ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಮಾ.೨೫ರ ನಂತರ ತೀರ್ಮಾನ ಪ್ರಕಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಾತ್ಯತೀತ ಜನತಾದಳದ ವತಿಯಿಂದ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನನಗೆ ಈಗಾಗಲೇ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಈಗ ಮಾ.೨೧ರಂದು ಮತ್ತೊಮ್ಮೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಅದಕ್ಕಾಗಿ ಮಾ.೧೯ರಂದೇ ಚೆನ್ನೈ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಅಮೆರಿಕದಿಂದ ಇಬ್ಬರು ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಲು ಬರುತ್ತಿದ್ದಾರೆ ಎಂದು ಕಾರ್ಯಕರ್ತರಿಗೆ ವಿವರಿಸಿದರು.
ಹೃದಯ ಶಸ್ತ್ರಚಿಕಿತ್ಸೆಯಿಂದ ನಿಮ್ಮ ಜೀವಕ್ಕೆ ಯಾವುದೇ ಅಪಾಯವಾಗುವುದಿಲ್ಲ. ಮುಂದಿನ ೧೫ ರಿಂದ ೧೮ ವರ್ಷ ಕಾಲ ಆರೋಗ್ಯವಾಗಿರುತ್ತೀರೆಂದು ಖಚಿತ ಭರವಸೆ ನೀಡಿದ್ದಾರೆ. ಜ್ಯೋತಿಷ್ಯದ ಪ್ರಕಾರ ನಾನು ೮೦ ವರ್ಷದವರೆಗೆ ಬದುಕುತ್ತೇನೆ ಎಂದು ಹೇಳಿದ್ದಾರೆ. ಜನರ ಆಶೀರ್ವಾದವಿರುವ ಈ ಜೀವ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಈ ದೇಹ ಭೂಮಿಗೆ ಹೋಗಬೇಕಾದರೆ ಜನರ ಋಣ ತೀರಿಸಿಯೇ ಹೋಗಬೇಕು ಎಂದರು.ಹೃದಯ ಶಸ್ತ್ರಚಿಕಿತ್ಸೆ ಬಳಿಕ ಬಂದು ಮತ್ತೊಮ್ಮೆ ಜಿಲ್ಲಾ ನಾಯಕರೊಂದಿಗೆ ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತೇವೆ ಎಂದಾಗ, ನೀವೇ ಮಂಡ್ಯ ಅಭ್ಯರ್ಥಿಯಾಗಬೇಕು ಇಲ್ಲವೇ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎಂಬ ಕೂಗು ಕಾರ್ಯಕರ್ತರಿಂದ ಬಂದಾಗ, ನಿಮ್ಮ ಭಾವನೆಗಳಿಗೆ ನಾವು ಸ್ಪಂದಿಸುತ್ತೇವೆ. ನಿಮ್ಮ ಆಸೆಗೆ ಧಕ್ಕೆ ತರುವುದಿಲ್ಲ ಎಂದು ೨೦೧೯ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಕುತ್ತಿಗೆ ಕೊಯ್ದವರಿಗೆ ಜಿಲ್ಲೆಯ ಜನರು ಉತ್ತರ ಕೊಡಬೇಕು. ಆ ಶಕ್ತಿ ಇರುವುದು ನಿಮ್ಮಲ್ಲಿ ಮಾತ್ರ ಎಂದು ತಿಳಿಸಿದರು.