ನಾನು, ಡಿಕೆಶಿ ಒಗ್ಗಟ್ಟಾಗಿದ್ದೇವೆ : ಸಿಎಂ ಸಿದ್ದರಾಮಯ್ಯ

| N/A | Published : Jul 01 2025, 01:48 AM IST / Updated: Jul 01 2025, 06:26 AM IST

ಸಾರಾಂಶ

ನಾನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವೆ ತಂದಾಕುವ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ. ನಾವಿಬ್ಬರು ಒಟ್ಟಾಗಿಯೇ ಇದ್ದೇವೆ   ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

ಮೈಸೂರು/ ಮಂಡ್ಯ :  ನಾನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವೆ ತಂದಾಕುವ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ. ನಾವಿಬ್ಬರು ಒಟ್ಟಾಗಿಯೇ ಇದ್ದೇವೆ. ನಮ್ಮ ಸರ್ಕಾರ 5 ವರ್ಷ ಕಲ್ಲು ಬಂಡೆ ರೀತಿ ಇರುತ್ತದೆ. ನಮ್ಮ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ ಮಾಧ್ಯಮ ಕ್ಯಾಮೆರಾಗಳ ಮುಂದೆ ಡಿಕೆಶಿ ಕೈ ಹಿಡಿದು ಮೇಲೆತ್ತುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.

ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆ ಬಾಗಿನ ಅರ್ಪಿಸಲು ಸೋಮವಾರ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಡಿ.ಕೆ‌. ಶಿವಕುಮಾರ್ ಕೈ ಹಿಡಿದು ಎತ್ತಿ ನಾವು ಚೆನ್ನಾಗಿದ್ದೇವೆ ಎಂದು ಮಾಧ್ಯಮಕ್ಕೆ ತೋರಿಸಿದ ಅವರು, ನಮ್ಮ ಬಗ್ಗೆ ಮಾತನಾಡುವ ಶ್ರೀರಾಮಲು ಎಷ್ಟು ಚುನಾವಣೆ ಸೋತಿದ್ದಾನೆ ಹೇಳಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಅನಿಸಿದೆ ಅಲ್ವಾ. ಅದೇ ಸತ್ಯ ಎಂದರು.

ನಂತರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್‌) ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸೋತ ಗಿರಾಕಿಗಳು ಸರ್ಕಾರ ಬಿದ್ದುಹೋಗುತ್ತದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ನನಗೂ ಶಿವಕುಮಾರ್ ಅವರಿಗೂ ಸರಿಯಿಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಒಟ್ಟಾಗಿ ಗಟ್ಟಿಯಾಗಿದ್ದೇವೆ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿ ಗಟ್ಟಿಯಾಗಿರುತ್ತದೆ. 2028ರಲ್ಲೂ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯಾವ ಕಾರಣಕ್ಕೂ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಇದೇ ವೇಳೆ ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುವ ಬಿಜೆಪಿಯವರು ದಿವಾಳಿ ಆಗಿದ್ದರೆ 25000 ಕೋಟಿ ಎಲ್ಲಿಂದ ಬಂದಿತು ಎಂದು ನಾಡಿನ ಜನರಿಗೆ ಉತ್ತರ ನೀಡುವಂತೆ ಸವಾಲು ಹಾಕಿದರು.

ವಿಪಕ್ಷದವರು ಮೂಢಾತ್ಮರು:ಸಿದ್ದರಾಮಯ್ಯ ಅವರ ಕಾಲುಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ ಎಂದು ವಿರೋಧಪಕ್ಷಗಳು ಟೀಕಿಸಿದ್ದವು. ಈಗ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗುತ್ತಿದೆ. ವಿರೋಧಪಕ್ಷಗಳು ಮೂಢಾತ್ಮರು. ಈಗ ಏನು ಹೇಳುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ-ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ. ಬಿತ್ತನೆ ಬೀಜ ಕೇಳಿದವರ ಮೇಲೆ ಗೋಲಿಬಾರ್ ಮಾಡಿದ್ದೇವಾ ಎಂದು ಪ್ರಶ್ನಿಸಿದರು.

ನಾಯಕತ್ವ ಬದಲಾವಣೆ ಊಹಾಪೋಹ ಮಾತ್ರ

 ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹ. ಶಾಸಕರ ಜತೆಗಿನ ಸಭೆ ಕೇವಲ ಸಂಘಟನಾತ್ಮಕ ಚಟುವಟಿಕೆ ಮಾತ್ರ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ಸಂಬಂಧ ಶಾಸಕರ ಅಭಿಪ್ರಾಯ ಕೇಳುತ್ತಿದ್ದೇವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ವಿಚಾರ ಸೃಷ್ಟಿ ಮಾತ್ರ ಎಂದು ಸ್ಪಷ್ಪಪಡಿಸಿದರು.

Read more Articles on