ಸೋಲನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ : ಮಾಲೂರಿನತ್ತ ತಲೆ ಹಾಕೋಲ್ಲ ಎಂದು ನಿಖಿಲ್ ಶಪಥ

| N/A | Published : Jul 13 2025, 11:48 AM IST

Nikhil kumaraswamy
ಸೋಲನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ : ಮಾಲೂರಿನತ್ತ ತಲೆ ಹಾಕೋಲ್ಲ ಎಂದು ನಿಖಿಲ್ ಶಪಥ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದಲ್ಲಿ ನನ್ನ ಮುಂದಿನ‌ ಸ್ಪರ್ಧೆ ಕುರಿತು ತೀರ್ಮಾನ ಮಾಡಿಲ್ಲ. ಎಷ್ಟೇ ಸಲ‌ ಸೋತರೂ ಕಳೆಗುಂದುವುದು ನಮ್ಮ ರಕ್ತದಲ್ಲೇ ಇಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

 ಮಾಲೂರು (ಕೋಲಾರ) :  ಹಾಸನದಲ್ಲಿ ನನ್ನ ಮುಂದಿನ‌ ಸ್ಪರ್ಧೆ ಕುರಿತು ತೀರ್ಮಾನ ಮಾಡಿಲ್ಲ. ಎಷ್ಟೇ ಸಲ‌ ಸೋತರೂ ಕಳೆಗುಂದುವುದು ನಮ್ಮ ರಕ್ತದಲ್ಲೇ ಇಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಾಲೂರು-ಹೊಸೂರು ರಸ್ತೆಯ ಆರ್.ಜಿ ಕಲ್ಯಾಣ ಮಂಟಪದಲ್ಲಿ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜನತಾದಳದಿಂದ ಬೆಳೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಈಗ ಜನತಾದಳ ಎಲ್ಲಿದೆ ಎಂದು ಕೇಳುತ್ತಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಿ ಮನೆಗೆ ಕಳುಹಿಸಲಿದ್ದು, ಒಂದು ವೇಳೆ ಮತ್ತೊಮ್ಮೆ ಅವರೇ ಆಯ್ಕೆಯಾದರೆ ನಾನು ಮಾಲೂರಿನತ್ತ ತಲೆ ಹಾಕುವುದಿಲ್ಲ ಎಂದು ಶಪಥ ಮಾಡಿದರು.

ರಾಜ್ಯದಲ್ಲಿ ಭ್ರಷ್ಟಚಾರ ಮಾಡುವ ಶಾಸಕರು ಹೆಚ್ಚಾಗಿರೋದಕ್ಕೆ ಜನತೆ ಕಷ್ಟ ಅನುಭವಿಸುವಂತಾಗಿದೆ. ಭೂಹಗರಣ, ಡೇರಿ ನೇಮಕಾತಿಯಲ್ಲಿ ಅವ್ಯವಹಾರ ಸೇರಿ ಹೈಕೋರ್ಟ್‌ನಲ್ಲಿ ನಂಜೇಗೌಡರ ವಿರುದ್ಧ ಪ್ರಕರಣಗಳಿವೆ. ಕೋವಿಡ್ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಇ.ರಾಮೇಗೌಡರು ತಾಲೂಕಿನ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಆದರೂ ಚುನಾವಣೆ ಫಲಿತಾಂಶ ಅವರಿಗೆ ಆಘಾತ ಉಂಟುಮಾಡಿದೆ. ಸೋಲಿನ ನೋವು ನನಗೂ ಅರ್ಥ ಆಗುತ್ತದೆ ಎಂದರು.

ಕುರ್ಚಿಗಾಗಿ ದೇಹಲಿ ಯಾತ್ರೆ:

ಪ್ರಸ್ತುತ ರಾಜ್ಯದ ನಾಯಕರಿಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆಯಾಗಿದ್ದು, ಒಬ್ಬರು ಸಿಎಂ ಕುರ್ಚಿಗಾಗಿ, ಇನ್ನೊಬ್ಬರು ಡಿಸಿಎಂ ಕುರ್ಚಿಗಾಗಿ, ಮತ್ತೊಬ್ಬರು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗುತ್ತಿದ್ದಾರೆ. ನಮ್ಮ ನಾಡಿನ ಸಂಪತ್ತನ್ನು ನಾಡಿನ ಅಭಿವೃದ್ಧಿಗೆ ಬಳಸದೆ ಗ್ಯಾರಂಟಿ ಹೆಸರಲ್ಲಿ ಸುಳ್ಳು ಭರವಸೆ ನೀಡಿ ವೆಚ್ಚ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಮತ್ತೆ ಸಿಎಂ ಆಗುವಂತೆ ಜನರ ಆಸೆ:

ಜನತಾದಳ ಹುಟ್ಟಿದ್ದೆ ಜನರಿಗಾಗಿ. ಅಧಿಕಾರ ಇರಲಿ ಇಲ್ಲದಿರಲಿ ನಾವು ಜನರ ಪರ ಇರುತ್ತೇವೆ. ಈಗ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮ ಆರಂಭಿಸಿದ್ದೇವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಉಳಿದಿದ್ದು, ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಚರ್ಚೆ ಜನರಲ್ಲಿ ಆರಂಭವಾಗಿದೆ. ಜನತಾದಳ ರಾಜ್ಯದಲ್ಲಿ ಮತ್ತೊಮ್ಮೆ ಗಟ್ಟಿಗೊಳಿಸಲು ಕಾರ್ಯಕರ್ತರು ಶಪಥ ಮಾಡಬೇಕು ಎಂದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿದರು.

Read more Articles on