ಸಾರಾಂಶ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಶ್ರೀರಾಮ ಮಂದಿರ ಕಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀವೆಲ್ಲ ಬೆಂಬಲ ನೀಡಬೇಕು ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮನವಿ ಮಾಡಿದರು.ಮಲ್ಲಸಂದ್ರದ ಪೈಪ್‌ಲೈನ್ ರಸ್ತೆಯ ಸೆಲೆಕ್ಷನ್ ಕಾರ್ನರ್‌ನಲ್ಲಿ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ ಆಯೋಜಿಸಲಾದ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರವಾಗಿ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದರು.
ಮೋದಿಯವರು ಬಡವರ ಅಭಿವೃದ್ಧಿಗೆ ವಿಶ್ವಕರ್ಮ ಯೋಜನೆ ತಂದರು. ಒಂದು ರುಪಾಯಿಯೂ ಕೂಡ ಹಾಕದೆ ಬ್ಯಾಂಕ್ ಖಾತೆ ತೆರೆದರು. ಜನಧನ್ ಯೋಜನೆ ಜಾರಿಗೆ ತಂದರು. ಅನ್ನಭಾಗ್ಯ ಕೊಡ್ತಾ ಇರೋದು ಮೋದಿ ಸರ್ಕಾರ. ವ್ಯಾಕ್ಸಿನ್, ಮೆಟ್ರೋ, ರಸ್ತೆ ಇವೆಲ್ಲ ಮೋದಿ ಅವರಿಂದ ಮಾತ್ರ ಸಾಧ್ಯವಾಗಿದೆ ಎಂದರು.ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಬಿಟ್ಟರು, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು. ಹುಬ್ಬಳ್ಳಿಯಲ್ಲಿ ಒಬ್ಬ ಹೆಣ್ಣು ಮಗಳನ್ನು ಕಾಲೇಜಿನ ಆವರಣದಲ್ಲಿ ಕೊಂದನು. ಇದನ್ನು ಕಾಂಗ್ರೆಸ್ ಲವ್ ಕೇಸು ಎಂದರು. ಕಾಂಗ್ರೆಸ್ ಈ ದೇಶಕ್ಕೆ ಭಯೋತ್ಪಾದನೆ ಹುಟ್ಟು ಹಾಕುವಂತಿದೆ! ಕಾಂಗ್ರೆಸ್ ಬಂದರೆ ಮಳೆ ಇಲ್ಲ ಬೆಳೆ ಇಲ್ಲ, ಬರೀ ಬರಗಾಲ. ರಾತ್ರೋರಾತ್ರಿ ಕಾವೇರಿ ನೀರು ತಮಿಳುನಾಡಿಗೆ ಬಿಟ್ಟರು. ಇವತ್ತು ಕುಡಿಯಲು ನೀರಿಗೆ ಹಾಹಾಕಾರ. ಆದರೆ ರಸ್ತೆ ರಸ್ತೆಯಲ್ಲೆಲ್ಲ ಬೀರು ಬಾಟಲ್ ಓಡಾಡುತ್ತಿವೆ. ಹಾಲು, ಮೊಸರು, ಕರೆಂಟ್, ಮನೆ ರಿಜಿಸ್ಟ್ರೇಷನ್ ಶುಲ್ಕ ಜಾಸ್ತಿ ಮಾಡಿದರು. ಗಂಡಸರ ಹತ್ತಿರ ₹2 ಸಾವಿರ ಕಿತ್ತುಕೊಂಡು ಹೆಂಡತಿಗೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಯಿಂದ ಏನು ಕೊಟ್ಟರು? ಎಂದು ಕಿಡಿಕಾರಿದರು.
ಶಾಸಕ ಎಸ್.ಮುನಿರಾಜು ಮಾತನಾಡಿ, ಕೇಂದ್ರದ ವಿರುದ್ಧ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಅವರದ್ದೇ ಸರ್ಕಾರ ಇರುವಾಗ ಪ್ರತಿಭಟನೆ ಮಾಡುವಂತದ್ದು ಏನು ಇದೆ? ಇದು ರಾಜ್ಯ ಸರ್ಕಾರಕ್ಕೆ ಅವಮಾನ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ವಿರುದ್ಧ ಹರಿಹಾಯ್ದರು.ಮಲ್ಲಸಂದ್ರ ಪೈಪ್ಲೈನ್ ಸೆಲೆಕ್ಷನ್ ಕಾರ್ನರ್‌ನಿಂದ ಬೈಲಪ್ಪ ಸರ್ಕಲ್ ಮುಖಾಂತರ ದಾಸರಹಳ್ಳಿ ಮೆಟ್ರೋ ನಿಲ್ದಾಣದವರೆಗೆ ರೋಡ್ ಶೋ ಮೂಲಕ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರವಾಗಿ ಮತಯಾಚಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ, ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.ರಾಜ್ಯದಲ್ಲಿ ಭ್ರಷ್ಟಾಚಾರ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಬೇಕು. ದೇಶದ 80 ಕೋಟಿ ಜನಕ್ಕೆ 5 ಕೇಜಿ ಅಕ್ಕಿ ಕೊಡ್ತಾ ಇರೋದು ಮೋದಿಜಿ. ಸಿದ್ದರಾಮಯ್ಯ ಅವರು 10 ಕೇಜಿ ಅಕ್ಕಿ ಕೊಡ್ತೀನಿ ಅಂತ ಸುಳ್ಳು ಹೇಳಿದರು. ದೇಶದ ರಕ್ಷಣೆ, ಅಭಿವೃದ್ಧಿಗೋಸ್ಕರ ಮೋದಿ ಅವರಿಗೆ ಶಕ್ತಿ ತುಂಬಬೇಕು.
-ಎಸ್.ಮುನಿರಾಜು, ಶಾಸಕ.