ಶಾಸಕ ರಿಜ್ವಾನ್‌ ಜೊತೆ ಮನ್ಸೂರ್‌ ರೋಡ್‌ ಶೋ

| Published : Apr 18 2024, 02:18 AM IST / Updated: Apr 18 2024, 05:13 AM IST

ಸಾರಾಂಶ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿಖಾನ್‌ ಬುಧವಾರ ಶಿವಾಜಿನಗರ, ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಭರ್ಜರಿ ರೋಡ್‌ ಶೋ, ಚುನಾವಣಾ ಪ್ರಚಾರದ ಮೂಲಕ ಮತಯಾಚಿಸಿದರು.

 ಬೆಂಗಳೂರು :  ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿಖಾನ್‌ ಬುಧವಾರ ಶಿವಾಜಿನಗರ, ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಭರ್ಜರಿ ರೋಡ್‌ ಶೋ, ಚುನಾವಣಾ ಪ್ರಚಾರದ ಮೂಲಕ ಮತಯಾಚಿಸಿದರು.

ಬೆಳಗ್ಗೆ ಮರ್ಫಿಟೌನ್‌ನಲ್ಲಿರುವ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ಥಳೀಯ ಕಾಂಗ್ರೆಸ್‌ ನಾಯಕರೊಂದಿಗೆ ಚುನಾವಣಾ ಪ್ರಚಾರ ಆರಂಭಿಸಿದರು. ಕ್ಷೇತ್ರದ ಜೈರಾಜ್‌ ನಗರ, ಹಳೆ ತಿಪ್ಪಸಂದ್ರ, ಇಂದಿರಾನಗರ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮತಯಾಚಿಸಿದರು.

ಮತಯಾಚನೆ ವೇಳೆ ಅವರು, ತಮಗೆ ಒಂದು ಬಾರಿ ಅವಕಾಶ ನೀಡಿದರೆ ಇಡೀ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುತ್ತೇನೆ. ಕೇಂದ್ರದಿಂದ ಅತಿ ಹೆಚ್ಚಿನ ಅನುದಾನ ತಂದು ಹೊಸ ಹೊಸ ಯೋಜನೆಗಳನ್ನು ಬೆಂಗಳೂರಿಗೆ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ವಿವಿಧ ದೇವಾಲಯ, ಚರ್ಚ್‌, ಮಸೀದಿಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಪಕ್ಷದ ಡಿಸಿಸಿ (ಪೂರ್ವ) ಅಧ್ಯಕ್ಷ ನಂದಕುಮಾರ್‌, ಸಿವಿ ರಾಮನ್‌ ನಗರ ಕ್ಷೇತ್ರದ ಎಸ್‌.ಆನಂದ್‌ಕುಮಾರ್‌, ವಿವಿಧ ಬ್ಲಾಕ್‌ ಅಧ್ಯಕ್ಷ, ವಾರ್ಡ್‌ ಅಧ್ಯಕ್ಷರು ಹಾಗೂ ಹಲವು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಮನ್ಸೂರ್‌ ಅವರಿಗೆ ಸಾಥ್‌ ನೀಡಿದರು.

ಶಾಸಕ ರಿಜ್ವಾನ್‌ ಜೊತೆ ರೋಡ್‌ ಶೋ:

ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯ ಸೇರಿದಂತೆ ಹಲವೆಡೆ ಸ್ಥಳೀಯ ಶಾಸಕ ರಿಜ್ವಾನ್‌ ಅರ್ಷದ್‌ ಹಾಗೂ ಇನ್ನಿತರೆ ನಾಯಕರೊಂದಿಗೆ ರೋಡ್‌ ಶೋ ನಡೆಸುವ ಮೂಲಕ ಪ್ರಚಾರ ನಡೆಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಭಾವ, ಸಯೀದ್‌ ಅಹಮದ್‌, ಮುಖಂಡರಾದ ಬರ್ತೋಲೋಮ್‌, ಆಮ್‌ ಆದ್ಮಿ ಪಕ್ಷದ ಪ್ರಕಾಶ್‌, ವಿವಿಧ ಬ್ಲಾಕ್‌ ಕಾಂಗ್ರೆಸ್‌ನ ಸುಮತಾ ಧನಂಜಯ, ಸುರೇಶ್‌ ಬಾಬು ಮತ್ತಿತರರು ಪ್ರಚಾರದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಮನ್ಸೂರ್‌ ಅಲಿಖಾನ್‌, ಕಾಂಗ್ರೆಸ್‌ ಪಕ್ಷ ಯಾವುದೇ ಜಾತಿ, ಧರ್ಮ, ವರ್ಗದ ತಾರತಮ್ಯ ಮಾಡದೆ ಎಲ್ಲ ಜನರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ, ಸಮಾಜದಲ್ಲಿ ಶಾಂತಿ, ಸಹಬಾಳ್ವೆಯಿಂದ ಜನರು ಜೀವನ ಸಾಗಿಸಬೇಕೆಂಬ ಸಿದ್ಧಾಂತ ಹೊಂದಿರುವ ಪಕ್ಷ. ದೇಶದ ಅಭಿವೃದ್ಧಿಯೊಂದೇ ನಮ್ಮ ಗುರಿ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದ ತಮ್ಮನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸುಳ್ಳೇ ಬಿಜೆಪಿಯವರ ಮನೆ ದೇವರು: ರಿಜ್ವಾನ್‌

ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ಬಿಜೆಪಿಯವರು ಕಳೆದ 10 ವರ್ಷಗಳ ಆಡಳಿತದಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕಾಂಗ್ರೆಸ್‌ ರೀತಿ ಹ ಒಂದೇ ಒಂದು ಜನ ಪರ ಯೋಜನೆಗಳನ್ನು ರೂಪಿಸಿಲ್ಲ. ಬರೀ ಸುಳ್ಳು ಹೇಳಿಕೊಂಡು ಜನರನ್ನು ಮರಳು ಮಾಡಿಕೊಂಡು ಅಧಿಕಾರ ಅನುಭವಿಸಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ನೀಡಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಇಂತಹವರಿಗೆ ಮತ್ತೆ ಅಧಿಕಾರ ನೀಡಬೇಕೆ ಎಂಬುದನ್ನು ಮತದಾರರು ಯೋಚಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆಯುವ ಸರ್ಕಾರ. ಜನರ ಕಷ್ಟಗಳಿಗೆ ನಿರಂತರವಾಗಿ ಸ್ಪಂಧಿಸುವ ಸರ್ಕಾರ. ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ 5 ಕೋಟಿಗೂ ಹೆಚ್ಚು ಜನ ಅನುಕೂಲ ಪಡೆಯುತ್ತಿದ್ದಾರೆ. ಬಡವರ ಬದುಕು ಉತ್ತಮಗೊಳ್ಳುತ್ತಿದೆ. ಮನ್ಸೂರ್‌ ಅಲಿಖಾನ್‌ ಅವರನ್ನು ಗೆಲ್ಲಿಸಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಬೆಂಬಲ ನೀಡಿ ಎಂದು ಮತದಾರರಿಗೆ ಕೋರಿದರು.