ಮಾಲೂರು/ನವದೆಹಲಿ: ಸದ್ಯಕ್ಕೆ ಸಚಿವರ ಖಾತೆ ಹಂಚಿಕೆ ನಡೆಯಲಿದೆ, ವಿಧಾನಸಭೆಯ ಮುಂಗಾರು ಅಧಿವೇಶನ ಮುಗಿದ ನಂತರ ಸಚಿವರ ಸ್ಥಾನ ಬದಲಾವಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ ಮತ್ತು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕುರಿತಂತೆ ಹೈಕಮಾಂಡ್‌ ಜೊತೆ ಚರ್ಚಿಸಲು ದೆಹಲಿಗೆ ತೆರಳಿದ್ದ ಡಿಕೆಶಿ, ಸೋಮವಾರ ರಾಜ್ಯಕ್ಕೆ ವಾಪಸ್ಸಾಗಿ ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಂಡರು. ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿ, ದೆಹಲಿ ಪ್ರವಾಸದ ವೇಳೆ ಹೈಕಮಾಂಡ್‌ ನಾಯಕರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಸಚಿವರ ಸ್ಥಾನ ಬದಲಾವಣೆ ಬಗ್ಗೆ ಇಲ್ಲಿ ಬಹಿರಂಗವಾಗಿ ಚರ್ಚೆ ಮಾಡೋದಕ್ಕೆ ಆಗಲ್ಲ. ಸಚಿವರ ಸ್ಥಾನ ಬದಲಾವಣೆ ಏನಿದ್ದರೂ ಅಧಿವೇಶನದ ಬಳಿಕ ಎಂದರು.

ಖರ್ಗೆ, ವೇಣು, ಸುರ್ಜೇವಾಲ ಜೊತೆ ಚರ್ಚೆ:

ಸಂಪುಟ ವಿಸ್ತರಣೆ ಬೆನ್ನಲ್ಲೇ ಉದ್ಭವಿಸಿದ ಕಾಂಗ್ರೆಸ್‌ ನಾಯಕರ ಬಂಡಾಯದ ಹಿನ್ನೆಲೆಯಲ್ಲಿ ಭಾನುವಾರ ದೆಹಲಿಗೆ ತೆರಳಿದ್ದ ಸಿಎಂ, ಸಂಪುಟದ ಅಸಮಾಧಾನಗಳ ಕುರಿತು ಹೈಕಮಾಂಡ್‌ ನಾಯಕರಿಗೆ ವರದಿ ಒಪ್ಪಿಸಿದರು. ಭಾನುವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಒಂದೂವರೆ ತಾಸು, ಬಳಿಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆ ಒಂದು ತಾಸು ಮಾತುಕತೆ ನಡೆಸಿದರು. ಮಾತುಕತೆ ವೇಳೆ, ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆ, ನೂತನ ಸಚಿವರಿಗೆ ಖಾತೆ ಹಂಚಿಕೆ, ಖಾಲಿ ಉಳಿದಿರುವ ಒಂದು ಸ್ಥಾನ ತುಂಬುವುದು, ಖಾತೆ ಅದಲು-ಬದಲು, ಸಭಾಪತಿ ಆಯ್ಕೆ ವಿಚಾರ, ಸಚಿವ ನಾಗೇಂದ್ರ ಪ್ರಕರಣ, ಸಿದ್ದರಾಮಯ್ಯ ಅವರ ಬೇಡಿಕೆ ವಿಷಯಗಳು ಚರ್ಚೆಯಾದವು.


ಸೋಮವಾರ ಬೆಳಗ್ಗೆ 7 ಗಂಟೆ ವೇಳೆಗೆ ದೆಹಲಿಯ ಲೋದಿ ಎಸ್ಟೇಟ್‌ನಲ್ಲಿರುವ ವೇಣುಗೋಪಾಲ ಅವರ ನಿವಾಸಕ್ಕೆ ತೆರಳಿ ಸಂಪುಟ ಅಸಮಾಧಾನ, ನಾಗೇಂದ್ರ ಪ್ರಕರಣ, ಖಾತೆ ಹಂಚಿಕೆ ಕುರಿತು ಮಾಹಿತಿ ಹಂಚಿಕೊಂಡರು. ಈ ವೇಳೆ, ಸಚಿವ ಮುನಿಯಪ್ಪ ಅವರನ್ನು ಕರೆಸಿಕೊಂಡ ಡಿಕೆಶಿ ಮತ್ತು ವೇಣುಗೋಪಾಲ್‌, ಸಚಿವರ ಬದಲಾವಣೆ ಕುರಿತು ಚರ್ಚೆ ನಡೆಸಿದರು.

ವೇಣುಗೋಪಾಲ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಖರ್ಗೆಯವರು ನಮ್ಮ ಪಕ್ಷದ ವರಿಷ್ಠರು, ಹೈಕಮಾಂಡ್. ಹಾಗಾಗಿ, ಅವರನ್ನು ಭೇಟಿಯಾಗಿದ್ದೆ. ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅವರನ್ನು ಅಭ್ಯರ್ಥಿಯಾಗಿಸಲು ಸೂಚನೆ ನೀಡಿದ್ದಾರೆ ಎಂದರು. ಸಂಪುಟದಲ್ಲಿ ಮಹಿಳೆಗೆ ಒಂದು ಸ್ಥಾನ ಕೊಡಲೇಬೇಕು, ಕೊಡ್ತಿವಿ. ಅಷ್ಟು ಅರ್ಜೆಂಟ್‌ ಇಲ್ಲ ಎಂದರು.

ಸಂಪುಟ ವಿಳಂಬ ಕುರಿತ ಬಿಜೆಪಿಯವರ ಟೀಕೆ ಕುರಿತು ಪ್ರತಿಕ್ರಿಯಿಸಿ, ಬಿಎಸ್ ವೈ ಅವರಿದ್ದಾಗ ಎಷ್ಟು ದಿನಕ್ಕೆ ಸಂಪುಟ ರಚನೆ ಆಯ್ತು?. ನಾಳೆಯೇ ಖಾತೆ ಹಂಚಿಕೆ ಮಾಡಬೇಕು ಅಂತ ಏನೂ ಇಲ್ಲ. ಬೇಕಿದ್ದರೆ, ನಾನೊಬ್ಬನೇ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ಕೊಡ್ತಿನಿ ಎಂದರು.

ಸಚಿವ ನಾಗೇಂದ್ರ ಮೇಲಿನ ಇ.ಡಿ.ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಯಾರ ಮೇಲೆ ಕೇಸ್ ಇಲ್ಲ ಹೇಳಿ ನೋಡೋಣ?. ನಾನು ಜಾಮೀನು ತಂಗೊಡಿಲ್ವಾ?, ಕುಮಾರಸ್ವಾಮಿ ಅವರು ಜಾಮೀನಿನ ಮೇಲೆ ಇಲ್ವಾ?. ವಿಪಕ್ಷದವರಿಗೆ ಮಾತಾಡಲು ಒಂದು ವಿಷಯ ಬೇಕು, ಅದಕ್ಕೆ ಆರೋಪ ಮಾಡುತ್ತಿದ್ದಾರೆ ಅಷ್ಟೆ ಎಂದು ತಿರುಗೇಟು ನೀಡಿದರು.

ಇತ್ತೀಚಿನ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಆಕ್ರೋಶ, ಬಂಡಾಯ

ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೆಲವೊಂದು ಬದಲಾವಣೆಗೆ ಕೇಂದ್ರ, ರಾಜ್ಯ ನಾಯಕರ ಒಲವು

ಇದೇ ವಿಷಯ ಚರ್ಚೆಗೆ ಭಾನುವಾರ ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾಗಿದ್ದ ಮುಖ್ಯಮಂತ್ರಿ ಡಿಕೆಶಿ

ಎಐಸಿಸಿ ಅಧ್ಯಕ್ಷ ಖರ್ಗೆ, ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ಸುರ್ಜೇವಾಲ ಜೊತೆ ಸಿಎಂ ಚರ್ಚೆ

ಈ ವೇಳೆ ಬಂಡಾಯ, ಬದಲಾವಣೆ, ಖಾತೆ ಹಂಚಿಕೆ, ಬಾಕಿ ಸ್ಥಾನ ತುಂಬುವ ಬಗ್ಗೆ ಸಮಾಲೋಚನೆ

ಈ ವೇಳೆ ಸಿಎಂರಿಂದ ಮಾಹಿತಿ ಪಡೆದು ಅಂತಿಮ ನಿರ್ಧಾರ ಬಾಕಿ ಉಳಿಸಿಕೊಂಡ ದಿಲ್ಲಿ ನಾಯಕರು

ಹೀಗಾಗಿ ಸದ್ಯಕ್ಕೆ ಸಚಿವರ ಖಾತೆ ಬದಲಾವಣೆ ವಿಳಂಬ, ಅಧಿವೇಶನ ಬಳಿಕ ಬದಲಾವಣೆಗೆ ನಿರ್ಧಾರ