ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚವರಿ ಅಂತಸ್ತಿನ ಕಟ್ಟಡ ನಿರ್ಮಾಣ ನೀತಿಗೆ ಆಕ್ಷೇಪ

| N/A | Published : Apr 11 2025, 01:34 AM IST / Updated: Apr 11 2025, 04:20 AM IST

ಸಾರಾಂಶ

ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲು ಅನುಕೂಲ ಕಲ್ಪಿಸುವ ಪ್ರೀಮಿಯಂ ಎಫ್‌ಎಆರ್‌ (ಫ್ಲೋರ್‌ ಏರಿಯಾ ರೇಶಿಯೋ) ನೀತಿಗೆ ಸಿಟಿಜನ್‌ ಆ್ಯಕ್ಷನ್‌ ಪೋರಂ ತೀವ್ರ ವಿರೋಧ ವ್ಯಕ್ತಪಡಿಸಿದೆ.

 ಬೆಂಗಳೂರು : ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲು ಅನುಕೂಲ ಕಲ್ಪಿಸುವ ಪ್ರೀಮಿಯಂ ಎಫ್‌ಎಆರ್‌ (ಫ್ಲೋರ್‌ ಏರಿಯಾ ರೇಶಿಯೋ) ನೀತಿಗೆ ಸಿಟಿಜನ್‌ ಆ್ಯಕ್ಷನ್‌ ಪೋರಂ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಫೋರಂ, ಪ್ರೀಮಿಯಂ ಎಫ್‌ಎಆರ್‌ ನೀತಿಯ ಅನ್ವಯ ನಿವೇಶನ ಮಾರ್ಗಸೂಚಿ ದರದ ಶೇ.28 ಶುಲ್ಕ ಪಾವತಿಸಿಕೊಂಡು ಶೇ.60ರವರೆಗೂ ಪ್ರೀಮಿಯಂ ಎಫ್‌ಎಆರ್‌ ನೀಡಲು ಅವಕಾಶ ನೀಡಲಾಗಿದೆ. ಇದರಿಂದ ಕಟ್ಟಡದ ನಿವೇಶನ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತು ನಿರ್ಮಿಸಬಹುದಾಗಿದೆ. ಇದರಿಂದ ನಗರದಲ್ಲಿ ನಾಯಿಕೊಡೆಗಳಂತೆ ಎತ್ತರದ ಕಟ್ಟಡಗಳು ಹೆಚ್ಚಲಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಪ್ರೀಮಿಯಂ ಎಫ್​​​​ಎಆರ್​ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿ ಬೆಂಗಳೂರು ನಗರ ಮತ್ತು ಆಸುಪಾಸಿನ ಪ್ರದೇಶಗಳಿಗೆ ಅನ್ವಯವಾಗುವಂತೆ ನಗಾರಾಭಿವೃದ್ಧಿ ಇಲಾಖೆ ಕಳೆದ ತಿಂಗಳು ಕರಡು ಅಧಿಸೂಚನೆ ಹೊರಡಿಸಿದೆ. ನಕ್ಷೆ ಅನುಮೋದನೆಗೊಂಡು ಕಟ್ಟಡ ನಿರ್ಮಾಣ ಮಾಡಿರುವವರ ಹಾಗೂ ನಿರ್ಮಾಣ ಮಾಡುತ್ತಿರುವವರು ಪ್ರೀಮಿಯಂ ಎಫ್​​​​ಎಆರ್​ ಪಡೆದುಕೊಂಡು, ಹೆಚ್ಚುವರಿ ಅಂತಸ್ತು ನಿರ್ಮಿಸಬಹುದಾಗಿದೆ. ಕಟ್ಟಡ ನಿರ್ಮಿಸುವವರು ಮಾರ್ಗಸೂಚಿ ದರದನ್ವಯ ಶುಲ್ಕ ಪಾವತಿಸಿ ಪ್ರೀಮಿಯಂ ಎಫ್​​​​ಎಆರ್‌ಗಳನ್ನು ಸ್ಥಳಿಯ ಯೋಜನಾ ಪ್ರಾಧಿಕಾರದಿಂದ ಪಡೆದುಕೊಳ್ಳಬಹುದು. ಈ ಮೂಲಕ ಕಟ್ಟಡದ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್​​​​ಎಆರ್​ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು.

ಅಲ್ಲದೆ, ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದ ಅನುಮೋದಿತ ಮಾಸ್ಟರ್​ ಪ್ಲಾನ್​ನ ವಲಯ ನಿಯಮಗಳ ಅನ್ವಯವೇ ಎಫ್​​​​ಎಆರ್ ಅನುಮತಿ ನೀಡಲಾಗುತ್ತದೆ. ಶೇ.20 ಪ್ರೀಮಿಯಂ ಎಫ್​​​​ಎಆರ್ ನೀಡಲಾಗುತ್ತದೆ. 12 ಮೀ.ನಿಂದ 18 ಮೀ. ಅಗಲದ ರಸ್ತೆ ಹೊಂದಿರುವ ಕಟ್ಟಡಗಳಿಗೆ ಶೇ.40 ಹಾಗೂ 18 ಮೀ.ಗಿಂತ ಅಧಿಕ ಅಗಲ ಹೊಂದಿರುವ ಕಟ್ಟಡಗಳು ಶೇ.60 ಗರಿಷ್ಠ ಪ್ರೀಮಿಯಂ ಎಫ್​​​​ಎಆರ್​ ಪಡೆಯಬಹುದು ಎಂದು ನಿಯಮದಲ್ಲಿ ವಿವರಿಸಲಾಗಿದೆ.

ನಗರದ ಜನರ ಹಿತಾಸಕ್ತಿಗೆ ಧಕ್ಕೆಯುಂಟಾಗಲಿರುವ ಪ್ರೀಮಿಯಂ ಎಫ್‌ಎಆರ್‌ (ಫ್ಲೋರ್‌ ಏರಿಯಾ ರೇಶಿಯೋ) ನೀತಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತಿದೆ. ಹೈಕೋರ್ಟ್‌ನಲ್ಲಿ ವಕೀಲ ಪ್ರಶಾಂತ್‌ ಮಿರ್ಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೂಡಿದ್ದಾರೆ ಎಂದು ಫೋರಂ ಮೂಲಗಳು ತಿಳಿಸಿವೆ.

ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ:

ಪ್ರೀಮಿಯಂ ಎಫ್‌​ಎಆರ್​ ನೀತಿ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ನಗರದಲ್ಲಿ ಅತಿಯಾಗಿ ಜನಸಂದಣಿ ಹೆಚ್ಚಾಗುವುದರಿಂದ ಎತ್ತರದ ಕಟ್ಟಡಗಳ ಪ್ರದೇಶದಲ್ಲಿ ನೀರು, ಒಳಚರಂಡಿ, ರಸ್ತೆ ಸೇರಿ ಇತರ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ. ಕಟ್ಟಡ ದಟ್ಟಣೆ ಹೆಚ್ಚಾದರೆ ಮಳೆನೀರು ಸಂಗ್ರಹ ಮತ್ತು ನೆರೆ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. 9 ಮೀಟರ್​ ಅಗಲದ ರಸ್ತೆಗಳಲ್ಲಿ ಎತ್ತರ ಕಟ್ಟಡಗಳಿಂದ ಸಂಚಾರಕ್ಕೆ ತೊಂದರೆಯಾಗಲಿದೆ. ಕಟ್ಟಡ ಯೋಜನೆ ಲಾಭ ಡೆವಲಪರ್​ಗಳಿಗೆ ಮಾತ್ರ ಸಿಗುತ್ತದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಲ್ಲಿ ತಮ್ಮ ಜಮೀನು ಬಿಟ್ಟುಕೊಟ್ಟು ಟಿಡಿಆರ್​ ಪ್ರಮಾಣಪತ್ರ ಪಡೆಯುವ ಭೂಮಾಲೀಕರ ಹಕ್ಕಿಗೆ ಧಕ್ಕೆ ತರಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.