ಸಾರಾಂಶ
ಬೆಂಗಳೂರು : ವೈವಿಧ್ಯಮಯ ರಾಷ್ಟ್ರವಾಗಿರುವ ಭಾರತದಲ್ಲಿ ದಕ್ಷಿಣದ ರಾಜ್ಯಗಳಂತೆ ಉತ್ತರದ ಹಿಂದಿ ಭಾಷೆಯ ರಾಜ್ಯಗಳು ತ್ರಿಭಾಷಾ ಸೂತ್ರ ಪಾಲಿಸಬೇಕು. ಮೂರನೇ ಭಾಷೆಯಾಗಿ ಕನ್ನಡ ಮತ್ತು ಇತರ ಭಾಷೆಗಳನ್ನು ಕಲಿಯಬೇಕು ಎಂದು ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಭಾನುವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಭಾರತ ಯಾತ್ರಾ ಕೇಂದ್ರ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಲೋಕನಾಯಕ ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ ಆಯೋಜಿಸಿದ್ದ ಡಾ.ರಾಮಮನೋಹರ ಲೋಹಿಯಾ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಲೋಹಿಯಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಾನು ತ್ರಿಭಾಷಾ ಸೂತ್ರದ ಪರ. ಆದರೆ, ಉತ್ತರದ ಹಿಂದಿ ಭಾಷಿಕರು ಬೇರೆ ಭಾಷೆ ಕಲಿಯುವುದಿಲ್ಲ ಎನ್ನುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎಂಬ ಭಾವನೆ ಅವರಲ್ಲಿದೆ. ಆದರೆ, ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಇಲ್ಲ. ಉತ್ತರ ಭಾರತೀಯರು ಹಿಂದಿಯೇತರ ಭಾಷೆಗಳನ್ನು ಕಲಿಯುವುದಿಲ್ಲ ಎಂದಾಗ ಹಿಂದಿಯೇತರ ಭಾಷೆಯ ಜನ ಕೆರಳುತ್ತಾರೆ. ಆಗ ಹಿಂದಿ-ಕನ್ನಡ, ಹಿಂದಿ-ತಮಿಳು ಕಿತ್ತಾಟ ಆರಂಭವಾಗುತ್ತವೆ. ಆದರೆ, ನಿಜವಾಗಿ ಹೋರಾಟ ನಡೆಯಬೇಕಿರುವುದು ಅಸಮಾನತೆಯ ಭಾಷೆ ಇಂಗ್ಲಿಷ್ ವಿರುದ್ಧ. ಏಕಂದರೆ, ಅದು ಬೇರೆ ಭಾಷೆಗಳಿಗಿಂತ ಮೇಲು ಎಂಬ ಭಾವನೆ ಇದೆ ಎಂದು ಯೋಗೇಂದ್ರ ಯಾದವ್ ಹೇಳಿದರು.
ವಚನಕಾರರು, ಸಮಾಜವಾದ, ರೈತ ಮತ್ತು ದಲಿತ ಹೋರಾಟಗಳ ನಾಡು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು. ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಗಾಂಧಿ ಮಾದರಿ, ಎಡಪಂಥೀಯ ಚಿಂತನೆಗಳ ಹೋರಾಟ ನಡೆಯುವುದಿಲ್ಲ. ಏನಿದ್ದರೂ ಸಮಾನತೆಯನ್ನು ಸಾರುವ, ನಿಜವಾದ ರಾಷ್ಟ್ರಪ್ರೇಮದ ಹೋರಾಟ ಆಗಬೇಕು. ಲೋಹಿಯಾ ಅವರನ್ನು ಹೊಸ ತಲೆಮಾರು ಮರೆತಿದೆ. ಅವರನ್ನು ಓದಿಕೊಂಡು ಹೋರಾಟ ಮಾಡಬೇಕು ಎಂದು ಯಾದವ್ ಕರೆ ನೀಡಿದರು.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಮಾತನಾಡಿ, ರಾಜಕಾರಣಿಗಳು ರಾಜಕೀಯ ಪಕ್ಷಗಳ ಗುಲಾಮರಾಗಿದ್ದೇವೆ. ಆಂತರಿಕ ಪ್ರಜಾಪ್ರಭುತ್ವ ಯಾವ ಪಕ್ಷದಲ್ಲೂ ಇಲ್ಲ. ಸದನದಲ್ಲಿ ಮುಕ್ತವಾಗಿ ಮಾತನಾಡಲು ಸ್ವಾತಂತ್ರ್ಯ ಇಲ್ಲದಂತಾಗಿದೆ. ದೇಶದಲ್ಲಿ ಕೋಮುವಾದ, ದ್ವೇಷ, ಅಸೂಯೆಯ ವಾತಾವರಣವಿದೆ. ಇದು ನಮ್ಮ ಸಮಾಜಕ್ಕೆ, ದೇಶಕ್ಕೆ ಒಳ್ಳೆಯದಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಕೇಂದ್ರ ಸರ್ಕಾರ ಇಂತಹ ಪರಿಸ್ಥಿತಿ ತಂದಿಟ್ಟಿದೆ. ಅದನ್ನು ಮಟ್ಟ ಹಾಕಲು ಯೋಗೇಂದ್ರ ಯಾದವ್ ಅವರಂತಹ ಚಿಂತಕರಿಂದ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸಂಸದ ಡಾ। ರಾಜೀವ್ ರಾಯ್, ಭಾರತ ಯಾತ್ರಾ ಕೇಂದ್ರದ ಅಧ್ಯಕ್ಷ ಡಾ। ಬಿ.ಎಲ್.ಶಂಕರ್, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‌ನ ವೀಣಾ ಮಹಾಂತೇಶ್ ಉಪಸ್ಥಿತರಿದ್ದರು.