ಗೆಲುವು, ಸೋಲು ರಾಜಕೀಯದ ಭಾಗ: ಮೋದಿ

| Published : Jun 06 2024, 12:31 AM IST

ಸಾರಾಂಶ

‘ಗೆಲುವು, ಸೋಲು ಎರಡೂ ರಾಜಕೀಯದ ಅವಿಭಾಜ್ಯ ಅಂಗ. ಕಳೆದ 10 ವರ್ಷಗಳಲ್ಲಿ ನಾವು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ. ಮುಂದೆಯೂ ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ‘ಗೆಲುವು, ಸೋಲು ಎರಡೂ ರಾಜಕೀಯದ ಅವಿಭಾಜ್ಯ ಅಂಗ. ಕಳೆದ 10 ವರ್ಷಗಳಲ್ಲಿ ನಾವು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ. ಮುಂದೆಯೂ ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಕಳೆದ ಸಲಕ್ಕಿಂತ ಬಿಜೆಪಿ ಸಂಖ್ಯೆ ಕುಸಿದಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬುಧವಾರ ಹಾಲಿ ಸರ್ಕಾರ ಕಡೆಯ ಸಚಿವ ಸಂಪುಟ ಸಭೆ ನಡೆಸಿದ ಮೋದಿ, ಸಭೆಯಲ್ಲಿ ಚುನಾವಣಾ ಫಲಿತಾಂಶವನ್ನು ಮೆಲುಕು ಹಾಕಿದರು. ಈ ವೇಳೆ ‘ಗೆಲುವು, ಸೋಲು ರಾಜಕೀಯದ ಭಾಗ. ನೀವು ಸಂಖ್ಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಲು ಹೋಗಬೇಡಿ. ಅವು ಹೆಚ್ಚೂ ಕಡಿಮೆ ಆಗುತ್ತಲೇ ಇರುತ್ತವೆ. ದೇಶ ಮತ್ತು ಸಮಾಜದ ಪರವಾಗಿ ಕೆಲಸ ಮಾಡುವುದನ್ನು ಮುಂದುವರೆಸಿ. ತಂತಾನೆ ನಮ್ಮ ಗೆಲುವಿನ ಸಂಖ್ಯೆಯೂ ಹೆಚ್ಚುತ್ತದೆ’ ಎಂದು ಸಹದ್ಯೋಗಿಗಳಿಗೆ ಹಿತನುಡಿಗಳನ್ನು ಆಡಿದರು’ ಎಂದು ಮೂಲಗಳು ತಿಳಿಸಿವೆ.