ಸಾರಾಂಶ
ಮೈಸೂರು : ಮುಡಾ ನಿವೇಶನ ಹಂಚಿಕೆ ಹಗರಣದ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡಲೇ ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಆಗ್ರಹಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರಾಜಕೀಯವೇ ಬೇರೆ; ಈ ನೆಲದ ಕಾನೂನೇ ಬೇರೆ. ನೆಲದ ಕಾನೂನಿನ ಅನುಗುಣವಾಗಿ ಅವರನ್ನು ತಕ್ಷಣ ಬಂಧಿಸಬೇಕು. ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಇದು ಜಂಗಲ್ ರಾಜ್ ಅಲ್ಲ ಎಂದು ಆಕ್ಷೇಪಿಸಿದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಸಂವಿಧಾನ ಹಿಡಿದುಕೊಂಡು ಓಡಾಡುವ ಅವರ ಪಾರ್ಟಿಯ ಅಧ್ಯಕ್ಷರು ಉತ್ತರಿಸಬೇಕಿದೆ ಎಂದು ಅವರು ಒತ್ತಾಯಿಸಿದರು.
ಕರ್ನಾಟಕದಲ್ಲಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಅಧಿಕಾರದ ಗರಿಷ್ಠ ದುರುಪಯೋಗ ನಡೆದಿದೆ. ಎಂಡಿಎಗೆ ಸಂಬಂಧಿಸಿದ ಹೈಕೋರ್ಟಿನ ತೀರ್ಪಿನಡಿ 180ನೇ ಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಿಂದ ಅಧಿಕಾರ ದುರುಪಯೋಗ ಆಗಿದೆ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ ಎಂದು ಅವರು ವಿವರಿಸಿದರು.
ಲೋಕಾಯುಕ್ತವು 120ಬಿ, 166, 403, 406, 420, 465 ಮೊದಲಾದ ಸೆಕ್ಷನ್ ಅನ್ವಯ ಎಫ್.ಐ.ಆರ್. ದಾಖಲಿಸಿದೆ. ಇಷ್ಟು ದೊಡ್ಡದಾದ ಗುರುತರ ಆರೋಪಗಳಿದ್ದು ಆರೋಪಿ ನಂ. 1 ಆಗಿದ್ದರೂ ಸಿದ್ದರಾಮಯ್ಯ ಅವರು ರಾಜಾರೋಷವಾಗಿ ಓಡಾಡಲು ಅವಕಾಶ ಇದೆಯೇ? ಅವರನ್ನು ಯಾಕೆ ಬಂಧಿಸಿಲ್ಲ ಎಂದು ಅವರು ಲೋಕಾಯುಕ್ತವನ್ನು ಪ್ರಶ್ನಿಸಿದರು.
ಶ್ರೀಸಾಮಾನ್ಯನಿಗೆ ಒಂದು ನ್ಯಾಯ- ಸಿದ್ದರಾಮಯ್ಯರಿಗೆ ಇನ್ನೊಂದು ನ್ಯಾಯವೇ? ದೇಶದ ಕಾನೂನು ಎಲ್ಲ ಕಡೆ ಒಂದು ರೀತಿ ಇದ್ದರೆ ಕರ್ನಾಟಕದಲ್ಲಿ ಇದೊಂದು ವಿಚಿತ್ರ ಪರಿಸ್ಥಿತಿ ಇದೆ. ಒಬ್ಬ ಆರೋಪಿ, ಎಫ್ಐಾಆರ್ ಆಗಿದೆ, ನಿರೀಕ್ಷಣಾ ಜಾಮೀನಿಲ್ಲ, ಸಿದ್ದರಾಮಯ್ಯ ಅವರು ಜಾಮೀನನ್ನೂ ಪಡೆದಿಲ್ಲ. ಅವರು ಇಡೀ ಪ್ರಕರಣದ ಎ1 ಆಗಿದ್ದಾರೆ. ಯಾಕೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದರು.
ಇದ್ಯಾವ ಪರಿ ಆಡಳಿತ ಈ ರಾಜ್ಯದಲ್ಲಿದೆ? ಎಂದ ಅವರು, ಅಬಕಾರಿ ಇಲಾಖೆಯಡಿ ಡಿ.ಸಿ.ಯವರು ಎಷ್ಟು ಲಂಚ ಕೇಳಿದ್ದಾರೆ ಎಂದು ನೀವೇ ಬಿತ್ತರಿಸಿದ್ದೀರಿ. ಬಳ್ಳಾರಿಯಲ್ಲಿ 5 ಜನ ಬಾಣಂತಿಯರು ಸತ್ತಿದ್ದಾರೆ. ಸಾಕ್ಷರತೆಯಲ್ಲಿ ಕರ್ನಾಟಕವು ದೇಶದಲ್ಲಿ 17ನೇ ಸ್ಥಾನ ಪಡೆದಿದೆ. ಭ್ರಷ್ಟಾಚಾರವನ್ನು ಈ ಸರ್ಕಾರ ಒಂದು ನೀತಿಯಾಗಿ ಮಾರ್ಪಡಿಸಿದೆ ಎಂದು ಅವರು ಟೀಕಿಸಿದರು.
ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರೆ ಅದು ನ್ಯಾಯಾಲಯದ ತೀರ್ಪಲ್ಲ. ಯಾಕೆ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿ ಇಷ್ಟೊಂದು ಆರಾಮವಾಗಿ ಸುತ್ತುತ್ತಿದ್ದಾರೆ? ಅದೇ ವಿಶೇಷ ಅವಕಾಶ ಬೇರೆಯವರಿಗೆ ಇದೆಯೇ ಎಂದು ಕೇಳಿದರು.
ಸಿದ್ದರಾಮಯ್ಯ ಅವರು ಯಾವತ್ತೂ ನ್ಯಾಯದ ಪರ ನಿಂತಿಲ್ಲದ ವ್ಯಕ್ತಿ. ಅವರ ಮೇಲೆ ಆರೋಪ ಬಂದಾಗ ಲೋಕಾಯುಕ್ತವನ್ನು ಮುಚ್ಚಿದ್ದರು. ಲೋಕಾಯುಕ್ತವನ್ನು ಪುನರ್ ಸ್ಥಾಪಿಸಲು 7 ವರ್ಷ ಬೇಕಾಯಿತು. ಎಸಿಬಿ ರಚನೆ ಮಾಡಿದ್ದರು. 106 ಕೇಸುಗಳು ಅವರ ಮೇಲಿತ್ತು. ಆ ಕೇಸುಗಳ ಪೈಕಿ 56 ಕೇಸುಗಳಿಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟಿನ ನಿರ್ದೇಶನದ ಮೇರೆಗೆ ಈ ದೇಶದಲ್ಲಿ ಲೋಕಾಯುಕ್ತವನ್ನು ರಾಜ್ಯದಲ್ಲಿ ಪುನರ್ ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದರು.
ತನ್ನ ಮೇಲೆ ಆರೋಪ ಬಂದಾಗ ಲೋಕಾಯುಕ್ತವನ್ನೇ ಮುಚ್ಚುವ ಸಿದ್ದರಾಮಯ್ಯ ಅವರು, ಇವತ್ತು ಈ ಭ್ರಷ್ಟಾಚಾರ ಆರೋಪದಲ್ಲಿ ಅವರೇ ಅಧಿಕಾರದಲ್ಲಿ ಇದ್ದುಕೊಂಡು, ಕಡತಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲವೇ? ಕಡತಗಳನ್ನು ಬೈರತಿ ಸುರೇಶ್ ಅವರು ಬಂದು ಎತ್ತಿಕೊಂಡು ಹೋಗಲು ಸಾಧ್ಯವಿಲ್ಲವೇ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಮಹೇಶ್ ರಾಜೇಶ್ ಅರಸು, ಜಿಲ್ಲಾ ಸಹ ವಕ್ತಾರ ದಯಾನಂದ ಪಾಟೀಲ್ ಮೊದಲಾದವರು ಇದ್ದರು.
ಮುಡಾ ಹಗರಣ: ಮತ್ತೊಮ್ಮೆ ದೇವರಾಜು ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು
ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಅಕ್ರಮ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರಿನ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಪ್ರಕರಣದ 4ನೇ ಆರೋಪಿ ದೇವರಾಜು ಅವರನ್ನು ಶುಕ್ರವಾರ ಮತ್ತೊಮ್ಮೆ ವಿಚಾರಣೆ ನಡೆಸಿದರು.
ಲೋಕಾಯುಕ್ತ ಎಸ್ಪಿ ಕಚೇರಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ದೇವರಾಜು ಅವರನ್ನು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವದ ಅಧಿಕಾರಿಗಳ ತಂಡವು ಎರಡನೇ ಬಾರಿ ವಿಚಾರಣೆ ನಡೆಸಿತು.ಈ ಪ್ರಕರಣದ ನಾಲ್ಕು ಆರೋಪಿಗಳ ಹೇಳಿಕೆಗಳು ಪರಸ್ಪರ ತಾಳೆ ಆಗದಿರುವ ಕಾರಣಕ್ಕೆ ಹೆಚ್ಚಿನ ಮಾಹಿತಿಗಾಗಿ ದೇವರಾಜು ಅವರಿಗೆ ಮತ್ತೊಮ್ಮೆ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿತ್ತು. ಈ ಕಾರಣಕ್ಕೆ ಶುಕ್ರವಾರ ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ವಿಚಾರಣೆ ಎದುರಿಸಿದರು.
2ನೇ ಬಾರಿ ವಿಚಾರಣೆ ಎದುರಿಸಿ ಹೊರ ಬಂದ ದೇವರಾಜು ಅವರು, ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಹೋದರ ಮಲ್ಲಿರ್ಕಾಜುನಸ್ವಾಮಿಗೆ ಜಮೀನು ಮಾರಾಟದ ಬಗ್ಗೆ ಲೋಕಾಯುಕ್ತರು ಕೆಲವು ಮಾಹಿತಿ ಕೇಳಿದರು, ಮಾಹಿತಿ ನೀಡಿದ್ದೇನೆ ಎಂದರು. ನಿಮ್ಮ ವಿರುದ್ದ ಮೈಸೂರಿನ ನಿಮ್ಮ ಸಂಬಂಧಿಕರು ದೂರು ನೀಡಿದ್ದಾರೆ ಎಂಬ ಪ್ರಶ್ನೆಗೆ, ಅವರೆಲ್ಲಾ ಮೋಸಗಾರರು ಎಂದು ಹೇಳಿ ಅಟೋ ಹತ್ತಿ ಹೊರಟು ಹೋದರು.