ಬೆಂಗಳೂರು : ‘ಸಂಘಟನಾತ್ಮಕಾಗಿ ಕರ್ನಾಟಕ ಬಿಜೆಪಿ ಘಟಕ ತುಂಬಾ ಹಿಂದುಳಿದಿದೆ’ ಎಂದು ತೀಕ್ಷ್ಣವಾಗಿ ಹೇಳಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌, ‘ಎರಡು ವರ್ಷಗಳ ನಂತರ ಎದುರಾಗುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳ ರೀತಿ ಕೆಲಸ ಆರಂಭಿಸಬೇಕು’ ಎಂದು ತಾಕೀತು ಮಾಡಿದ್ದಾರೆ.

‘ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕಾಂಗ್ರೆಸ್ಸಿನ ವೈಫಲ್ಯಗಳಿಂದ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿ ಮುಖಂಡರು ಇರಬಾರದು. ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ರಾಜ್ಯ ಮಟ್ಟದಲ್ಲಿ ಕಳೆದ ಮೂರು ವರ್ಷಗಳ ಆಡಳಿತ ವೈಫಲ್ಯ ಕುರಿತು ಚಾರ್ಜ್‌ಶೀಟ್‌ ತಯಾರಿಸಿ ಜನಪರ ಹೋರಾಟ ಮಾಡಿ’ ಎಂದೂ ಸೂಚನೆ ನೀಡಿದ್ದಾರೆ.

ಎರಡು ದಿನಗಳ ರಾಜ್ಯ ಭೇಟಿ:

ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಅವರು ಭಾನುವಾರ ಪಕ್ಷದ ಕಚೇರಿಯಲ್ಲಿ ಹಾಲಿ ಹಾಗೂ ಮಾಜಿ ಸಂಸದರು, ಶಾಸಕರು ಮತ್ತು ಜಿಲ್ಲಾಧ್ಯಕ್ಷರು ಸೇರಿ ರಾಜ್ಯ ಪದಾಧಿಕಾರಿಗಳ ಸಂಘಟನಾತ್ಮಕ ಸಭೆ ನಡೆಸಿದರು. ಬಳಿಕ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯನ್ನೂ ಉದ್ದೇಶಿಸಿ ಮಾತನಾಡಿದರು.


ಪಕ್ಷದ ಮುಖಂಡರು, ಶಾಸಕರು ಕಾರ್ಯಕರ್ತರೊಂದಿಗೆ ಆತ್ಮೀಯ ಸಂಬಂಧ ಇರಿಸಿಕೊಳ್ಳಬೇಕು. ಜನರೊಂದಿಗೆ ಸಂವಾದ ನಡೆಸಬೇಕು. ಜನಪರ ಕಾರ್ಯಗಳ ಮೂಲಕ ಜನರ ಮನಸ್ಸು ಗೆಲ್ಲಬೇಕು. ಜನಪರ ಹೋರಾಟಗಳ ಮೂಲಕ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೇವಲ ಗ್ಯಾರಂಟಿ ಪ್ರಚಾರದಲ್ಲಿ ತೊಡಗಿದೆ. ಆದರೆ, ಜನರ ಬದುಕಿಗೇ ಗ್ಯಾರಂಟಿ ಇಲ್ಲದಂತಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಹತಾಶರಾಗಿದ್ದಾರೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳಿವೆ. ಈ ಎಲ್ಲ ವೈಫಲ್ಯಗಳು ಈ ಸರ್ಕಾರದಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ. ಕೇವಲ ವೈಫಲ್ಯಗಳಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ವೈಫಲ್ಯತೆ ಕಾರಣಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಮುಖಂಡರು ಇರಬಾರದು ಎಂದು ಕಿವಿಮಾತು ಹೇಳಿದರು.

ತಮ್ಮ ಮಾತಿಗೆ ಪೂರಕವಾಗಿ ತಮಿಳುನಾಡು ಉದಾಹರಣೆ ಕೊಟ್ಟ ರಾಷ್ಟ್ರೀಯ ಅಧ್ಯಕ್ಷರು, ಅಲ್ಲಿ ಡಿಎಂಕೆ ಸರ್ಕಾರದ ವೈಫಲ್ಯಗಳು ಎದ್ದು ಕಾಣುತ್ತಿದ್ದವು. ಈ ವೈಫಲ್ಯಗಳಿಂದ ನಾವು ಅಧಿಕಾರಕ್ಕೆ ಬರುತ್ತೇವೆಂದು ಎಐಡಿಎಂಕೆ ಭಾವಿಸಿತ್ತು. ಈ ಮಧ್ಯೆ ಟಿವಿಕೆ ಪಕ್ಷ ಡಿಎಂಕೆ ಸರ್ಕಾರದ ವೈಫಲ್ಯಗಳ ಲಾಭ ಪಡೆಯಿತು. ಹೀಗಾಗಿ ಬಿಜೆಪಿ ನಾಯಕರು ನಮ್ಮದೇ ಅಧಿಕಾರ ಎಂದು ಸುಮ್ಮನೆ ಕೂಡಬಾರದು. ಪರ್ಯಾಯ ಕೊಡಬೇಕು. ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರು ಪರ್ಯಾಯ ಕೊಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಅಂತಹ ಪರ್ಯಾಯ ಕೊಡಬೇಕು. ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಥತೆ ನಡೆಸಬೇಕು ಎಂದು ವಿವರಿಸಿದರು.

ಉದ್ಯೋಗ ಸೃಷ್ಟಿ, ಮೂಲಸೌಕರ್ಯಕ್ಕೆ ಒತ್ತು ನೀಡುವ, ರೈತರಿಗೆ ಭರವಸೆ ನೀಡುವಂತಹ ವಿಶ್ವಾಸಾರ್ಹ ಪರ್ಯಾಯ ಕಟ್ಟಿಕೊಡಬೇಕು. ಅದಕ್ಕಾಗಿ ಕಾಂಗ್ರೆಸ್‌ನ ವೈಫಲ್ಯಗಳನ್ನು ತಿಳಿದುಕೊಂಡು ನಿರಂತರ ಜನಪರ ಹೋರಾಟ ಮಾಡಬೇಕು. ಜನರೊಂದಿಗೆ ಸಂವಾದ ನಡೆಸಬೇಕು. ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ದೇಶದಲ್ಲೇ ಬಲವಾದ ಸಂಘಟನೆ ಇದೆ:

ಕರ್ನಾಟಕ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ದೇಶದಲ್ಲೇ ಬಲವಾದ ಸಂಘಟನೆ ಹೊಂದಿರುವ ರಾಜ್ಯ. ಇಲ್ಲಿ ನಾವು ಜನಪರ ಹೋರಾಟ ಮಾಡಿದರೆ, ಜನರೇ ನಮಗೆ ಅಧಿಕಾರಕ್ಕೆ ಬರುವ ಶಕ್ತಿ ಕೊಡುತ್ತಾರೆ ಎಂದು ಹೇಳಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕರ್ನಾಟಕದಿಂದಲೂ ಕೆಲ ಸಂಗತಿಗಳನ್ನು ಕಲಿತಿದ್ದೇನೆ. ತನ್ನ ಸಾರ್ವಜನಿಕ ಜೀವನದಲ್ಲಿ ಅಳವಡಿಕೊಂಡಿದ್ದೇನೆ ಎಂದು ನವೀನ್‌ ಹೇಳಿದರು.

ಮೂರು ದಿನದ ಪ್ರವಾಸ:

ಬಳಿಕ ಸುದ್ದಿಗಾರರಿಗೆ ಸಭೆಯ ಮಾಹಿತಿ ನೀಡಿದ ಮಾಜಿ ಸಚಿವ ಸಿ.ಟಿ.ರವಿ, ಪಕ್ಷದ ಅಜೆಂಡಾಕ್ಕಿಂತ ವ್ಯಕ್ತಿಗತವಾಗಿ ಯಾರೂ ದೊಡ್ಡವರಲ್ಲ. ರಾಜ್ಯದ ಹಿತಕ್ಕಾಗಿ ನೀವು ಕೆಲಸ ಮಾಡಿದರೆ, ರಾಜ್ಯದ ಜನ ಪಕ್ಷದ ಹಿತ ರಕ್ಷಿಸುವ ಕೆಲಸ ಮಾಡುತ್ತಾರೆ ಎಂಬ ಮಾತನ್ನು ರಾಷ್ಟ್ರೀಯ ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಕೆಲ ಸಲಹೆಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮೂರು ದಿನ ಕಾಲ ಪ್ರವಾಸಕ್ಕೆ ಬರುತ್ತೇನೆ. ಈ ವೇಳೆ ವಿಸ್ತೃತ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ವಿಧಾನ ಪರಿಷತ್‌ನ 4 ಸ್ಥಾನಗಳು, ವಿಧಾನಸಭೆಯ 2 ಸ್ಥಾನಗಳಿಗೆ ಉಪಚನಾವಣೆ, ಜಿಬಿಎ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳತ್ತ ಗಮನ ಕೊಡಿ. ತಂಡ ರಚನೆ ಮಾಡಿಕೊಂಡು ಚುನಾವಣೆ ಗೆಲ್ಲಲು ಬೇಕಾದ ಕಾರ್ಯ ಯೋಜನೆಗಳನ್ನು ತಯಾರಿಸಿ. ಸಂಘಟನಾತ್ಮಕವಾಗಿ ತಂಡವಾಗಿ ರಾಜ್ಯದ ಕೋರ್‌ ಕಮಿಟಿ, ಎಲ್ಲಾ ಜಿಲ್ಲೆಗಳಿಗೆ ಒಂದು ದಿನ ಕೊಟ್ಟು ಜಿಲ್ಲಾ ಕೋರ್‌ ಕಮಿಟಿ ಜೊತೆಗೆ ಸಂವಹನ ನಡೆಸಬೇಕು. ಆಯಾಯ ಜಿಲ್ಲೆಗಳ ಪರಿಸ್ಥಿತಿ ಅವಲೋಕನ ನಡೆಸಬೇಕು. ಸಮಸ್ಯೆಗಳು, ಸವಾಲುಗಳಿಗೆ ಆಯಾಯ ಜಿಲ್ಲೆಗಳಿಗೆ ನೇತೃತ್ವ ಕೊಡುವ ರೀತಿಯಲ್ಲಿ ರಾಜ್ಯ ಕೋರ್‌ ಕಮಿಟಿ ಯೋಜನೆ ರೂಪಿಸುವಂತೆ ತಿಳಿಸಿದ್ದಾರೆ ಎಂದು ರವಿ ಹೇಳಿದರು.