ಗಾಂಧಿ ನಗರದಲ್ಲಿ ಮನ್ಸೂರ್ ಪ್ರಚಾರ ಅಬ್ಬರ; ಪ್ರಚಾರಕ್ಕೆ ಜೊತೆಯಾದ ಸಚಿವ ದಿನೇಶ್ ಗುಂಡೂರಾವ್

| Published : Apr 17 2024, 02:08 AM IST

ಗಾಂಧಿ ನಗರದಲ್ಲಿ ಮನ್ಸೂರ್ ಪ್ರಚಾರ ಅಬ್ಬರ; ಪ್ರಚಾರಕ್ಕೆ ಜೊತೆಯಾದ ಸಚಿವ ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಮಂಗಳವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಮಂಗಳವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು.

ಅಂಗಡಿಗಳು, ಮನೆಗಳಿಗೆ ತೆರಳಿ ಮತಯಾಚನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಕೋರಿದರು. ನೂರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಓಕಳಿಪುರ, ಸುಭಾಷ್‌ನಗರ, ಮೆಜೆಸ್ಟಿಕ್, ರಾಮಚಂದ್ರಪಾಳ್ಯ, ಶ್ರೀರಾಮಪುರ ಸೇರಿದಂತೆ ಹಲವೆಡೆ ಭರ್ಜರಿ ರೋಡ್ ಶೋ ನಡೆಸಿದ ಮನ್ಸೂರ್ ಅಲಿ ಖಾನ್, ತಮ್ಮ ಗೆಲುವಿಗೆ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಮೆಜೆಸ್ಟಿಕ್ ಬೀದಿಗಳು, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ರಸ್ತೆ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಬೆಂಬಲ ಕೋರಿದರು. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಉತ್ತಮ ಆಡಳಿತ, ಬೆಂಗಳೂರಿನ ಹಿತಕ್ಕಾಗಿ ನಾಗರಿಕರು ಯೋಚಿಸಿ ಮತದಾನ ಮಾಡಬೇಕು. ಕಾಂಗ್ರೆಸ್ ಪಕ್ಷವು ಸರ್ವ ಜನಾಂಗದ ಅಭಿವೃದ್ಧಿ, ಏಳಿಗೆಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರಿನ ಅಭಿವೃದ್ಧಿ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಮನ್ಸೂರ್ ಖಾನ್ ಹೇಳಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಇದರಿಂದ ರಾಜ್ಯದ ಲಕ್ಷಾಂತರ ಕುಟುಂಬಗಳು, ಕೊಟ್ಯಂತರ ಜನರಿಗೆ ಅನುಕೂಲವಾಗಿದೆ. ಕಾಂಗ್ರೆಸ್ ಎಂದರೆ ಅಭಿವೃದ್ಧಿ ಮತ್ತು ಬಡ ಜನರ ಏಳಿಗೆಯಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಸಾಧಿಸಿರುವ ಅಭಿವೃದ್ಧಿಯನ್ನು ರಾಷ್ಟ್ರಮಟ್ಟದಲ್ಲೂ ಸಾಧಿಸುತ್ತೇವೆ ಎಂದರು.

ಉಪನಗರ ರೈಲು,

ಮೆಟ್ರೋ ಯೋಜನೆ

ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಸಮೂಹ ಸಾರಿಗೆಯಾಗಿರುವ ಉಪ ನಗರ ರೈಲು ಮತ್ತು ಮೆಟ್ರೋ ರೈಲು ಯೋಜನೆಗಳು ಪರಿಣಾಮಕಾರಿಯಾಗಿವೆ. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬೆಂಗಳೂರು ಉಪ ನಗರ ರೈಲು ಮತ್ತು ಮೆಟ್ರೋ ಯೋಜನೆಗೆ ಇನ್ನಷ್ಟು ವೇಗ ನೀಡಲಾಗುತ್ತದೆ. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಮುಗಿಸಿ ರೈಲು ಸಂಚಾರ ಆರಂಭಿಸುವ ಮೂಲಕ ನಗರದ ಜನರ ಓಡಾಟ ಅನುಕೂಲ ಮಾಡಿಕೊಡಲಾಗುತ್ತದೆ. ಕಡಿಮೆ ದರದಲ್ಲಿ, ವೇಗದ ಪ್ರಯಾಣ ಸಾಧ್ಯವಾಗಲಿದೆ. ದಟ್ಟಣೆಯು ಕಡಿಮೆಯಾಗುತ್ತದೆ ಎಂದು ಮನ್ಸೂರ್‌ ಹೇಳಿದರು.

ಈ ವೇಳೆ ಕ್ಷೇತ್ರದ ಬ್ಲಾಕ್‌ ಅಧ್ಯಕ್ಷರು, ವಾರ್ಡ್‌ ಅಧ್ಯಕ್ಷರು, ಕಾಂಗ್ರೆಸ್‌ ನಾಯಕರು, ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಮಿಕರ ಜೊತೆ ಸಂವಾದ: ಮೆಜೆಸ್ಟಿಕ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಮನ್ಸೂರ್ ಅಲಿ ಖಾನ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು.ಬಾಕ್ಸ್...

ಎಲ್ಲೆಲ್ಲಿ ಪ್ರಚಾರಶ್ರೀರಾಮಪುರ, ಎನ್.ಪಿ.ಬ್ಲಾಕ್, ಸ್ವತಂತ್ರ ಪಾಳ್ಯ, ಕ್ರಿಶ್ಚಿಯನ್ ಕಾಲೋನಿ, ಕೋದಂಡರಾಮ ಭಜನ ಮಂದಿರ, ಹನುಮಂತಪುರಂ, ವಿವೇಕಾನಂದ ಕಾಲೋನಿ, ಲಕ್ಷ್ಮಣ್ ರಾವ್ ನಗರ, ವರದಪ್ಪ ಫ್ಯಾಕ್ಟರಿ, ಸೆಲ್ವ ನಗರ, ನಾಗೇಂದ್ರ ಗಾರ್ಡನ್, ವಾಟರ್ ಪ್ಲಾಂಟ್ ರಸ್ತೆ, ಅಂಬರೀಶ್ ಸರ್ಕಲ್, ಮೈನಾರಿಟಿ ಗಲ್ಲಿ ಮತ್ತು ರಾಮಚಂದ್ರಪುರದಲ್ಲಿ ಪ್ರಚಾರ ಕಾರ್ಯ ನಡೆಸಿದರು.