ಸಾರಾಂಶ
ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿರುವ ಶೇ.10ರಷ್ಟು ಶಾಸಕರಿಗೆ ಸ್ಪಷ್ಟ ಸಂದೇಶ ನೀಡಲು ಸಿದ್ದರಾಮಯ್ಯ ಅವರು ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದಿದ್ದಾರೆ. ಈ ಹೇಳಿಕೆಯಿಂದ ಉಳಿದೆಲ್ಲ ಚರ್ಚೆ ಕ್ಲೋಸ್ ಆಗಿದೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರು : ‘ಮುಖ್ಯಮಂತ್ರಿ ಆಯ್ಕೆ ವೇಳೆ ವೋಟಿಂಗ್ ನಡೆದು ಹೆಚ್ಚು ಮತ ಪಡೆದಿರುವ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಹೀಗಿದ್ದರೂ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿರುವ ಶೇ.10ರಷ್ಟು ಶಾಸಕರಿಗೆ ಸ್ಪಷ್ಟ ಸಂದೇಶ ನೀಡಲು ಸಿದ್ದರಾಮಯ್ಯ ಅವರು ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದಿದ್ದಾರೆ. ಈ ಹೇಳಿಕೆಯಿಂದ ಉಳಿದೆಲ್ಲ ಚರ್ಚೆ ಕ್ಲೋಸ್ ಆಗಿದೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದೂ ವರ್ಷ ನಾನೇ ಮುಖ್ಯಮಂತ್ರಿ ಹಾಗೂ ಮುಂದಿನ ಚುನಾವಣೆಗೂ ನನ್ನದೇ ನಾಯಕತ್ವ ಎಂದು ಸ್ಪಷ್ಟಪಡಿಸಿದ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಯತ್ವ ಬದಲಾವಣೆ ಬಗ್ಗೆ ಹೆಚ್ಚು ಮಂದಿ ಮಾತನಾಡಿಲ್ಲ. ಶೇ.10 ರಷ್ಟು ಜನ ಮಾತನಾಡಿದ್ದಾರೆ. ಸುರ್ಜೇವಾಲಾ ಅವರೊಂದಿಗೂ ಯಾರೂ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಎಲ್ಲರೂ ಅನುದಾನ, ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಶೇ.10ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಅವರೆಲ್ಲರಿಗೂ ಸಿದ್ದರಾಮಯ್ಯ ಹೇಳಿಕೆಯಿಂದ ಕ್ಲಿಯರ್ ಸಂದೇಶ ನೀಡಿದಂತಾಗಿದೆ. ಸಿದ್ದರಾಮಯ್ಯ ಸಂದೇಶದಿಂದ ಮ್ಯಾಚ್ ಕ್ಲೋಸ್ ಎಂದರ್ಥ ಎಂದು ಹೇಳಿದರು.
ಸುರ್ಜೇವಾಲಾ ರಾಜ್ಯಕ್ಕೆ ನಾಯಕತ್ವ ಬದಲಾವಣೆ ಅಭಿಪ್ರಾಯ ಸಂಗ್ರಹಕ್ಕೆ ಬಂದಿರಲಿಲ್ಲ. ಹೀಗಿದ್ದರೂ ಮಾತನಾಡುತ್ತಿದ್ದವರಿಗೆ ಸಿದ್ದರಾಮಯ್ಯ ಅವರು ಇತಿಶ್ರೀ ಹಾಡಿದಂತಾಗಿದೆ. ಆ ಸ್ಥಾನಕ್ಕೆ ನಾನು ಆಕಾಂಕ್ಷಿಯೂ, ಅಲ್ಲ ಸ್ಪರ್ಧಿಯೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಈಗ ಯಾಕೆ ಈ ಹೇಳಿಕೆ ನೀಡಿದರು ಎಂಬ ಪ್ರಶ್ನೆಗೆ, ಈಗ ಹೇಳಬೇಕಾದ ಸಂದರ್ಭ ಬಂದಿರಬಹುದು, ಹೀಗಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಆಯ್ಕೆ ವೇಳೆ ವೋಟಿಂಗ್ ಆಗಿದೆ. ಅತಿ ಹೆಚ್ಚು ವೋಟು ಪಡೆದಿದ್ದಾರೆ ಎಂಬ ಕಾರಣಕ್ಕಾಗಿಯೇ ಅವರು ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯ ಅವರೇ ಸ್ಪಷ್ಟವಾಗಿ ಹೇಳಿರುವುದರಿಂದ ಇದೆಲ್ಲವೂ ಕ್ಲೋಸ್ ಆಗಬೇಕು, ನಾಯಕತ್ವ ಬದಲಾವಣೆ ವಿಚಾರಕ್ಕೆ ಇತಿಶ್ರೀ ಹಾಡಬೇಕು. ಶೇ.10 ರಷ್ಟು ಜನರಿಗೂ ಇದರಿಂದ ಕ್ಲಿಯರ್ ಸಂದೇಶ ಸಿಕ್ಕಿದೆ ಎಂದರು.
ಸಿದ್ದರಾಮಯ್ಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಚರ್ಚೆಗೆ, ಸಿದ್ದರಾಮಯ್ಯ ಅವರ ಅನುಭವ ಪಡೆಯಲು ಓಬಿಸಿ ಸಲಹಾ ಮಂಡಳಿಗೆ ಸದಸ್ಯರನ್ನಾಗಿ ಮಾಡಿದ್ದಾರೆ. ಸಿದ್ದರಾಮಯ್ಯಗೆ ರಾಷ್ಟ್ರೀಯ ಮಟ್ಟದ ಸಾಮರ್ಥ್ಯ ಇದೆ. ಆದರೆ ಅದನ್ನು ಬಳಸಿಕೊಳ್ಳಲು ಅವಕಾಶ, ಸನ್ನಿವೇಶ ಬಂದಾಗ ಹೋಗಬಹುದು, ಈಗ ಅಂತಹ ಸಂದರ್ಭ ಬಂದಿಲ್ಲ ಎಂದಷ್ಟೇ ಹೇಳಿದರು.