ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ-ಜೆಡಿಎಸ್‌ನವರು ನಡೆಸುತ್ತಿರುವುದು ಪಾದಯಾತ್ರೆಯಲ್ಲ. ಅದು ಅವರ ಪಾಪ ವಿಮೋಚನಾ ಯಾತ್ರೆ. ಭ್ರಷ್ಟಾಚಾರದ ಪಾಪಗಳಿಂದ ವಿಮೋಚನೆಗೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.ನಗರದ ಡಾ.ರಾಜ್‌ಕುಮಾರ್ ಬಡಾವಣೆಯ ಮೈಷುಗರ್ ಸ್ಥಳದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿ, ವಿಪಕ್ಷಗಳು ನಡೆಸುತ್ತಿರುವ ಪಾದಯಾತ್ರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಅಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಿ ಸರ್ಕಾರ ಉರುಳಿಸಲು ನಡೆಸಿರುವ ಹುನ್ನಾರ. ಅದು ನಿಮ್ಮ ಹಣೆಯಲ್ಲೂ ಬರೆದಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಕಾಂಗ್ರೆಸ್ ಕೃಪಾಕಟಾಕ್ಷ:ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೃಪಾಕಟಾಕ್ಷದಿಂದ ವಿಜಯೇಂದ್ರ ಗೆಲುವು ಸಾಧಿಸಿದರು ಎಂದು ಅಡ್ಜಸ್ಟ್‌ಮೆಂಟ್ ರಾಜಕಾರಣದ ಗುಟ್ಟನ್ನು ಡಿ.ಕೆ.ಶಿವಕುಮಾರ್ ಬಹಿರಂಗಪಡಿಸಿದರು. ನಾಗರಾಜೇಗೌಡನಿಗೆ ಟಿಕೆಟ್ ಕೊಡಬೇಕಿತ್ತು. ಆತನಿಗೆ ಟಿಕೆಟ್ ಸಿಗದಿದ್ದಕ್ಕೆ ನೀನು ಗೆದ್ದಿದ್ದೀಯಾ. ಇಲ್ಲದಿದ್ದರೆ ನೀನು ಅಸೆಂಬ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ವಿಜಯೇಂದ್ರ ದುಬೈಗೆ ಸ್ಪೆಷಲ್ ಪೈಟ್‌ನಲ್ಲಿ ಹೋಗಿ ಅಕೌಂಟ್ ಓಪನ್ ಮಾಡಿಸ್ದಲ್ಲ. ನಿನ್ನ ಮೇಲೆ ಏಕೆ ಇನ್ನೂ ತನಿಖೆ ಮಾಡಿಸಿಲ್ಲ. ನಿನ್ನ ಬಗ್ಗೆಯೂ ಬಿಚ್ಚಿ ಹೇಳಲಾ. ಈಗ ಬೇಡ ಅದನ್ನು ಸದನದಲ್ಲಿ ಮಾತನಾಡುತ್ತೇನೆ ಎಂದು ಗುಟ್ಟನ್ನು ಹಾಗೇ ಉಳಿಸಿದರು.
ಯೂಟರ್ನ್ ಕುಮಾರ:ಯೂ ಟರ್ನ್ ಕುಮಾರ. ಕ್ಷಣಕ್ಕೊಂದು ಮಾತು, ಕ್ಷಣಕ್ಕೊಂದು ಬಣ್ಣ ಎಂದು ಎಚ್‌ಡಿಕೆ ವಿರುದ್ಧ ವ್ಯಂಗ್ಯವಾಡಿದ ಡಿಕೆಶಿ, ನುಡಿದಂತೆ ನಡೆಯಬೇಕು. ಉಲ್ಟಾ ಹೊಡೆಯಬಾರದು. ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಪ್ರಧಾನಿಯಿಂದ ಅನುಮತಿ ಕೊಡಿಸುತ್ತೇನೆ ಎಂದವನು ನೀನೆ. ಆದರೆ, ಈಗ ನಾನು ಹೇಳಿಲ್ಲ ಅಂತಿದ್ದೀಯಾ. ಮಂಡ್ಯ ಗಂಡು ಭೂಮಿ ಜನ ನಿನ್ನನ್ನು ಗೆಲ್ಲಿಸಿದ್ದಾರೆ. ನೀನು ಇಲ್ಲಿ ಬಂದು ಉತ್ತರ ಕೊಡು. ನೀನೀಗ ಕೈಗಾರಿಕಾ ಮಂತ್ರಿ. ೧೦ ಸಾವಿರ ಯುವಕರಿಗೆ ಉದ್ಯೋಗ ಕೊಡುತ್ತೇನೆ ಎಂದಿರುವೆ. ನಿನಗೆ ಏನು ಬೇಕಾದರೂ ಸಹಕಾರ ಕೊಡುತ್ತೇನೆ. ನಮ್ಮ ಯುವಕರಿಗೆ ಕೆಲಸ ಕೊಡಪ್ಪ ಸಾಕು. ನಿನಗೆ ಕೋಟಿ ನಮಸ್ಕಾರ ಹಾಕುತ್ತೇನೆ ಎಂದರು.
ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡಲಿ. ಅದಕ್ಕೆಲ್ಲಾ ಉತ್ತರ ಕೊಡುವುದಕ್ಕೆ ನಾನು ರೆಡಿಯಾಗಿದ್ದೇನೆ. ಎಲ್ಲಿಗೆ ಕರೆದರೂ ಚರ್ಚೆಗೆ ಬರಲು ಸಿದ್ಧ. ವೇದಿಕೆ ಸರಿಯಾಗಿರಬೇಕು ಎಂದ ಅವರು, ಮುಡಾದಲ್ಲಿ ಪಟ್ಟಿ ಇದೆಯಲ್ಲ ಅದರ ಬಗ್ಗೆ ಉತ್ತರ ಕೊಡು ಕುಮಾರಣ್ಣ ಎಂದು ಲೇವಡಿ ಮಾಡಿದರು.ಮೈತ್ರಿ ನಾಯಕರ ಕಿಂಡಲ್:
ನನಗೆ ಚಲುವರಾಯಸ್ವಾಮಿ, ಕೃಷ್ಣ ಭೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ಸಂತೋಷ್ ಲಾಡ್, ಮುನಿಯಪ್ಪ ಅವರ್‍ಯಾರ ಮೇಲೂ ನಂಬಿಕೆ ಇಲ್ಲ. ಆದರೆ, ನನಗೆ ಕುಮಾರಸ್ವಾಮಿ, ಯಡಿಯೂರಪ್ಪ, ಜಿ.ಟಿ.ದೇವೇಗೌಡ, ಯೋಗೇಶ್ವರ್, ಯತ್ನಾಳ್ ಮೇಲೆ ನಂಬಿಕೆ ಹೆಚ್ಚಾಗಿದೆ. ಭಾಷಣ ನಡುವೆ ಮೈತ್ರಿ ಪಕ್ಷಗಳ ನಾಯಕರ ಭಿನ್ನಾಭಿಪ್ರಾಯದ ಹೇಳಿಕೆಗಳು, ಪರಸ್ಪರ ವಿರೋಧದ ಮಾತುಗಳನ್ನೊಳಗೊಂಡ ವಿಡಿಯೋವನ್ನು ಬಹಿರಂಗ ಸಭೆಯಲ್ಲಿ ಪ್ರದರ್ಶಿಸಿ ಡಿ.ಕೆ.ಶಿವಕುಮಾರ್ ಮಜಾ ತೆಗೆದುಕೊಂಡರು.ಪಾದಯಾತ್ರೆ ವಿರುದ್ಧ ಅಸಮಾಧಾನ ಹೊರಹಾಕಿದ್ದ ಎಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಸದನದಲ್ಲಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡಿದ್ದ ಯಡಿಯೂರಪ್ಪ ವಿಡಿಯೋ. ವಿಜಯೇಂದ್ರ ವಿರುದ್ಧ ಯತ್ನಾಳ್ ಮಾತನಾಡಿರುವ ವಿಡಿಯೋ ಹಾಗೂ ಎಚ್‌ಡಿಕೆ ವಿರುದ್ಧ ಯೋಗೇಶ್ವರ್, ಅಶ್ವತ್ಥ್ ನಾರಾಯಣ ಹೇಳಿಕೆ ವಿಡಿಯೋ ಪ್ರದರ್ಶಿಸಿ ವ್ಯಂಗ್ಯವಾಡಿದರು.
ವೇದಿಕೆಯ ಎಲ್‌ಇಡಿ ಮೂಲಕ ವಿಡಿಯೋ ಪ್ರದರ್ಶಿಸಿ, ಮೈತ್ರಿ ನಾಯಕರನ್ನ ಕಿಂಡಲ್ ಮಾಡಿದ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆ, ಪೆನ್ ಡ್ರೈವ್ ಹಂಚಿಕೆ, ರೇವಣ್ಣ ಕುಟುಂಬ ವಿಚಾರದಲ್ಲಿ ಎಚ್‌ಡಿಕೆ ಯೂಟರ್ನ್ ಹೇಳಿಕೆ ತೋರಿಸಿ ಮನರಂಜನೆ ನೀಡಿದರು. ಈ ವಿಡಿಯೋಗಳನ್ನು ತೋರಿಸಿ ನಮ್ಮನ್ನ ನಂಬಬೇಡಿ ಬಿಜೆಪಿ-ಜೆಡಿಎಸ್ ನಾಯಕರನ್ನ ನಂಬಿ. ನಾನೇನು ಭಾಷಣ ಮಾಡಬೇಕಿಲ್ಲ ವಿಡಿಯೋಗಳೇ ಎಲ್ಲಾ ಹೇಳುತ್ತಿವೆ ಎಂದು ಟೀಕಿಸಿದರು.ಸಭೆಯಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಕೆ.ಎಚ್.ಮುನಿಯಪ್ಪ, ಭೈರತಿ ಸುರೇಶ್, ಎನ್.ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಲಕ್ಷ್ಮೀಹೆಬ್ಬಾಳ್ಕರ್, ಮಾಜಿ ಸಚಿವ ರಮಾನಾಥ ರೈ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಸೇರಿದಂತೆ ಇತರರಿದ್ದರು.ಸ್ಟೀಟ್ -ಫೈಟ್, ರಾಜಕೀಯ -ಫೈಟ್, ಕೋರ್ಟ್-ಫೈಟ್‌ಗೂ ಸಿದ್ಧಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್‌ನವರು ಮೊದಲು ಎನ್‌ಸಿಆರ್‌ಪಿ ರಿಪೋರ್ಟ್‌ನ್ನು ಬಿಡುಗಡೆಗೊಳಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದರು.ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನಾ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಸವಾಲಾಗಿ ಜನಾಂದೋಲನ ಸಮಾವೇಶ ನಡೆಯುತ್ತಿದೆ. ಎನ್‌ಸಿಆರ್‌ಬಿ ರಿಪೋರ್ಟ್ ಬಿಡುಗಡೆಗೊಳಿಸಿ ನಂತರ ಪಾದಯಾತ್ರೆ ಮಾಡುವಂತೆ ಚಾಲೆಂಜ್ ಮಾಡಿದರುಆ ವರದಿಯ ಪ್ರಕಾರ ದೇಶದಲ್ಲಿ 35 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ ಆಗಿದೆ. 16 ಸಾವಿರ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಿರುದ್ಯೋಗಿಗಳ ಆತ್ಮಹತ್ಯೆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. 13 ಲಕ್ಷ ಯುವತಿಯರ ನಾಪತ್ತೆ ಬಗ್ಗೆ ಯಾರೂ ಉಸಿರುಬಿಡುತ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿಯವರು ನೀವೇ ಸೈಟ್ ಕೊಟ್ಟಿರೋದು. ಇವತ್ತು ನೀವೇ ಹಗರಣದ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಕಾನೂನು ಬಾಹೀರವಾಗಿ ಮಾಡಿರುವುದನ್ನು ನಮ್ಮ ತಲೆಗೆ ಕಟ್ಟಲು ಯತ್ನಿಸುತ್ತಿದ್ದೀರಿ ಎಂದು ದೂರಿದರು.60 ಸಾವಿರ ಕೋಟಿ ಬಡವರ ಅಕೌಂಟಿಗೆ ಹಾಕಿದ ಸಿಎಂ ಸಿದ್ದರಾಮಯ್ಯ. ಜಿಎಸ್‌ಟಿ ವಿಚಾರವಾಗಿ ದೆಹಲಿಯಲ್ಲಿ ಗಮನ ಸೆಳೆದರು. ಹಣ ಬಿಡುಗಡೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವು. ಇದರಿಂದ ಪ್ರಧಾನಿ ಮೋದಿಗೆ ಮುಜುಗರ ಆಗಿದೆ. ಹೀಗಾಗಿ ಮೋದಿ ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿಯವರ ವಿರುದ್ಧ ಸ್ಟ್ರೀಟ್ ಫೈಟ್, ರಾಜಕೀಯ ಫೈಟ್ ಹಾಗೂ ಕೋರ್ಟ್ ಫೈಟ್ ಮಾಡೋಕೂ ಕಾಂಗ್ರೆಸ್ ಸಿದ್ಧ ಎಂದು ಖಡಕ್ಕಾಗಿ ಹೇಳಿದರು.