ಸಾರಾಂಶ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಏ.1ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಏ.1ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ಬೆಳಗ್ಗೆ 9.30ಕ್ಕೆ ಶ್ರೀಕಾಳಿಕಾಂಬ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಲಾಗುವುದು ಎಂದರು.
ನಾಮಪತ್ರ ಸಲ್ಲಿಕೆಯ ದಿನದಂದು ರಾಜ್ಯ ನಾಯಕರು ಬರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಸ್ಥಳೀಯವಾಗಿರುವ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ ಎಂದು ನುಡಿದರು.
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಲ್ಲಿ ವೆಂಕಟರಮಣೇಗೌಡರ ಪರವಾಗಿ ಈಗಾಗಲೇ ಒಂದು ಸುತ್ತಿನ ಪ್ರಚಾರ ನಡೆಸಲಾಗಿದೆ.
ದಿನೇಶ್‌ಗೂಳಿಗೌಡರ ಚುನಾವಣೆಯಿಂದ ಆರಂಭವಾಗಿ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಮುನ್ನಡೆಸುತ್ತಾ ಪಕ್ಷದ ಗೆಲುವಿಗೆ ಕಾರಣರಾಗುತ್ತಿದ್ದಾರೆ.
ಈ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟು ಪ್ರದರ್ಶಿಸುವುದರೊಂದಿಗೆ ವೆಂಕಟರಮಣೇಗೌಡರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ 28 ಕ್ಷೇತ್ರಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನಿಟ್ಟುಕೊಂಡು ಎಲ್ಲೆಡೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವುದಾಗಿ ತಿಳಿಸಿದರು.