೆ ತಮ್ಮ ರಾಜಕೀಯ ಭವಿಷ್ಯ ತಾವೇ ನಿರ್ಧಾರ ಮಾಡುತ್ತಾರೆ’ ಎಂದ ಅವರ ಪುತ್ರ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ಸಂಚಲನ. ಖರ್ಗೆ ಕೂಡಾ ಸಿಎಂ ಹುದ್ದೆಗೆ ದಾವೇದಾರರಾ ಎಂಬ ಚರ್ಚೆ