ಜಾತಿ ಗಣತಿ ವರದಿ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಜಾತಿ ಪರ ವಾದ ಮಂಡನೆಗೆ ಸಚಿವರ ಸಿದ್ಧತೆ

| N/A | Published : Apr 16 2025, 01:45 AM IST / Updated: Apr 16 2025, 10:32 AM IST

Janata Curfew Vidhansoudha

ಸಾರಾಂಶ

ಜಾತಿ ಗಣತಿ ವರದಿ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಸಮುದಾಯಗಳ ಹಿತ ಕಾಪಾಡುವಂತೆ ಸ್ವಜಾತಿಯ ಸಚಿವರ ಮೇಲೆ ಸಮುದಾಯಗಳು ಒತ್ತಡ ನಿರ್ಮಾಣ ಮಾಡಿದ್ದು, ಇದರ ಪರಿಣಾಮ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂಕಿ-ಅಂಶ ಸಹಿತ ಸಚಿವರು ವಾದ ಮಂಡನೆಗೆ ಇಳಿಯುವ ಲಕ್ಷಣಗಲು ಕಂಡು ಬಂದಿವೆ.

 ಬೆಂಗಳೂರು :  ಜಾತಿ ಗಣತಿ ವರದಿ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಸಮುದಾಯಗಳ ಹಿತ ಕಾಪಾಡುವಂತೆ ಸ್ವಜಾತಿಯ ಸಚಿವರ ಮೇಲೆ ಸಮುದಾಯಗಳು ಒತ್ತಡ ನಿರ್ಮಾಣ ಮಾಡಿದ್ದು, ಇದರ ಪರಿಣಾಮ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂಕಿ-ಅಂಶ ಸಹಿತ ಸಚಿವರು ವಾದ ಮಂಡನೆಗೆ ಇಳಿಯುವ ಲಕ್ಷಣಗಲು ಕಂಡು ಬಂದಿವೆ.

ವೀರಶೈವ ಲಿಂಗಾಯತ, ಒಕ್ಕಲಿಗ ಹಾಗೂ ಪರಿಶಿಷ್ಟ ಸಮುದಾಯಗಳು ತಮ್ಮ ಸಮುದಾಯಕ್ಕೆ ಸೇರಿದ ಸಚಿವರಿಗೆ ಸಂಪುಟ ಸಭೆಯಲ್ಲಿ ಸಮುದಾಯದ ಹಿತ ಕಾಪಾಡಲು ಅಗತ್ಯವಾದ ವಾದ ಮಂಡನೆಗೆ ಪೂರಕ ಅಂಶಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿವೆ.

ಈ ದಿಸೆಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿವೆ. ಒಕ್ಕಲಿಗರ ಸಂಖ್ಯೆಯನ್ನು ವರದಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ತೋರಿಸಲಾಗಿದೆ ಎಂದು ಸಮುದಾಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಂಗಳವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಒಕ್ಕಲಿಗ ಶಾಸಕರ ಸಭೆ ನಡೆದಿದ್ದು ಸುದೀರ್ಘ ಚರ್ಚೆ ನಡೆಸಲಾಗಿದೆ.

‘ಒಕ್ಕಲಿಗ ಸಮುದಾಯದಲ್ಲಿ 115 ಉಪ ಜಾತಿಗಳಿವೆ. ಆದರೆ ನಾಲ್ಕೈದು ಜಾತಿಗಳನ್ನು ಸಮುದಾಯದಿಂದ ಹೊರಗಿಟ್ಟು ಬೇರೆ ಜಾತಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಸಮುದಾಯದವರ ಸಂಖ್ಯೆ ಕಡಿಮೆಯಾಗಿದೆ. ಗಣತಿದಾರರು ಮನೆ-ಮನೆ ಸಮೀಕ್ಷೆ ಸರಿಯಾಗಿ ನಡೆಸಿಲ್ಲ. ಅಷ್ಟೇ ಅಲ್ಲ 10 ವರ್ಷದ ಹಿಂದೆ ನಡೆಸಿದ್ದ ಸಮೀಕ್ಷೆ ಇಂದಿಗೆ ಎಷ್ಟು ಪ್ರಸ್ತುತವಾಗಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

‘ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ ಸಮೀಕ್ಷೆಯನ್ನು ಸರಿಯಾಗಿ ಮಾಡದಿರುವುದಕ್ಕೆ ನಮ್ಮ ವಿರೋಧವಿದೆ. ಒಂದೋ ಮರು ಸಮೀಕ್ಷೆ ನಡೆಸಬೇಕು. ಇಲ್ಲದಿದ್ದರೆ, ಗಣತಿಯ ವರದಿಯನ್ನು ಪುನರ್‌ ಪರಿಶೀಲಿಸಲು ಅಧಿಕಾರಿಗಳ ತಂಡ ಅಥವಾ ತಜ್ಞರ ಸಮಿತಿಯನ್ನು ನೇಮಿಸಬೇಕು. ಆಗಿರುವ ತಪ್ಪುಗಳನ್ನು ಸರಿಪಡಿಸಿ ಸಮುದಾಯದ ಹಿತ ಕಾಪಾಡಬೇಕು. ಇಲ್ಲದಿದ್ದರೆ ಸಮುದಾಯದಿಂದ 21 ಶಾಸಕರು ಚುನಾಯಿತರಾಗಿದ್ದು, ಆರು ಸಚಿವ ಸ್ಥಾನಕ್ಕೆ ಭಾಜನರಾಗಿದ್ದೂ ಪ್ರಯೋಜನವಿಲ್ಲದಂತಾಗುತ್ತದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಶಾಸಕರು ಒತ್ತಾಯಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಇತ್ತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಹ ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸಾಧಕ-ಬಾಧಕ ಚರ್ಚಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಸಮಿತಿಗೆ ಕೆಲ ದಾಖಲೆಗಳನ್ನು ಹಸ್ತಾಂತರಿಸಿದ್ದು ಒಂದಷ್ಟು ಟಿಪ್ಪಣಿ ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ ಮಹಾಸಭೆಯ ಪದಾಧಿಕಾರಿಗಳೊಂದಿಗೆ ಸಮಿತಿಯು ಸಭೆ ನಡೆಸಿ ವರದಿಯನ್ನು ಅಂತಿಮಗೊಳಿಸಲಿದೆ. ಈ ವರದಿಯನ್ನು ಸಮುದಾಯದ ಆರು ಸಚಿವರಿಗೆ ನೀಡಿ ಸಂಪುಟ ಸಭೆಯಲ್ಲಿ ಸಮುದಾಯದ ಹಿತ ಕಾಯಬೇಕು ಎಂದು ಒತ್ತಡ ತಂತ್ರ ಅನುಸರಿಸಲು ಮಹಾಸಭಾ ಮುಂದಾಗಿದೆ.

ಮತ್ತೊಂದೆಡೆ, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯಗಳೂ ಸಹ ತಮ್ಮ ಸಚಿವರ ಮೇಲೆ ಒತ್ತಡ ಹೇರುತ್ತಿವೆ. ‘ನಾವು ಕಾಂಗ್ರೆಸ್‌ ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದು ಯಾವುದೇ ಕಾರಣಕ್ಕೂ ವರದಿ ಜಾರಿಯಿಂದ ಹಿಂದೆ ಸರಿಯಬಾರದು. ಕೆಲ ಸಮುದಾಯಗಳ ಒತ್ತಡಕ್ಕೆ ಮಣಿಯಬಾರದು’ ಎಂದು ಪಟ್ಟು ಹಿಡಿದಿವೆ.

ಅಂಕಿ-ಸಂಖ್ಯೆಯ ಆಟ !

‘ಕಾಂಗ್ರೆಸ್‌ ಪಕ್ಷದಿಂದ ವಿಧಾನ ಸಭಾ ಚುನಾವಣೆಯಲ್ಲಿ ಜಯಗಳಿಸಿದವರ ಸಂಖ್ಯೆ ಗಮನಿಸಿದರೆ ಇದರಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಶಾಸಕರ ಸಂಖ್ಯೆಯೇ ಹೆಚ್ಚಾಗಿದೆ. ಆದ್ದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಲು ಬಿಡಬಾರದು. ವರದಿ ಜಾರಿಗೆ ಮುಂದಾಗುವ ಮುನ್ನ ಶಾಸಕರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು ಎಂದು ಪಟ್ಟು ಹಿಡಿಯುವಂತೆ . ಲಿಂಗಾಯತ ಸಮುದಾಯದ 33 ಶಾಸಕರು, ಜೊತೆಗೆ ಲಿಂಗಾಯತ ರಡ್ಡಿ ಸಮುದಾಯದ ನಾಲ್ವರು ಶಾಸಕರೂ ಸೇರಿದರೆ ತಮ್ಮ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದಾರೆ. ಕಾಂಗ್ರೆಸ್‌ಗೆ ಭಾರೀ ಬೆಂಬಲ ನೀಡಿರುವ ಈ ಸಮುದಾಯದ ಹಿತ ಕಾಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮತ್ತೊಂದೆಡೆ ಒಕ್ಕಲಿಗ ಸಮುದಾಯದ 21 ಶಾಸಕರು ಆಯ್ಕೆಯಾಗಿದ್ದು ವರದಿ ಜಾರಿಗೆ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪುನರ್‌ ಸಮೀಕ್ಷೆ ನಡೆಸಬೇಕು. ಇಲ್ಲ, ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.