ಸಾರಾಂಶ
ಮಂಡ್ಯ : ನಿಖಿಲ್ ಕುಮಾರಸ್ವಾಮಿ ಸಿನಿಮಾರಂಗಕ್ಕೆ ದಿಢೀರನೆ ಗುಡ್‌ಬೈ ಹೇಳಿದ್ದಾರೆ. ನಾನೀಗ ಫುಲ್ ಟೈಮ್ ರಾಜಕಾರಣಿಯಾಗಿದ್ದು, ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ನಾನು ಇನ್ನೂ ಪಕ್ಷ ಕಟ್ಟುವ ಕಡೆ ಹೆಚ್ಚು ಗಮನಕೊಡುತ್ತಿದ್ದೇನೆ. ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ನಾನು ಇನ್ನೂ ಮುಂದೆ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳುವುದೂ ಇಲ್ಲ. ನಟಿಸುವುದೂ ಇಲ್ಲ. ಸಿನಿಮಾರಂಗದ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೆರಗೋಡು ಧ್ವಜಸ್ತಂಭಕ್ಕೆ ನಿಖಿಲ್ ಪೂಜೆ ಸಲ್ಲಿಕೆ:
ಮಂಡ್ಯ ತಾಲೂಕಿನ ಕೆರಗೋಡಿನಲ್ಲಿರುವ ವಿವಾದಾತ್ಮಕ ಧ್ವಜ ಸ್ತಂಭಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಪೂಜೆ ಸಲ್ಲಿಸಿದರು. ಮಂಡ್ಯ ತಾಲೂಕಿನ ಚಿಕ್ಕ ಬಾಣಸವಾಡಿ ಗ್ರಾಮದ ಪಕ್ಷದ ಕಾರ್ಯಕರ್ತ ಮಂಜು ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಕುಟುಂಬವರ್ಗದವರಿಗೆ ಸಾಂತ್ವನ ಹೇಳಲು ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿದರು. ನಂತರ ಧ್ವಜಸ್ತಂಭದ ಬಳಿಗೆ ತೆರಳುವಂತೆ ಮನವಿ ಮಾಡಿದರು. ಕಾರ್ಯಕರ್ತರು, ಅಭಿಮಾನಿಗಳ ಒತ್ತಡಕ್ಕೆ ಮಣಿದು ಧ್ವಜಸ್ತಂಭದ ಬಳಿಗೆ ತೆರಳಿದರು.
ಅಲ್ಲಿ ಅರ್ಜುನ ಧ್ವಜಸ್ತಂಭಕ್ಕೆ ನಿಖಿಲ್‌ಕುಮಾರಸ್ವಾಮಿ ಪೂಜೆ ಸಲ್ಲಿಸಿ ಈಡುಗಾಯಿ ಒಡೆದರು. ಆದರೆ, ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ರಾಷ್ಟ್ರಧ್ವಜ ಅಥವಾ ಸ್ತಂಭದಲ್ಲಿ ಹನುಮಧ್ವಜ ಹಾರಾಡಬೇಕೆಂಬ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನದಿಂದಲೇ ನಿರ್ಗಮಿಸಿದರು.