ಬಿಹಾರಕ್ಕೆ ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ಬಂದಿದೆ. ನಿತೀಶ್‌-ಮೋದಿ ಎದುರು ಗಠಬಂಧನ ಧೂಳೀಪಟವಾಗಿದೆ. ಎನ್‌ಡಿಎ ‘ಮಹಿಳೆ+ಯುವಕ’ ತಂತ್ರದ ಎದುರು ಮಂಕಾದ ಆರ್‌ಜೆಡಿ ‘ಮುಸ್ಲಿಂ+ಯಾದವ’ ಸೂತ್ರದಿಂದ ಗೆದ್ದು ಬೀಗಿದೆ. ಚುನಾವಣೆಗೂ ಮೊದಲೇ ಮಹಿಳೆಯರ ಖಾತೆಗೆ ಎನ್‌ಡಿಎ ₹10000 ವರ್ಗದಿಂದ ಮತ ಮ್ಯಾಜಿಕ್‌ ಆಗಿದೆ.

 ಪಾಟ್ನಾ : ಬಿಹಾರಕ್ಕೆ ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ಬಂದಿದೆ. ನಿತೀಶ್‌-ಮೋದಿ ಎದುರು ಗಠಬಂಧನ ಧೂಳೀಪಟವಾಗಿದೆ. ಎನ್‌ಡಿಎ ‘ಮಹಿಳೆ+ಯುವಕ’ ತಂತ್ರದ ಎದುರು ಮಂಕಾದ ಆರ್‌ಜೆಡಿ ‘ಮುಸ್ಲಿಂ+ಯಾದವ’ ಸೂತ್ರದಿಂದ ಗೆದ್ದು ಬೀಗಿದೆ. ಚುನಾವಣೆಗೂ ಮೊದಲೇ ಮಹಿಳೆಯರ ಖಾತೆಗೆ ಎನ್‌ಡಿಎ ₹10000 ವರ್ಗದಿಂದ ಮತ ಮ್ಯಾಜಿಕ್‌ ಆಗಿದೆ.

ಗೆಲುವಿಗೆ ಪಂಚ ಕಾರಣಗಳು

1. ಮಹಿಳೆಯರಿಗೆ ₹10000 ಗಿಫ್ಟ್‌ಬಿಹಾರದ 1.1 ಕೋಟಿ ಮಹಿಳೆಯರಿಗೆ ಚುನಾವಣೆಗೂ ಮೊದಲೇ ಎನ್‌ಡಿಎ ಸರ್ಕಾರ ‘ಮಹಿಳಾ ರೋಜಗಾರ್‌’ನಡಿ ₹10 ಸಾವಿರ ನೀಡಿತು. ‘ಬಡ’ ಬಿಹಾರದಲ್ಲಿ ಇದು ದೊಡ್ಡ ಮೊತ್ತ. ಮಹಾಗಠಬಂಧನ ಬೆಟ್ಟದಷ್ಟು ಗ್ಯಾರಂಟಿ ಘೋಷಿಸಿದ್ದರೂ ಜಾರಿಯಾಗುತ್ತಿದ್ದುದು ಗೆದ್ದ ಮೇಲೆ. ಆದರೆ ಗೆಲ್ಲುವ ಮೊದಲೇ ಬಂದ ಹಣ ಬಿಹಾರಿ ಮಹಿಳೆಯರನ್ನು ಜಾತಿ, ಧರ್ಮ ಮೀರಿ ಎನ್‌ಡಿಎಯತ್ತ ಸೆಳೆಯಿತು.

2. ಮಹಿಳೆಯರ ಆಶೀರ್ವಾದ

ಜಂಗಲ್‌ರಾಜ್‌ನಿಂದ ಶಾಲೆ ತೊರೆದಿದ್ದ ಹೆಣ್ಣುಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಹೆಣ್ಣುಮಕ್ಕಳಿಗೆ ಸೈಕಲ್‌ ಕೊಡುವ ಯೋಜನೆಯನ್ನು ನಿತೀಶ್‌ ಮೊದಲ ಬಾರಿ ಸಿಎಂ ಆದಾಗ ಜಾರಿಗೆ ತಂದಿದ್ದರು. ಜತೆಗೆ 2000 ರು. ಕೂಡ ಪ್ರಕಟಿಸಿದ್ದರು. ಅದರ ಫಲಾನುಭವಿಗಳು ಈಗ ನವಮತದಾರರು! ಜತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ಕೊಟ್ಟಿದ್ದು ನಿತೀಶ್‌. ಇದರ ಜತೆಗೆ ಈಗ 10 ಸಾವಿರ ರು. ಕೊಟ್ಟಿದ್ದು ಭರ್ಜರಿ ಫಲ ಕೊಟ್ಟಿತು.

3. ಪಾನನಿಷೇಧ

ಪ್ರಮುಖ ಆದಾಯ ಮೂಲವಾಗಿದ್ದರೂ ಬಿಹಾರದಲ್ಲಿ ಪಾನ ನಿಷೇಧ ಜಾರಿಗೆ ತಂದಿದ್ದು ನಿತೀಶ್‌. ಅದರಿಂದಾಗಿ ಹೆಣ್ಣುಮಕ್ಕಳಿಗೆ ಗೃಹಹಿಂಸೆ ತಪ್ಪಿದೆ. ಅಧಿಕಾರಕ್ಕೆ ಬಂದರೆ ಪಾನ ನಿಷೇಧ ಹಿಂಪಡೆಯುವುದಾಗಿ ಪ್ರಶಾಂತ್‌ ಕಿಶೋರ್‌, ನಾವು ಪರಿಶೀಲಿಸುತ್ತೇವೆ ಎಂದು ತೇಜಸ್ವಿ ಯಾದವ್‌ ಅವರು ಪುರುಷರನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದರು. ಆದರೆ ಮಹಿಳೆಯರು ಬೇರೆಯದೇ ತೀರ್ಪು ಕೊಟ್ಟರು.

4. ಜಂಗಲ್‌ ರಾಜ್‌ ದುಃಸ್ವಪ್ನ

ಲಾಲು ಕಾಲದಲ್ಲಿ ಅಪಹರಣ, ಕೊಲೆ, ಸುಲಿಗೆ, ದರೋಡೆ ವ್ಯಾಪಕವಾಗಿದ್ದವು. ಇದರಿಂದಾಗಿ ಬಿಹಾರ ಎಂದರೆ ಜಂಗಲ್‌ರಾಜ್‌ ಎಂದು ಕುಖ್ಯಾತಿಗೀಡಾಗಿತ್ತು. ಅದನ್ನು ವಿಶೇಷ ಯುವ ಮತದಾರರಿಗೆ ಪದೇಪದೇ ನೆನಪಿಸುವಲ್ಲಿ ಎನ್‌ಡಿಎ ಸಫಲವಾಯಿತು. ಇದು ಯಾವ ಮಟ್ಟಿಗಿತ್ತೆಂದರೆ, ಮಹಾಗಠಬಂಧನ ಪೋಸ್ಟರ್‌ಗಳಲ್ಲಿ ಲಾಲು ಚಿತ್ರವನ್ನೇ ಆರ್‌ಜೆಡಿ ಬಳಸಲಿಲ್ಲ. ಆದರೂ ಜಂಗಲ್‌ರಾಜ್‌ ಭಯದಿಂದ ಹೊಡೆತ ಬಿತ್ತು.

5. ಸೀಟು ಹಂಚಿಕೆ

ಚುನಾವಣೆ ವೇಳೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಎನ್‌ಡಿಎ ಅತ್ಯುತ್ತಮವಾಗಿ ನಿರ್ವಹಿಸಿತು. ಮೊದಲೇ ಅಭ್ಯರ್ಥಿಗಳನ್ನು ಘೋಷಿಸಿತು. ಗೊಂದಲ ಮಾಡಿಕೊಳ್ಳಲಿಲ್ಲ. ಆದರೆ ಮಹಾಗಠಬಂಧನದಲ್ಲಿ ಅದು ಎಲ್ಲವೂ ಸರಿ ಇರಲಿಲ್ಲ. ನಾಮಪತ್ರ ಸಲ್ಲಿಕೆ ಮುಕ್ತಾಯವಾದರೂ ಸೀಟು ಹಂಚಿಕೆ ಅಂತಿಮವಾಗದೆ ಗೊಂದಲವಾಗಿತ್ತು. ಆರ್‌ಜೆಡಿ ಹೆಚ್ಚು ಸ್ಥಾನ ಸ್ಪರ್ಧಿಸುವ ಬದಲು ಮಿತ್ರರಿಗೆ ಸೀಟು ಧಾರೆ ಎರೆಯಿತು.

10ನೇ ಬಾರಿ ನಿತೀಶ್‌ ಸಿಎಂ?

ಬಿಜೆಪಿ ಪ್ರಬಲವಾಗಿ ಹೊರಹೊಮ್ಮಿರುವುದರಿಂದ ಸಿಎಂ ಯಾರಾಗಬಹುದು ಎಂಬ ಪ್ರಶ್ನೆ ಎದ್ದಿದೆ. ಕಳೆದ ಬಾರಿ ತಾನೇ ಹೆಚ್ಚು ಸೀಟು ಗೆದ್ದಿದ್ದರೂ ಬಿಜೆಪಿಯು ನಿತೀಶ್‌ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿತ್ತು. ಈ ಸಲವೂ ಅದೇ ಪಾಲನೆಯಾಗಬಹುದು. 10ನೇ ಬಾರಿ ಅವರು ಸಿಎಂ ಆಗಬಹುದು. ಒಂದು ವೇಳೆ ಬಿಜೆಪಿಗರೇ ಸಿಎಂ ಆದರೆ, ಅವರು ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಲಿದ್ದಾರೆ.

ಮೊದಲ ಬಾರಿ ಬಿಜೆಪಿ ಬಿಹಾರದ ದೊಡ್ಡ ಪಕ್ಷ

89 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಬಿಜೆಪಿ ಬಿಹಾರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2020ರಲ್ಲಿ ಕೇವಲ 1 ಸ್ಥಾನದಿಂದ ಅತಿದೊಡ್ಡ ಪಕ್ಷ ಸ್ಥಾನವನ್ನು ಆರ್‌ಜೆಡಿ ಎದುರು ಕಳೆದುಕೊಂಡಿತ್ತು.

ಬಿಜೆಪಿ, ಜೆಡಿಯು ಸ್ಟ್ರೈಕ್‌ರೇಟ್‌ 85%

ಎನ್‌ಡಿಎ ಭರ್ಜರಿ ಬಹುಮತಕ್ಕೆ ಸ್ಪರ್ಧಿಸಿದ ಬಹುತೇಕ ಸ್ಥಾನಗಳಲ್ಲಿ ಗೆದ್ದಿರುವುದು ಪ್ರಮುಖ ಕಾರಣ. ಎರಡೂ ಪಕ್ಷಗಳ ಸ್ಟ್ರೈಕ್‌ರೇಟ್‌ 85% ಇದೆ. ಬಿಜೆಪಿಯದ್ದು 90%ರಷ್ಟಿದೆ. ಆದರೆ ಆರ್‌ಜೆಡಿಯದ್ದು 35% ಹಾಗೂ ಕಾಂಗ್ರೆಸ್ಸಿನದ್ದು 10% ಮಾತ್ರವೇ ಇದೆ.

ಆರ್‌ಜೆಡಿಯನ್ನೂ ಮುಳುಗಿಸಿದ ಕೈ

ಬಿಹಾರದಲ್ಲಿ ಸ್ಥಾನ ಗಳಿಕೆಯಲ್ಲಿ ಕುಸಿತ ಕಂಡಿದ್ದರೂ ಶೇಕಡಾವಾರು ಮತ ಗಳಿಕೆಯಲ್ಲಿ ಆರ್‌ಜೆಡಿ (ಶೇ.22) ಪ್ರಥಮ ಸ್ಥಾನದಲ್ಲಿದೆ. ಆದರೆ ಅವು ಸ್ಥಾನವಾಗಿ ಪರಿವರ್ತನೆಯಾಗಿಲ್ಲ. ಜತೆಗೆ ಕಾಂಗ್ರೆಸ್‌ ಜತೆ ಮಾಡಿಕೊಂಡ ಮೈತ್ರಿಯಿಂದ ಲಾಭವಾಗಿಲ್ಲ. 61 ಸ್ಥಾನಗಳ ಪೈಕಿ 6 ಸ್ಥಾನ ಗೆದ್ದಿದೆ. ಈ ಸ್ಥಾನಗಳಲ್ಲಿ ಆರ್‌ಜೆಡಿ ಸ್ಪರ್ಧಿಸಿದ್ದರೆ ಆ ಪಕ್ಷವೇ ಇನ್ನಷ್ಟು ಸ್ಥಾನ ಗೆಲ್ಲಬಹುದಿತ್ತು ಎಂಬ ವಿಶ್ಲೇಷಣೆ ಇದೆ.

ಪ್ರಶಾಂತ್‌ ಕಿಶೋರ್ ಶೂನ್ಯ ಸಂಪಾದನೆ

ನರೇಂದ್ರ ಮೋದಿ, ಸ್ಟಾಲಿನ್‌ ಅಷ್ಟೇ ಏಕೆ 2015ರಲ್ಲಿ ಬಿಹಾರದಲ್ಲೇ ನಿತೀಶ್‌ ಕುಮಾರ್‌ ಪರ ತಂತ್ರಗಾರಿಕೆ ಮಾಡಿ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ರಾಜಕಾರಣಿಯಾಗಿ ಹಿನ್ನಡೆ ಅನುಭವಿಸಿದ್ದಾರೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಅವರ ಪಕ್ಷ ಈ ಚುನಾವಣೆಯಲ್ಲಿ ಸೊನ್ನೆ ಸುತ್ತಿದೆ.

ಬೇರೆಯವರ ಗೆಲ್ಲಿಸುವ ಪಿಕೆ ತಾವೇ ಸೋತುಸುಣ್ಣವಾದರು!

ಪಟನಾ: ನರೇಂದ್ರ ಮೋದಿ, ಜಗನ್‌, ಸ್ಟಾಲಿನ್‌, ಮಮತಾ, ನಿತೀಶ್‌, ಕೇಜ್ರಿವಾಲ್‌ ಮೊದಲಾದವರನ್ನು ಅಧಿಕಾರದ ಗದ್ದುಗೆ ಏರಿಸುವಲ್ಲಿ ಸಫಲರಾಗಿದ್ದ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್‌, ಬಿಹಾರದಲ್ಲಿ ತಮ್ಮ ಗೆಲುವನ್ನು ತಾವೇ ಹುಡುಕಿಕೊಳ್ಳಲಾಗದೇ ಅವಮಾನಕ್ಕೆ ತುತ್ತಾಗಿದ್ದಾರೆ.

2018ರಲ್ಲಿ ಜೆಡಿಯು ಸಖ್ಯದಿಂದ ಹೊರಬಂದಿದ್ದ ಪ್ರಶಾಂತ್‌ ಕಿಶೋರ್‌, ರಾಜ್ಯದಲ್ಲಿ ಜೆಡಿಯು ಮತ್ತು ನಿತೀಶ್‌ಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವ ಕನಸಿನೊಂದಿಗೆ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. 2024ರಲ್ಲಿ ಜನ ಸುರಾಜ್‌ ಪಕ್ಷವನ್ನು ಸ್ಥಾಪಿಸಿ, ರಾಜ್ಯವ್ಯಾಪಿ 3000 ಕಿ.ಮೀ ಪಾದಯಾತ್ರೆ ಮಾಡಿ ಪಕ್ಷ ಸಂಘಟನೆ ಯತ್ನ ಮಾಡಿದ್ದರು. ನಿತೀಶ್‌ರ ಆಡಳಿತ ವಿರೋಧಿ ಅಲೆ, ರಾಜ್ಯದಲ್ಲಿ ಬೇರು ಬಿಡದ ಕಾಂಗ್ರೆಸ್‌, ಆರ್‌ಜೆಡಿಯಲ್ಲಿನ ಕೌಟುಂಬಿಕ ಬಿಕ್ಕಟ್ಟು ತಮಗೆ ನೆರವಾಗಬಹುದೆಂಬ ನಿರೀಕ್ಷೆಯಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಆದರೆ ಗಮನ ಸೆಳೆಯದ ಅವರ ಚುನಾವಣಾ ಭರವಸೆಗಳು, ಮೋದಿ- ನಿತೀಶ್‌ ಮ್ಯಾಜಿಕ್ ಪಿಕೆ ಪಕ್ಷವನ್ನು ಧೂಳೀಪಟ ಮಾಡಿದೆ. ಮೊದಲ ಯತ್ನದಲ್ಲೇ ರಾಜ್ಯದ ಜನತೆ ಅವರನ್ನು ಪೂರ್ಣವಾಗಿ ತಿರಸ್ಕರಿಸುವ ಮೂಲಕ ಭಾರೀ ಪೆಟ್ಟು ನೀಡಿದ್ದಾರೆ.

ಬಿಹಾರ ಆಯ್ತು, ಮುಂದೆ

ಬಂಗಾಳದಲ್ಲೂ ಗೆಲ್ತೀವಿ

ಎನ್‌ಡಿಎ ಜಯಭೇರಿಯೊಂದಿಗೆ ‘ಎಂ-ವೈ’ (ಮಹಿಳೆಯರು ಮತ್ತು ಯುವಕರು) ಎಂಬ ಹೊಸ ಸೂತ್ರವನ್ನು ಬಿಹಾರ ನೀಡಿದೆ. ತನ್ಮೂಲಕ ಜಂಗಲ್‌ರಾಜ್‌ ಜನರ ಕೋಮುವಾದಿ ‘ಎಂ-ವೈ’ (ಮುಸ್ಲಿಂ- ಯಾದವ) ಸೂತ್ರವನ್ನು ಧ್ವಂಸಗೊಳಿಸಿದೆ. ಗಂಗೆ ಬಿಹಾರದಿಂದಲೇ ಪಶ್ಚಿಮ ಬಂಗಾಳಕ್ಕೆ ಹೋಗುತ್ತಾಳೆ. ಪಶ್ಚಿಮ ಬಂಗಾಳದಲ್ಲೂ ಜಂಗಲ್‌ರಾಜ್‌ ಕಿತ್ತೊಗೆಯುತ್ತೇವೆ.

- ನರೇಂದ್ರ ಮೋದಿ, ಪ್ರಧಾನಿ