ಸಾರಾಂಶ
ಸಿದ್ದಾಪುರ: ದೇಶದಲ್ಲಿರುವ ಪ್ರತಿ ಧರ್ಮ, ಜಾತಿ, ಜನಾಂಗದ ವ್ಯಕ್ತಿಗಳು ಸೋಮಾರಿತನ ಬಿಟ್ಟು ತಮ್ಮಲ್ಲಿರುವ ಅಖಂಡ ಶಕ್ತಿಯನ್ನು ತಮ್ಮ ಉದ್ದಾರಕ್ಕೆ ಬಳಸಿಕೊಂಡಲ್ಲಿ ಸಮುದಾಯದ ಜತೆಗೆ ದೇಶವೂ ಸಮೃದ್ಧವಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಶ್ರೀ ಹೇಳಿದರು.
ತಾಲೂಕಿನ ಹಲಗಡಿಕೊಪ್ಪದಲ್ಲಿ ನಿರ್ಮಾಣವಾಗಲಿರುವ ಕರೆ ಒಕ್ಕಲಿಗರ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಮಹಾ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಅಶೀರ್ವಚನ ನೀಡಿ ಶಿಕ್ಷಣ ಪಡೆದ ನಂತರ ಕೇವಲ ತಿಂಗಳ ಸಂಬಳ ತೆಗೆದುಕೊಳ್ಳುವ ಕೆಲಸ ಮಾಡದೇ ನೂರಾರು ಜನಗಳಿಗೆ ಬದುಕನ್ನು, ಶಕ್ತಿಯನ್ನು ಕೊಡುವಂತಹ ಶಕ್ತಿ ಕೂಡ ಆತನಿಗೆ ಬರುತ್ತದೆ ಎಂದರು.ಒಂದು ದೇಶ ಬೆಳೆಯಬೇಕಾದರೆ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ. ಯಾವುದೇ ದೇಶದ ದೊಡ್ಡ ಸಂಪನ್ಮೂಲ ಎಂದರೆ ಅದು ಮಾನವ ಸಂಪನ್ಮೂಲ. ಕೇವಲ ಹಣ ಮಾತ್ರ ಸಂಪನ್ಮೂಲ ಅಲ್ಲ. ನಾವು ಬೇರೆಯವರಿಂದ ತುಳಿತಕ್ಕೂ ಒಳಗಾಗಬಾರದು. ಬೇರೆಯವರನ್ನು ತುಳಿಯಲಿಕ್ಕೂ ಹೋಗಬಾರದು. ಜಾತಿ, ಧರ್ಮದಿಂದ ಬೇರೆ ಬೇರೆಯಾಗಿ ನಾವು ಕಂಡರೂ ನಾವೆಲ್ಲರೂ ಮೂಲದಲ್ಲಿ ಮನುಷ್ಯರೇ ಆಗಿದ್ದೇವೆ. ಸೋಮಾರಿತನ, ಆಲಸ್ಯದಿಂದ ಏನನ್ನೂ ಸಾಧನೆ ಮಾಡಲು ಸಾಧ್ಯ ಇಲ್ಲ. ಸಾಧಿಸುತ್ತೇನೆ ಎನ್ನುವ ಛಲ ಇರಬೇಕು. ಹಣಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣ. ಮಕ್ಕಳಿಗೆ ಶಿಕ್ಷಣವನ್ನು ನೀಡುವಂತಹ ಕೈಂಕರ್ಯವನ್ನು ನಾವು ಮಾಡಿದ್ದೇ ಆದರೆ ಮಕ್ಕಳು ತಮ್ಮ ಭವಿಷ್ಯ ಕಂಡುಕೊಳ್ಳುತ್ತಾರೆ. ಮಕ್ಕಳಿಗೆ ಶಿಕ್ಷಣ ನೀಡಲು ಆಗದಿದ್ದರೆ ನಮ್ಮ ಮಠಕ್ಕೆ ಕಳುಹಿಸಿ ಅವರಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತದೆ ಎಂದು ನುಡಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವಾಗ ಸಮಾಜವನ್ನು ಸದೃಢ ಮಾಡುವಾಗ ಗುರುಗಳ ಆದೇಶ, ಸಂದೇಶವನ್ನು ಚಾಚು ತಪ್ಪದೇ ನಡೆಸಬೇಕು. ಯಾವುದೇ ಕಾರ್ಯ ಆಗಬೇಕಾದರೆ ಸಂಘಟನೆಯೂ ಮುಖ್ಯ. ಅಲ್ಲದೇ ಆರ್ಥಿಕ ಕ್ರೋಡೀಕರಣ ಬೇಕಾಗುತ್ತದೆ. ಇಲ್ಲಿಯ ಸಮುದಾಯ ಭವನಕ್ಕೆ ಸರ್ಕಾರದಿಂದ ₹೫೦ ಲಕ್ಷ ಕೊಡಿಸುವುದಾಗಿ ತಿಳಿಸಿದರು.ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ, ಪ್ರಸನ್ನನಾಥ ಶ್ರೀ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಶ್ರೀ, ಕುಮಟಾ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಶ್ರೀ, ಸಾಯಿನಾಥ ಶ್ರೀ ಸಾನ್ನಿಧ್ಯ ವಹಿಸಿದ್ದರು.
ತಾಲೂಕು ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಸುಬ್ರಾಯ ಗೌಡ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಗೌಡ, ಧರ್ಮೇಶ್ ಸಿರಿಬೈಲ್, ಉಪೇಂದ್ರ ಪೈ ಶಿರಸಿ, ಕೆ.ಟಿ. ಗೌಡ ಕಾರವಾರ, ಎಂ.ಟಿ. ಗೌಡ ಕುಮಟಾ, ಮಹಾಬಲೇಶ್ವರ ಗೌಡ ಮೇಲಿನ ಸರಕುಳಿ, ಶಂಕರ ಎಂ.ಗೌಡ, ವಿನಾಯಕ ಕೆ.ಆರ್., ವಸಂತ ನಾಯ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೆಂಕಟೇಶ ರಾಮದಾಸ ಕಾಂತು (ಕಾಂತು ಮಾಸ್ತರ್) ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಪೂರ್ವದಲ್ಲಿ ಗಣಪತಿ ಹವನ, ರಾಮತಾರಕ, ಪವಮಾನ ಹವನ, ಗುರುಗಳಿಂದ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಜರುಗಿತು.
ಭವ್ಯ ಮೆರವಣಿಗೆ:ಗುರುಗಳನ್ನು ಸಾಗರ ವೃತ್ತದಲ್ಲಿ ಕಾರ್, ಬೈಕ್ ರ‍್ಯಾಲಿ, ಪೂರ್ಣಕುಂಬದೊಂದಿಗೆ ಸ್ವಾಗತಿಸಿ ಮೆರವಣಿಗೆ ಮೂಲಕ ಹಲಗಡಿಕೊಪ್ಪಕ್ಕೆ ಕರೆತರಲಾಯಿತು.
ಪ್ರದೀಪಕುಮಾರ ಸ್ವಾಗತಿಸಿದರು. ನಾಗಪತಿ ಗೌಡ ಪ್ರಾಸ್ತಾವಿಕ ಮಾತನಾಡಿದರು.ವಿಷ್ಣು ಪಟಗಾರ, ಅನಿತಾ ಗೌಡ ನಿರ್ವಹಿಸಿದರು.ತಾಲೂಕಿನ ಹಲಗಡಿಕೊಪ್ಪದಲ್ಲಿ ನಿರ್ಮಾಣವಾಗಲಿರುವ ಕರೆ ಒಕ್ಕಲಿಗರ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.