ಸಾರಾಂಶ
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಗಿಮಿಕ್ ಮಾಡುತ್ತಿದ್ದು, ಅವರಿಗಿರುವ ಕ್ಲೀನ್ ಇಮೇಜ್ ಹಾಳು ಮಾಡಲು ಮುಡಾ ಹಗರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಲು ಯತ್ನಿಸುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಗೃಹಲಕ್ಷ್ಮೀ ಯೋಜನೆಯ ಖಾತೆಗಳಿಗೆ ತಾಂತ್ರಿಕ ಕಾರಣಗಳಿಂದ ಹಣ ಜಮೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಜನಾಂದೋಲನಾ ಸಮಾವೇಶದಲ್ಲಿ ಮಾತನಾಡಿ, ನಿನ್ನೆ ಉಪಮುಖ್ಯಮಂತ್ರಿಗಳು ಭಾಷಣ ಮಾಡುವಾಗ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಮಹಿಳೆಯರು ಹೇಳಿದ್ದರು. ಎರಡು ತಿಂಗಳಿಂದ ಮಹಿಳೆಯರ ಖಾತೆಗೆ ಹಣ ಜಮೆಯಾಗದಿರುವುದು ನನ್ನ ಗಮನಕ್ಕೂ ಬಂದಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆಯಾಗಿತ್ತು. ಅದನ್ನೆಲ್ಲಾ ಸರಿಪಡಿಸಲಾಗಿದ್ದು, ಇವತ್ತಿನಿಂದ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆ. ನುಡಿದಂತೆ ನಡೆಯುವವರು ಕಾಂಗ್ರೆಸ್‌ನವರು ಎಂದರು.
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಗಿಮಿಕ್ ಮಾಡುತ್ತಿದ್ದು, ಅವರಿಗಿರುವ ಕ್ಲೀನ್ ಇಮೇಜ್ ಹಾಳು ಮಾಡಲು ಮುಡಾ ಹಗರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರದದ ಹಗರಣಗಳನ್ನ ಕರ್ನಾಟಕದ ಜನರು ಮರೆತಿಲ್ಲ. ಮೈಸೂರು ಮುಡಾದಲ್ಲಿ ದೇವೇಗೌಡರ ಕುಟುಂಬ ಹಗರಣ ಮಾಡಿದ್ದಾರೆಂದು ಯಡಿಯೂರಪ್ಪ ಹೇಳಿದ್ದರು. ಈಗ ಅದನ್ನೆ ಮರೆತು ಜೊತೆಯಾಗಿದ್ದಾರೆ. ವಿಜಯೇಂದ್ರ ಹಾಗೂ ಯಡಿಯೂರಪ್ಪರಿಗೆ ಆ ಹಗರಣ ತನಿಖೆ ಮಾಡಿಸುವ ಧೈರ್ಯ ಇದೆಯಾ?, ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ದೂರಿದರು.
ನಮಗೆ ಸಿಕ್ಕ ಅಧಿಕಾರದಲ್ಲಿ ಜನರಿಗೆ ಒಳ್ಳೆಯದು ಮಾಡುತ್ತೇವೆ. ಬರಗಾಲದಲ್ಲಿ ಪರಿಹಾರ ಕೊಡಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ, ಭ್ರಷ್ಟ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದೆ ಎಂದು ಟೀಕಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಪೆನ್ ಡ್ರೈವ್ ಹಂಚಿದ್ದು ಪ್ರೀತಂಗೌಡ ಅಂತ ಕುಮಾರಸ್ವಾಮಿಯವರೇ ಒಪ್ಪಿಕೊಂಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ವಿಷ ಎರೆದವರು ಎಂದಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸುವ ಎಚ್‌ಡಿಕೆಯವರಿಗೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕುಟುಂಬ ಇರುವುದಿಲ್ಲವೇ. ನೂರಾರು ಮಹಿಳೆಯರ ಮರ್ಯಾದೆ ಬೀದಿ ಪಾಲಾಯ್ತಲ್ಲ, ನಿಮಗೆ ನಾಚಿಕೆ ಆಗಲ್ವಾ? ಜನಪ್ರತಿನಿಧಿ ಆಗಲು ನಿಮಗೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.