ಸಾರಾಂಶ
ಆಡಳಿತಾರೂಢ ಕಾಂಗ್ರೆಸ್ ಬಳಿಕ ವಿಪಕ್ಷ ಪಾಳೆಯದಲ್ಲೂ ಕುತೂಹಲ---- ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದತ್ತ ಬಿಜೆಪಿ ಹೈಕಮಾಂಡ್ ಗಮನ- ರಾಜ್ಯಾಧ್ಯಕ್ಷ ಗೊಂದಲಕ್ಕೆ ತೆರೆ ನಿರೀಕ್ಷೆ । ಪಕ್ಷ ಸಂಘಟನೆಗೆ ಹೊಸರೂಪ ಸಾಧ್ಯತೆ
---- ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಸಮರ್ಥವಾಗಿ ಕೆಲಸ ಮಾಡುತ್ತಿದ್ದರೂ ಅವರ ಬದಲಾವಣೆಗೆ ಪಕ್ಷದ ಒಂದು ಗುಂಪಿನ ಆಗ್ರಹವಿದೆ
- ಬದಲಾವಣೆ ಕುರಿತಾದ ಬೇಡಿಕೆ ಹಲವು ಬಾರಿ ಬಿಜೆಪಿ ಹೈಕಮಾಂಡ್‌ಗೆ ತಲುಪಿದೆ. ಆದರೆ ಈ ಬಗ್ಗೆ ವರಿಷ್ಠರಿಂದ ಅಸ್ಪಷ್ಟ ನಿಲುವು- ಇದರಿಂದಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಯ ಕೆಲಸಕ್ಕೆ ಅಡ್ಡಿಯಾಗಿದೆ ಎಂಬುದು ಪಕ್ಷದ ನಾಯಕರು, ಕಾರ್ಯಕರ್ತರ ಅಸಮಾಧಾನ
- ಇನ್ನೊಂದೆಡೆ ಲೋಕಸಭಾ ಚುನಾವಣೆ ವೇಳೆ ಪಕ್ಷಕ್ಕೆ ಮಾಡಲಾಗಿದ್ದ ಹಲವು ಪದಾಧಿಕಾರಿಗಳ ಸಾಮರ್ಥ್ಯದ ಬಗ್ಗೆಯೂ ಆಕ್ಷೇಪಗಳಿವೆ- ಹೀಗಾಗಿ ಬಿಹಾರ ಚುನಾವಣೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗಲಿದ್ದು, ನಂತರ ಕರ್ನಾಟಕದಲ್ಲೂ ಕ್ರಾಂತಿ ಸಂಭವ
- ಈ ಕ್ರಾಂತಿ ಹಾಲಿ ಅಧ್ಯಕ್ಷರ ಬದಲಾವಣೆಯೋ? ಮುಂದುವರಿಕೆಯೋ ಎಂಬ ಬಗ್ಗೆ ಕುತೂಹಲ. ಸಂಘಟನೆಯಲ್ಲೂ ಬದಲಾವಣೆ ಸಂಭವ==
ಸಮಸ್ಯೆ ಏನಾಗ್ತಿದೆ?ರಾಜ್ಯ ನಾಯಕತ್ವದ ಬಗ್ಗೆ ಹೈಕಮಾಂಡ್ ಸ್ಪಷ್ಟತೆ ನೀಡದೇ ಇರುವುದರಿಂದ ತಳಮಟ್ಟದ ಕಾರ್ಯಕರ್ತರು ಹಾಗೂ ಸ್ಥಳೀಯ ಮಟ್ಟದ ಮುಖಂಡರಲ್ಲಿನ ಗೊಂದಲ ಮೂಡಿರುವ ಬಗ್ಗೆ ರಾಜ್ಯದ ಹಿರಿಯ ನಾಯಕರೂ ಒಪ್ಪಿಕೊಳ್ಳುತ್ತಾರೆ.
--ನವೆಂಬರ್‌ನಲ್ಲೇ ಮುಹೂರ್ತ ಏಕೆ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಅವಧಿ ಈಗಾಗಲೇ ಮುಗಿದಿದೆ. ಆದರೆ ಮಹತ್ವದ ಬಿಹಾರ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಅವರನ್ನು ಮುಂದುವರೆಸಲು ಪಕ್ಷ ನಿರ್ಧರಿಸಿದೆ. ಹೀಗಾಗಿ ಬಿಹಾರ ಚುನಾವಣೆ ಬಳಿಕ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ಖಚಿತ. ಇದೇ ವೇಳೆ, ಬಾಕಿ ಉಳಿದಿರುವ ಕರ್ನಾಟಕ ಸೇರಿ 3-4 ರಾಜ್ಯಗಳ ರಾಜ್ಯಾಧ್ಯಕ್ಷರ ಬಗ್ಗೆ ಹೈಕಮಾಂಡ್ ನಿರ್ಧಾರ ಖಚಿತ ಎನ್ನುವುದು ದಿಲ್ಲಿ ಮೂಲಗಳ ಮಾಹಿತಿ.====
ಕನ್ನಡಪ್ರಭ ವಾರ್ತೆ ಬೆಂಗಳೂರುಅತ್ತ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಬಲವಾಗಿ ನಡೆಯುತ್ತಿರುವ ಮಧ್ಯೆಯೇ ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲೂ ಅಂಥದ್ದೇ ನವೆಂಬರ್ ಕ್ರಾಂತಿಯ ನಿರೀಕ್ಷೆ ಹೆಚ್ಚಿದೆ.
ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿಯ ಚಕ್ರ ಮುಖ್ಯಮಂತ್ರಿ ಹುದ್ದೆ ಸುತ್ತಮುತ್ತ ತಿರುಗುತ್ತಿದ್ದರೆ ಬಿಜೆಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಸುತ್ತಮುತ್ತ ಸುತ್ತುತ್ತಿದೆ. ಹೀಗಾಗಿ, ಈ ಎರಡೂ ಪಕ್ಷಗಳಿಗೂ ನವೆಂಬರ್ ತಿಂಗಳು ಮಹತ್ವದ್ದು. ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಈ ಕ್ರಾಂತಿ ನಡೆಯಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ.ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದರೂ ಅವರನ್ನು ಬದಲಾಯಿಸಿ ಬೇರೊಬ್ಬರನ್ನು ನೇಮಿಸಬೇಕು ಎಂಬ ಒಂದು ಕೂಗು ಪಕ್ಷದ ಕೆಲ ಮುಖಂಡರಿಂದ ಕೇಳಿಬರುತ್ತಲೇ ಇದೆ. ಇದಕ್ಕೆ ಹಲವು ಹಿರಿಯ ನಾಯಕರ ಮೌನ ಸಮ್ಮತಿಯೂ ಇದೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ಬರುವ ನವೆಂಬರ್‌ಗೆ ಎರಡು ವರ್ಷವಾಗಲಿದೆ. ಅಧ್ಯಕ್ಷರ ಬದಲಾವಣೆ ಕೂಗು ಮೊದಲಿನಿಂದಲೂ ಮೊಳಗುತ್ತಲೇ ಇತ್ತು. ಲೋಕಸಭಾ ಚುನಾವಣೆ ಬಳಿಕ ಈ ಕೂಗು ಬಲವಾಗಿ ದೆಹಲಿಯ ಬಿಜೆಪಿ ಹೈಕಮಾಂಡ್ ಅಂಗಳಕ್ಕೂ ಆರೋಪ-ಪ್ರತ್ಯಾರೋಪಗಳ ವಿವರ ತಲುಪಿತು. ಆದರೆ, ಪಕ್ಷದ ವರಿಷ್ಠರು ಈ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಹೊರಹಾಕದಿರುವ ಪರಿಣಾಮ ರಾಜ್ಯ ಬಿಜೆಪಿಯ ತಳಮಟ್ಟದಲ್ಲೂ ಕಾರ್ಯಕರ್ತರಲ್ಲಿ ಗೊಂದಲ ಮುಂದುವರೆಯುತ್ತಲೇ ಇದೆ. ರಾಜ್ಯ ಮಟ್ಟದಲ್ಲಿ ಹೋರಾಟಗಳು ನಡೆದರೂ ಸ್ಥಳೀಯ ಮಟ್ಟದಲ್ಲಿ ಅಷ್ಟಾಗಿ ನಡೆಯುತ್ತಿಲ್ಲ.ಮೇಲಾಗಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಲೋಕಸಭಾ ಚುನಾವಣೆ ಸಲುವಾಗಿ ತಾತ್ಕಾಲಿಕ ಎಂಬಂತೆ ರಾಜ್ಯ ಪದಾಧಿಕಾರಿಗಳ ತಂಡ ರಚಿಸಿದ್ದರು. ಆ ತಂಡದಲ್ಲಿನ ಕೆಲವರ ಸಾಮರ್ಥ್ಯ ಎಷ್ಟು ಎಂಬುದು ಲೋಕಸಭಾ ಚುನಾವಣೆ ಬಳಿಕ ಸ್ಪಷ್ಟವಾಗಿ ಗೋಚರಿಸಿದೆ. ಕೆಲವರನ್ನು ಬದಲಾಯಿಸಿ ಸಮರ್ಥರನ್ನು ಪದಾಧಿಕಾರಿಗಳ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಉದ್ದೇಶವನ್ನು ವಿಜಯೇಂದ್ರ ಹೊಂದಿದ್ದರೂ ನಾಯಕತ್ವದ ಕುರಿತ ಗೊಂದಲದಿಂದ ಸಾಧ್ಯವಾಗದೆ ತಳ್ಳಿಕೊಂಡೇ ಬರುತ್ತಿದ್ದಾರೆ. ಇದು ಪಕ್ಷದ ಸಂಘಟನೆ ಮೇಲೂ ಪರಿಣಾಮ ಬೀರಿದೆ.
ಸ್ಪಷ್ಟತೆ ಇಲ್ಲದೆ ಗೊಂದಲ:ರಾಜ್ಯ ನಾಯಕತ್ವದ ಬಗ್ಗೆ ಹೈಕಮಾಂಡ್ ಸ್ಪಷ್ಟತೆ ನೀಡದೇ ಇರುವುದರಿಂದ ತಳಮಟ್ಟದ ಕಾರ್ಯಕರ್ತರು ಹಾಗೂ ಸ್ಥಳೀಯ ಮಟ್ಟದ ಮುಖಂಡರಲ್ಲಿನ ಗೊಂದಲ ಮೂಡಿರುವ ಬಗ್ಗೆ ರಾಜ್ಯದ ಹಿರಿಯ ನಾಯಕರೂ ಒಪ್ಪಿಕೊಳ್ಳುತ್ತಾರೆ.
ಹೀಗಾಗಿಯೇ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿ ಹಲವು ನಾಯಕರು ‘ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ವರಿಷ್ಠರು ಸ್ಪಷ್ಟತೆ ನೀಡಿ ಗೊಂದಲ ಬಗೆಹರಿಸಬೇಕು’ ಎಂದು ಬಹಿರಂಗವಾಗಿಯೂ ಹೇಳಿಕೆ ನೀಡುವ ಮೂಲಕ ಒತ್ತಾಯಿಸಿದ್ದರು.‘ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳ ಹಲವು ಅಸ್ತ್ರಗಳನ್ನು ನೀಡುತ್ತಿದೆ. ಆದರೆ, ನಮಗೆ ಅವುಗಳನ್ನು ಸರಿಯಾಗಿ ಬಳಸಿಕೊಂಡು ಹೋರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈಗ ಬಿಹಾರ ಚುನಾವಣೆ ಬಳಿಕ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗಲಿದೆ. ಅದಾದ ಬಳಿಕ ರಾಜ್ಯಾಧ್ಯಕ್ಷರ ಮುಂದುವರಿಕೆ ಕುರಿತು ಸ್ಪಷ್ಟತೆ ಹೊರಬೀಳಲಿದೆ. ಇದೊಂದು ರೀತಿಯಲ್ಲಿ ಕ್ರಾಂತಿಯೇ ಸರಿ. ನವೆಂಬರ್ ಬಳಿಕ ಪಕ್ಷದ ಸಂಘಟನೆ ಹೊಸ ಸ್ವರೂಪ ಪಡೆಯಲಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭರದ ಸಿದ್ಧತೆ ಆರಂಭವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.