ಸಾರಾಂಶ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಧಿಕಾರಿ-ನೌಕರರು ಸಾಮೂಹಿಕವಾಗಿ ರಜೆ ಹಾಕಿ ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು : ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳ ಕೂಡಲೇ ಭರ್ತಿ ಮಾಡಬೇಕು, ಮಹಾನಗರ ಪಾಲಿಕೆ ನೌಕರರಿಗೆ 7ನೇ ವೇತನ ಆಯೋಗ ವಿಸ್ತರಣೆ, ವೃಂದ ಮತ್ತು ನೇಮಕಾತಿ ತಿದ್ದುಪಡಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜ್ಯದ ಮಹಾನಗರ ಪಾಲಿಕೆಗಳ ನೌಕರರ ಸಂಘಗಳ ಪರಿಷತ್ ನೇತೃತ್ವದಲ್ಲಿ ಅಧಿಕಾರಿ-ನೌಕರರು ಸಾಮೂಹಿಕವಾಗಿ ರಜೆ ಹಾಕಿ ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಬಿಬಿಎಂಪಿಗೆ ಸಂಬಂಧಪಟ್ಟ 12,10 ಮಹಾನಗರ ಪಾಲಿಕೆಯ ಆರು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಮನವಿ ಪತ್ರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಅಧಿಕಾರಿ, ನೌಕರರ ಕಷ್ಟಗಳ ಕುರಿತು ಅರಿವಿದೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಚರ್ಚಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳೋಣ. ಅಮಾನತುಗೊಳಿಸಲಾದ ಬಿಬಿಎಂಪಿಯ ನೌಕರರ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ. ಪಾಲಿಕೆ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿಯ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ನೌಕರರ 12 ಬೇಡಿಕೆಗಳಿಗೆ ಮುಖ್ಯ ಆಯುಕ್ತರು ಉತ್ತಮ ಸ್ಪಂದನೆ ನೀಡಿದ್ದಾರೆ. ಅಮಾನತುಗೊಂಡ ನೌಕರರನ್ನು ವಾಪಸ್ಸು ಪಡೆಯಲಿದ್ದಾರೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ಎಸ್.ಎಚ್.ಗುರುಮೂರ್ತಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ರಾಜ್ಯ ಉಪಾಧ್ಯಕ್ಷರಾದ ಜಿ.ವೆಂಕಟರಾಮ್, ಬಿ.ಎನ್. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಖಜಾಂಚಿ ಬಿ.ರುದ್ರೇಶ್, ರಾಜ್ಯ ಕಾರ್ಯದರ್ಶಿ ಪ್ರಹ್ಲಾದ್ ಕುಲಕರ್ಣಿ, 10 ಮಹಾನಗರ ಪಾಲಿಕೆಯ ಪದಾಧಿಕಾರಿಗಳಿದ್ದರು.
ಬಿಬಿಎಂಪಿ ಕಚೇರಿಗಳಿಗೆ ಬೀಗ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಬಿಎಂಪಿಯ ಕೇಂದ್ರ ಕಚೇರಿ, ವಲಯ ಕಚೇರಿ, ಉಪ ವಿಭಾಗ ಕಚೇರಿ ಹಾಗೂ ವಾರ್ಡ್ ಕಚೇರಿಗಳಿಗೆ ಮಂಗಳವಾರ ಬೀಗ ಹಾಕಲಾಗಿತ್ತು. ವಿವಿಧ ಸೇವೆ-ಸೌಲಭ್ಯ ಪಡೆಯಲು ಆಗಮಿಸಿದ ಸಾರ್ವಜನಿಕರಿಗೆ ಅಧಿಕಾರಿ ಸಿಬ್ಬಂದಿ ಸಿಗದೇ ವಾಪಾಸ್ ಹೋದರು.
ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತರ ಕಚೇರಿ, ಬಿಎಂಟಿಎಫ್ ಕಚೇರಿ ಬಿಟ್ಟರೆ ಉಳಿದಂತೆ ಎಲ್ಲ ಕಚೇರಿಗಳಿಗೆ ಬೀಗ ಹಾಕಿರುವುದು ಕಂಡು ಬಂತು. ಬಿಬಿಎಂಪಿ ನಿರ್ವಹಣೆ ಮಾಡುವ ಆಸ್ಪತ್ರೆ ಮತ್ತು ರುದ್ರಭೂಮಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಸುರಳ್ಕರ್ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು
ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಮ್ಮ ಕಚೇರಿ ಸಿಬ್ಬಂದಿ ಹಾಗೂ ಕಾರಿ ಚಾಲಕನಿಗೆ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದರೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ ವಿಚಾರ ಗೊತ್ತಾಗುತ್ತಿದ್ದಂತೆ ಪ್ರತಿಭಟನಾಕಾರರು ದಂಡು ಮಲ್ಲೇಶ್ವರದ ಪಶ್ಚಿಮ ವಲಯ ಆಯುಕ್ತರ ಕಚೇರಿ ಆಗಮಿಸಿ ತಮ್ಮ ವಲಯ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿಯನ್ನು ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡುವವರೆಗೆ ತೆರಳುವುದಿಲ್ಲ ಎಂದು ಪಟ್ಟುಹಿಡಿದರು.
ಆಗ ಸುರಳ್ಕರ್ ವಿಕಾಸ್ ಕಿಶೋರ್, ಆರೋಗ್ಯ ವಿಭಾಗದ ಉಸ್ತುವಾರಿ ಜವಾಬ್ದಾರಿ ಇರುವುದರಿಂದ ಕಾರಿನ ಚಾಲಕ ಮತ್ತು ಕಚೇರಿಯ ಒಬ್ಬ ಸಿಬ್ಬಂದಿಗೆ ಮಾತ್ರ ಕೆಲಸಕ್ಕೆ ಬರುವುದಕ್ಕೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಜತಗೆ ತಾವೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವುದಾಗಿ ಹೇಳಿ ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿದರು.