ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ 3 ವಾರ ಬಳಿಕ ಇದೀಗ ಸಂಪುಟ ವಿಸ್ತರಣೆ ಆಗಿದ್ದು, ಪಕ್ಷದ 35 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

 ಕೋಲ್ಕತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ 3 ವಾರ ಬಳಿಕ ಇದೀಗ ಸಂಪುಟ ವಿಸ್ತರಣೆ ಆಗಿದ್ದು, ಪಕ್ಷದ 35 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಶೇಷವೆಂದರೆ, ಈ ಹಿಂದೆ ಅನ್ಯರ ಮನೆಗಳ ಮುಸುರೆ ತಿಕ್ಕಿ ಜೀವನ ನಡೆಸುತ್ತಿದ್ದ ಹಾಗೂ ಇತ್ತೀಚೆಗೆ ಶಾಸಕಿ ಆಗಿ ಆಯ್ಕೆ ಆಗಿದ್ದ ಕಲಿತಾ ಮಾಝಿ ಅವರೂ ಸಚಿವರ ಪಟ್ಟಿಯಲ್ಲಿ ಇದ್ದಾರೆ. ಇವರಿಗೆ ರಾಜ್ಯ ಸಚಿವೆ ಸ್ಥಾನಮಾನ ನೀಡಲಾಗಿದೆ. ಮಾಜಿ ಕ್ರಿಕೆಟಿಗ ಅಶೋಕ್‌ ದಿಂಡಾ ಹಾಗೂ ಪತ್ರಕರ್ತ ಸ್ವಪನ್‌ ದಾಸ್‌ ಗುಪ್ತಾ ಕೂಡ ಸಚಿವ ಸ್ಥಾನ ಪಡೆದಿದ್ದಾರೆ.

ಕೋಲ್ಕತಾದ ಲೋಕಭವನದಲ್ಲಿಯ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್‌.ಎನ್‌.ರವಿ ಪ್ರಮಾಣ ಬೋಧಿಸಿದರು. ಕೆಲವರು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದರೆ ಇನ್ನು ಕೆಲವರು ರಾಜ್ಯ ಸಚಿವರಾಗಿ ಪ್ರಮಾಣ ಪಡೆದರು. ಈ ಮೂಲಕ ಮಂತ್ರಿಮಂಡಲ ಸಾಮರ್ಥ್ಯ 41ಕ್ಕೆ ಏರಿಕೆಯಾಗಿದೆ. ಈಗ ಸುವೇಂದು ಸರ್ಕಾರ ವಿಧಾನಸಭೆಯಲ್ಲಿ 294 ಸದಸ್ಯ ಬಲ ಹೊಂದಿದೆ.

ಇತ್ತೀಚಿನ ಚುನಾವಣೆಯಲ್ಲಿ ಬಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಸುವೇಂದು ಮೇ 3ಕ್ಕೆ ಪ್ರಮಾಣ ಸ್ವೀಕರಿಸಿದ್ದರು.

2021ರಲ್ಲೂ ಸ್ಪರ್ಧಿಸಿದ್ದ ಕಲಿತಾ:

ರಾಜಕೀಯ ಪ್ರವೇಶಕ್ಕೂ ಮುನ್ನ ಮುಸುರೆ ತಿಕ್ಕುತ್ತಿದ್ದ ಕಲಿತಾ, ಈ ಹಿಂದಿನ 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಪೂರ್ವ ಬರ್ಧಮಾನ್‌ ಜಿಲ್ಲೆಯ ಆಸುಗ್ರಾಮ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಪಡೆದು ಗೆದ್ದಿದ್ದರು. ಅವರ ಪತಿ ಪ್ಲಂಬರ್‌ ಆಗಿದ್ದಾರೆ.

- ಸಿಎಂ ಸುವೇಂದು ಸಂಪುಟದಲ್ಲಿ ಬಡ ಮಹಿಳೆಗೆ ಸ್ಥಾನ

- ಮಾಜಿ ಕ್ರಿಕೆಟಿಗ ಅಶೋಕ್‌ ದಿಂಡಾಗೂ ಸಚಿವ ಸ್ಥಾನ

ಕಂಡವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಕಲಿತಾಗೆ 2021ರಲ್ಲಿ ಬಿಜೆಪಿಯಿಂದ ಟಿಕೆಟ್‌ ಪ್ರಕಟ

ಆಗ ಬಂಗಾಳದ ಅಸುಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ದಿಸಿ ಸೋಲುಕಂಡಿದ್ದ ಕಲಿತಾ

ಇದರ ಹೊರತಾಗಿಯೂ 2026ರಲ್ಲಿ ಮತ್ತೆ ಬಡಮಹಿಳೆಗೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌

ಈ ಬಾರಿ ಟಿಎಂಸಿ ವಿರುದ್ಧ 12535 ಮತಗಳ ಅಂತರದಿಂದ ಗೆಲುವು. ಈಗ ಸಚಿವ ಸ್ಥಾನ

ಕಲಿತಾ ಜೊತೆಗೆ ಟೀಂ ಇಂಡಿಯಾದ ಮಾಜಿ ಆಟಗಾರ ಅಶೋಕ್‌ ದಿಂಡಾಗೂ ಮಂತ್ರಿಗಿರಿ