ಸಾರಾಂಶ
ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಅಧಿಕಾರ ತ್ಯಾಗ ಮಾಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ.
‘ಚುನಾವಣೆಯಲ್ಲಿ ಓಡಾಡಿರುವುದು, ದುಡ್ಡು ಖರ್ಚು ಮಾಡಿರುವುದು ಡಿ.ಕೆ.ಶಿವಕುಮಾರ್. ಅವರು ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಅವರು ಮುಖ್ಯಮಂತ್ರಿ ಆಗಬೇಕಾದದ್ದು ಬಹಳ ಮುಖ್ಯವಾದುದು’ ಎಂದೂ ಸ್ವಾಮೀಜಿ ಬಲವಾಗಿ ಪ್ರತಿಪಾದಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಮಾತನಾಡಿದ ಬಳಿಕ ಆಶೀರ್ವಚನ ನೀಡಿದ ಚಂದ್ರಶೇಖರ ಸ್ವಾಮೀಜಿ ಈ ಆಗ್ರಹ ಮುಂದಿಟ್ಟರು.
ಸ್ವಾಮೀಜಿ ಹೇಳಿದ್ದೇನು?:
‘ಎಲ್ಲರೂ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರ ಸ್ವಾದ ಮಾಡಿದ್ದಾರೆ. ಆದರೆ, ನಮ್ಮ ಡಿ.ಕೆ.ಶಿವಕುಮಾರ್ ಒಬ್ಬರು ಮಾತ್ರ ಇನ್ನೂ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿದ್ದಾರೆ. ಹೀಗಾಗಿ ಅವರು ಮುಂದೆ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಒಳ್ಳೆಯದಾಗಲಿ ಎಂದು ಹರಸಬೇಕು ಎಂಬುದಾಗಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ’ ಎಂದು ಸ್ವಾಮೀಜಿ ಹೇಳಿದರು.
‘ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಮಾತ್ರ ಇದು ಆಗುತ್ತದೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ನಮಸ್ಕಾರ ಮಾಡುತ್ತಾ ದಯವಿಟ್ಟು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ವೇದಿಕೆಯಲ್ಲಿ ಪುನರುಚ್ಚರಿಸಿದರು.
ಸುದ್ದಿಗಾರರೆದುರೂ ಪುನರುಚ್ಚಾರ:
ಕಾರ್ಯಕ್ರಮದ ಬಳಿಕ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ ಅವರಿಗೆ ‘ಯಾವ ಕಾರಣಕ್ಕೆ ಈ ಆಗ್ರಹ ವ್ಯಕ್ತಪಡಿಸಿದಿರಿ?’ ಎಂಬ ಪ್ರಶ್ನೆ ಕೇಳಲಾಯಿತು.
ಆಗ ಉತ್ತರಿಸಿದ ಶ್ರೀಗಳು, ‘ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಬಹಳ ವರ್ಷಗಳಿಂದ ಅವರು ಮುಖ್ಯಮಂತ್ರಿ ಆಗಬೇಕೆನ್ನುವುದಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಓಡಾಡಿರುವುದು, ದುಡ್ಡು ಖರ್ಚು ಮಾಡಿರುವುದು ಡಿ.ಕೆ.ಶಿವಕುಮಾರ್. ಹಾಗಾಗಿ ಅವರು ಮುಖ್ಯಮಂತ್ರಿ ಆಗಬೇಕಾದದ್ದು ಬಹಳ ಮುಖ್ಯವಾದುದು. ಇಷ್ಟೊತ್ತಿಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು. ತಳ್ಳಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರ ಮುಂದೆಯೇ ಅಧಿಕಾರ ಬಿಟ್ಟುಕೊಡಲು ಆಗ್ರಹಿಸಿದೆ’ ಎಂದು ಸಮರ್ಥಿಸಿಕೊಂಡರು.
‘ನಿಮ್ಮ ಮಾತಿಗೆ ಒಪ್ಪಿ ಅವರು ಅಧಿಕಾರ ಬಿಟ್ಟುಕೊಡುತ್ತಾರೆ’ ಎಂಬ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರು ಧರ್ಮವಂತರಾಗಿದ್ದರೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡುತ್ತಾರೆ. ಅವರು ಈಗಾಗಲೇ ಮುಖ್ಯಮಂತ್ರಿ ಸ್ಥಾನ ಅನುಭವಿಸಿರುವುದರಿಂದ ಉದಾರ ಮನೋಭಾವದಿಂದ ಅಧಿಕಾರ ಬಿಟ್ಟುಕೊಡುವ ಮನಸ್ಸು ಮಾಡಬಹುದು. ಆ ಕಾರಣಕ್ಕೆ ಅಧಿಕಾರ ಬಿಟ್ಟುಕೊಡಿ ಎಂದು ನಾನು ದೇವರ ಪ್ರಾರ್ಥನೆ ಮಾಡಿ ಹೇಳಿದ್ದೇನೆ. ಉಳಿದದ್ದು ಭಗವಂತನ ಇಚ್ಛೆ. ಏನಿದೆಯೋ ಯಾರಿಗೆ ಗೊತ್ತು’ ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಶಿವರಾಜ ತಂಗಡಗಿ, ಶಾಸಕರಾದ ಎಸ್.ಆರ್.ವಿಶ್ವನಾಥ್, ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿಗೌಡ, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))