ಸಿಎಂ ಹುದ್ದೆ ಏರುವ ಆತುರ ಇಲ್ಲ, ನನ್ನ ಗುರಿ ನನಗೆ ಗೊತ್ತಿದೆ: ಡಿಕೆಶಿ

| N/A | Published : Oct 12 2025, 06:14 AM IST

DK Shivakumar
ಸಿಎಂ ಹುದ್ದೆ ಏರುವ ಆತುರ ಇಲ್ಲ, ನನ್ನ ಗುರಿ ನನಗೆ ಗೊತ್ತಿದೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಮುಖ್ಯಮಂತ್ರಿಯಾಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ. ನನಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಆತುರವೂ ಇಲ್ಲ. ಆದರೆ, ಕೆಲ ಮಾಧ್ಯಮಗಳು ಹೇಳಿಕೆ ತಿರುಚಿ ವಿವಾದ ಸೃಷ್ಟಿಸುತ್ತಿವೆ.

  ಬೆಂಗಳೂರು :  ನಾನು ಮುಖ್ಯಮಂತ್ರಿಯಾಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ. ನನಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಆತುರವೂ ಇಲ್ಲ. ಆದರೆ, ಕೆಲ ಮಾಧ್ಯಮಗಳು ಹೇಳಿಕೆ ತಿರುಚಿ ವಿವಾದ ಸೃಷ್ಟಿಸುತ್ತಿವೆ. ಇದು ಮುಂದುವರೆದರೆ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಶನಿವಾರ ಲಾಲ್‌ಬಾಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಭೇಟಿಗೆ ಸಾರ್ವಜನಿಕರು ಬಂದಿದ್ದರು. ಆಗ, ಅವರಲ್ಲಿ ಕೆಲವರು ನೀವು ಮುಖ್ಯಮಂತ್ರಿಯಾಗಬೇಕು ಎಂದರು. ಜತೆಗೆ, ಆ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ, ಕೆಲ ಮಾಧ್ಯಮಗಳು ಸಿಎಂ ಆಗುವ ಕಾಲ ಬರುತ್ತಿದೆ ಎಂದು ನಾನೇ ಹೇಳಿದ್ದಾಗಿ ಸುದ್ದಿ ತಿರುಚಿ ಪ್ರಸಾರ ಮಾಡುತ್ತಿವೆ. ಮಾಧ್ಯಮಗಳು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬಾರದು ಎಂದರು.

ನನಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಆತುರ ಇಲ್ಲ. ನಾನು ಸಾರ್ವಜನಿಕರ ಸೇವೆ ಮಾಡಲು ಬಂದಿದ್ದೇನೆ. ರಾಜಕಾರಣ ಮಾಡುವುದಕ್ಕಲ್ಲ. ಜನರ ಸೇವೆಗಾಗಿ ಹಗಲು ರಾತ್ರಿ ತಿರುಗುತ್ತಿದ್ದೇನೆ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೋ ಕೊಡಲಿ. ಮಾಧ್ಯಮಗಳು ನನ್ನ ಹೇಳಿಕೆ ತಿರುಚುವುದಾದರೆ ನಾನು ಮಾಧ್ಯಮಗಳಿಗೆ ಸಹಕಾರ ಕೊಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ. ಮಾಧ್ಯಮಗೋಷ್ಠಿ ನಡೆಸುವುದೂ ಇಲ್ಲ ಎಂದು ಹೇಳಿದರು.

ನಾನು ಆ ಹೇಳಿಕೆ ಎಲ್ಲಿ ಹೇಳಿದ್ದೇನೆ?, ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ. ಆ ರೀತಿ ಹೇಳಿಲ್ಲ. ಅದರ ಅಗತ್ಯವೂ ಇಲ್ಲ. ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರಿಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ಆದರೆ, ಒಳ್ಳೆಯ ಕೆಲಸ ಬಿಟ್ಟು ವಿವಾದ ಸೃಷ್ಟಿಸಲು ಕೆಲ ಮಾಧ್ಯಮಗಳು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.

ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ, ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

Read more Articles on