ಸಾರಾಂಶ
ಸದನದಿಂದ ಶಾಸಕರ ಅಮಾನತು ಕ್ರಮ ಪಾಠವೇ ಹೊರತು, ಶಿಕ್ಷೆ ಅಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು : ಸದನದಿಂದ ಶಾಸಕರ ಅಮಾನತು ಕ್ರಮ ಪಾಠವೇ ಹೊರತು, ಶಿಕ್ಷೆ ಅಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಧಾನಸಭೆಯ ಸ್ಪೀಕರ್ ಪೀಠಕ್ಕೆ ಅಗೌರವ ತೋರಿ ಆರು ತಿಂಗಳು ಅಮಾನತುಗೊಂಡ 18 ಶಾಸಕರ ಅಮಾನತು ಹಿಂಪಡೆಯುವಂತೆ ಬಿಜೆಪಿ ನಿಯೋಗ ಮನವಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಅಮಾನತು ಆದೇಶ ನನ್ನೊಬ್ಬನ ತೀರ್ಮಾನ ಅಲ್ಲ, ಇಡೀ ಸದನದ ತೀರ್ಮಾನ. ಈ ಕುರಿತು ಚರ್ಚೆ ನಡೆಸಲಾಗುವುದು. ಶಾಸಕರ ಅಮಾನತು ಆದೇಶ ಹಿಂಪಡೆಯಲು ಚರ್ಚೆ ನಡೆಸುವ ನಿಟ್ಟಿನಲ್ಲಿ ನಾವು ಸಕಾರಾತ್ಮಕ ಧೋರಣೆ ಹೊಂದಿದ್ದೇವೆ ಎಂದರು.
ಶಾಸಕರಿಗೆ ತಮ್ಮ ತಪ್ಪಿನ ಅರಿವಾಗಬೇಕು, ಆರು ತಿಂಗಳ ಕಾಲ ಅಮಾನತು ಮಾಡಿದ್ದು ಶಿಕ್ಷೆ ಅಲ್ಲ, ಸಂವಿಧಾನಬದ್ಧವಾಗಿ ನಡೆದುಕೊಳ್ಳಲು ಹಾಗೂ ಉತ್ತಮ ನಾಯಕರಾಗಲು ಅವರಿಗೆ ನೀಡಿದ ಸಮಯ, ಅದನ್ನು ಮೊದಲು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಟಿಆರ್‌ಪಿಗಾಗಿ ಮಾತನಾಡುವ ಚಾಳಿ ಬೇಡ:
ಶಾಸಕರಾದ ತಕ್ಷಣ ಏನು ಬೇಕಾದರೂ ಮಾತನಾಡಬಹುದು ಎನ್ನುವುದು ಆಗಬಾರದು. ಕೆಲವು ಶಾಸಕರಿಗೆ ಅದೊಂದು ಚಾಳಿಯಾಗಿ ಬಿಟ್ಟಿದೆ. ಮಾರ್ಕೆಟ್‌ನಲ್ಲಿ ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಏನೇನೋ ಮಾತನಾಡುತ್ತಾರೆ. ಜನರು ಓಟು ಹಾಕಿದ ಕೂಡಲೆ ಅವರು ಶಾಸಕರಾಗಲ್ಲ, ಸ್ಪೀಕರ್ ಎದುರು ಪ್ರಮಾಣವಚನ ಸ್ವೀಕರಿಸಿದ ಬಳಿಕವೇ ಆಗುವಂಥದ್ದು. ಇದನ್ನು ಅರ್ಥ ಮಾಡಿಕೊಂಡು ಸಂವಿಧಾನಕ್ಕೆ ಗೌರವ ನೀಡಬೇಕಾಗುತ್ತದೆ. ಸಂವಿಧಾನ ಪ್ರಕಾರವಾಗಿ ಮಾತನಾಡಬೇಕಾಗುತ್ತದೆ ಎಂದು ಖಾದರ್ ಕಿವಿಮಾತು ಹೇಳಿದರು.
ವಿಧಾನಸಭೆಯಿಂದ ಅಮಾನತುಗೊಂಡ ಬಳಿಕ ಸ್ಪೀಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಹಕ್ಕು ಬಾಧ್ಯತಾ ಸಮಿತಿಗೆ ಐದಾರು ಶಾಸಕರು ದೂರು ನೀಡಿದ್ದಾರೆ. ಈ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ, ಅದು ಆ ಕಮಿಟಿಗೆ ಬಿಟ್ಟ ವಿಚಾರ ಎಂದರು.