ನೈಸ್‌ ಮುಟ್ಟುಗೋಲು ಇಲ್ಲ : ಡಾ.ಜಿ.ಪರಮೇಶ್ವರ್‌ ಸ್ಪಷ್ಟನೆ

| N/A | Published : Sep 04 2025, 02:00 AM IST / Updated: Sep 04 2025, 10:57 AM IST

Dr G Parameshwar
ನೈಸ್‌ ಮುಟ್ಟುಗೋಲು ಇಲ್ಲ : ಡಾ.ಜಿ.ಪರಮೇಶ್ವರ್‌ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

‘ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ಅನೇಕ ನ್ಯೂನ್ಯತೆಗಳಿವೆ. ಎಲ್ಲವನ್ನೂ ಬಗೆಹರಿಸಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಬಿಎಂಐಸಿ ಯೋಜನೆ ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶ ಇಲ್ಲ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

 ಬೆಂಗಳೂರು :  ‘ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ಅನೇಕ ನ್ಯೂನ್ಯತೆಗಳಿವೆ. ಎಲ್ಲವನ್ನೂ ಬಗೆಹರಿಸಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಬಿಎಂಐಸಿ ಯೋಜನೆ ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶ ಇಲ್ಲ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಬಿಎಂಐಸಿ ಯೋಜನೆ ವಿಳಂಬ ಹಾಗೂ ಅಕ್ರಮಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಬಳಿಕ ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಎಂಐಸಿ ಯೋಜನೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾವನೆಯೇ ಇಲ್ಲ. ಮುಟ್ಟುಗೋಲು ಹಾಕಿಕೊಳ್ಳುವುದಾದರೆ ಸರ್ಕಾರ ಒಂದೇ ನಿರ್ಧಾರದಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದಿತ್ತು. ಅದಕ್ಕೆ ಸಮಿತಿಗಳನ್ನು ರಚಿಸಿ ಚರ್ಚೆಗಳನ್ನು ಮಾಡಿ ಮಾಡುತ್ತಿರಲಿಲ್ಲ. ನಮ್ಮ ಸಂಪುಟ ಉಪಸಮಿತಿ ಮಾಡಿರುವುದು ಸಮಸ್ಯೆಗಳನ್ನು ಬಗೆಹರಿಸಿ ಯೋಜನೆ ಪೂರ್ಣಗೊಳಿಸುವ ಉದ್ದೇಶಕ್ಕಾಗಿ ಮಾತ್ರ ಎಂದು ಸ್ಪಷ್ಟಪಡಿಸಿದರು.

ಸಾಕಷ್ಟು ನ್ಯೂನ್ಯತೆಗಳಿವೆ:

ಬಿಎಂಐಸಿ ಯೋಜನೆಯ ಒಪ್ಪಂದದಲ್ಲಿ ಸಾಕಷ್ಟು ಉಲ್ಲಂಘನೆಯಾಗಿದೆ. ನಾವು ಕೊಟ್ಟಂತಹ ಜಮೀನುಗಳು, ಪ್ರಾಜೆಕ್ಟ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಎ ಸೆಕ್ಷನ್, ಬಿ ಸೆಕ್ಷನ್ ಅಂತ ಮಾಡಿದ್ದಾರೆ. ಎ ಸೆಕ್ಷನ್ ಬೆಂಗಳೂರಿಗೆ ಹತ್ತಿರ ಇರುವ ಫೆರಿಪೆರಲ್ ರಿಂಗ್ ರೋಡ್, ಬಿಡದಿವರೆಗೂ ತೆಗೆದುಕೊಂಡು ಹೋಗಿ ಅಲ್ಲಿ ಕಾರ್ಪೋರೆಟ್ ಟೌನ್‌ಶಿಪ್ ಮಾಡುವಂತದ್ದನ್ನು ಪ್ರಾಜೆಕ್ಟ್‌ನಲ್ಲಿ ತಂದಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ 300ಕ್ಕೂ ಹೆಚ್ಚು ತಕರಾರುಗಳಿದ್ದು, ಎಲ್ಲವನ್ನೂ ಪರಿಹರಿಸಬೇಕಾಗಿದೆ ಎಂದು ಸಚಿವ ಪರಮೇಶ್ವರ್‌ ತಿಳಿಸಿದರು.

ಈಗಾಗಲೇ ಸುಮಾರು 80 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಉಳಿದ ಪ್ರಕರಣಗಳ ಇತ್ಯರ್ಥಕ್ಕೆ ಉತ್ತಮ ವಕೀಲರ ತಂಡ ನೇಮಿಸಿಕೊಂಡಿದ್ದೇವೆ ಎಂದು ಹೇಳಿದರು.

ಯೋಜನೆಯು ಎ ಸೆಕ್ಷನ್‌ನಲ್ಲಿ 41 ಕಿ.ಮೀ. ಈಗಾಗಲೇ ಪೂರ್ಣವಾಗಿದೆ. ಲಿಂಕ್ ರಸ್ತೆಯಲ್ಲಿ 9 ಕಿ.ಮೀ.ನಲ್ಲಿ 5 ಕಿ.ಮೀ. ಮಾತ್ರ ಆಗಿದೆ. ಇನ್ನು ಜಮೀನು ನೀಡಿರುವ ರೈತರಿಗೆ ನಿವೇಶನ ಕೊಡುವ ವಿಚಾರವೂ ಇದರಲ್ಲಿ ಬರುತ್ತದೆ. ಫ್ರೇಮ್‌ವರ್ಕ್ ಒಪ್ಪಂದದಲ್ಲಿ ಇಲ್ಲ. ಔಟ್‌ಸೈಡ್ ಅಗ್ರಿಮೆಂಟ್‌ನಲ್ಲಿ ತಿಳಿವಳಿಕೆ ಮೇಲೆ ನಿವೇಶನ ಕೊಡುತ್ತೇವೆ ಎಂದು ನೈಸ್ ಕಂಪನಿಯವರು ಹೇಳಿದ್ದಾರೆ. ಅದನ್ನೂ ಪರಿಶೀಲಿಸುತ್ತೇವೆ ಎಂದು ಪರಮೇಶ್ವರ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ಸೇರಿ ಸಂಪುಟ ಉಪಸಮಿತಿ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

Read more Articles on