ಆಶ್ರಯ ನಿವೇಶನ ಫಲಾನುಭವಿಗಳ ಯಾದಿ ಬದಲಾವಣೆಗೆ ಮಾಜಿ ಶಾಸಕ ರಾಮಣ್ಣ ಲಮಾಣಿ ವಿರೋಧ

| Published : Apr 08 2025, 12:30 AM IST

ಆಶ್ರಯ ನಿವೇಶನ ಫಲಾನುಭವಿಗಳ ಯಾದಿ ಬದಲಾವಣೆಗೆ ಮಾಜಿ ಶಾಸಕ ರಾಮಣ್ಣ ಲಮಾಣಿ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಲ್ಲಿನ ನಿರಾಶ್ರಿತರಿಗೆ ಆಶ್ರಯ ನಿವೇಶನ ಫಲಾನುಭವಿಗಳ ಯಾದಿ ಬದಲಾವಣೆ ಮಾಡಬಾರದು ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿನ ನಿರಾಶ್ರಿತರಿಗೆ ಆಶ್ರಯ ನಿವೇಶನ ಫಲಾನುಭವಿಗಳ ಯಾದಿ ಬದಲಾವಣೆ ಮಾಡಬಾರದು ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆಶ್ರಯ ನಿವೇಶನ ಹಂಚಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಮಾಜಿ ಶಾಸಕ ರಾಮಣ್ಣ ಲಮಾಣಿ ಮೇಲಿನಂತೆ ಉತ್ತರಿಸಿದರು.

ನಾನು ಶಿರಹಟ್ಟಿ ಕ್ಷೇತ್ರದ ಶಾಸಕನಾಗಿದ್ದ ಸಮಯದಲ್ಲಿ ಲಕ್ಷ್ಮೇಶ್ವರದ ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನದ ಫಲಾನುಭವಿಗಳು ಯಾದಿ ಸಿದ್ಧಪಡಿಸಲಾಗಿತ್ತು. ಅದರಂತೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗಾಗಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಶಿಗ್ಲಿ ರಸ್ತೆಯಲ್ಲಿ 32 ಎಕರೆ 27 ಗುಂಟೆ ಜಾಗೆ ಖರೀದಿಸಿದ್ದರು. ಆದರೆ ಆ ಸಮಯದಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಲು ಆಗಲಿಲ್ಲ. ನಂತರ ನಾನು ಶಾಸಕನಾದ ಮೇಲೆ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ಆಶ್ರಯ ಸಮಿತಿ ಮೂಲಕ ನೇರವಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಡಲಾಗಿತ್ತು. ಅಷ್ಟರಲ್ಲಿ ನನ್ನ ಅವಧಿ ಕೊನೆಗೊಂಡಿದ್ದರಿಂದ ನಿವೇಶನ ಹಂಚಲು ಸಾಧ್ಯವಾಗಲಿಲ್ಲ, ಆದರೆ ಪ್ರಸ್ತುತ ಶಾಸಕರಾಗಿರುವ ಡಾ. ಚಂದ್ರು ಲಮಾಣಿ ಅವರು ಹಳೆಯ ಫಲಾನುಭವಿಗಳು ಪಟ್ಟಿ ರದ್ದುಪಡಿಸಿ ಹೊಸದಾಗಿ ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿ ಪ್ರಕಟಿಸುವ ತರಾತುರಿಯಲ್ಲಿದ್ದಾರೆಂದು ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಹಳೆಯ ಫಲಾನುಭವಿಗಳ ಪಟ್ಟಿ ಬದಲಾಯಿಸಬಾರದು ಎಂದು ಆಗ್ರಹಿಸಿದ ಅವರು, ಒಂದು ಬಾರಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಆಯ್ಕೆಯಾದ ಪಟ್ಟಿ ರದ್ದುಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.ಈ ಕುರಿತು ಶಾಸಕ ಡಾ. ಚಂದ್ರು ಲಮಾಣಿ ಪ್ರಶ್ನಿಸಿದಾಗ ಹಳೆಯ ಫಲಾನುಭವಿಗಳ ಸಿದ್ಧಪಡಿಸುವಾಗ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಪುರಸಭೆ ಕೆಲ ಸದಸ್ಯರು ನಿವೇಶನ ಫಲಾನುಭವಿಗಳ ಯಾದಿ ತಡೆ ಹಿಡಿಯುವಂತೆ ನಿಗಮಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೆ ಕೆಲ ಸಂಘಟನೆಗಳು ಸಹ ಈ ಹಿಂದೆ ಸಿದ್ಧಪಡಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳು ಬದಲಾಗಿ ಅನರ್ಹ ಹೆಸರನ್ನು ಸೇರ್ಪಡೆ ಮಾಡಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅದಲ್ಲದೆ ಮಾಜಿ ಶಾಸಕ ರಾಮಣ್ಣ ಲಮಾಣಿ ಕುಟುಂಬದವರು ನಿವೇಶನದ ಫಲಾನುಭವಿಗಳ ಪಟ್ಟಿ ತಯಾರಿಸುವಾಗ ಹಸ್ತಕ್ಷೇಪ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಯಾದಿಯಲ್ಲಿ ಅನರ್ಹ ಫಲಾನುಭವಿಗಳ ಹೆಸರು ತೆಗೆದು ಹಾಕಿ ಬಡವರು ಹಾಗೂ ನಿರ್ಗತಿಕರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದರು.

ಮುಂಡರಗಿ ಪುರಸಭೆಯಲ್ಲಿ ಆಶ್ರಯ ನಿವೇಶನ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ನೋಟಿಸ್ ಬೋರ್ಡಗೆ ಹಚ್ಚಲಾಗಿದೆ. ಆಕ್ಷೇಪಣೆಗಳು ಇದ್ದಲ್ಲಿ 15 ದಿನಗಳ ಕಾಲಾವಕಾಶ ನೀಡಲಾಗಿದ್ದು. ಆಕ್ಷೇಪಣೆಗಳ ಅವಧಿ ಮುಗಿದ ನಂತರ ಹೊಸ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ವಸತಿ ನಿಗಮಕ್ಕೆ ಕಳುಹಿಸಿಕೊಟ್ಟು, ನೂತನ ಫಲಾನುಭವಿಗಳಿಗೆ ನಿವೇಶನ ಹಂಚಲಾಗುವುದು ಎಂದು ತಿಳಿಸಿದರು.