ಸಾರಾಂಶ
ಕೊಪ್ಪಳ : ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಭೇಟಿ ನೀಡಿ, ಮೃತ ಪಿಎಸ್‌ಐ ಪರಶುರಾಮ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸದ್ಯಕ್ಕೆ ಸಿಐಡಿ ತನಿಖೆ ನಡೆಯುತ್ತದೆ. ಅದರ ವರದಿಯನ್ನಾಧರಿಸಿ ಕ್ರಮವಾಗುತ್ತದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪರಶುರಾಮ ಪತ್ನಿಗೆ ಸರ್ಕಾರಿ ಹುದ್ದೆ ನೀಡಲು ಸಿದ್ಧರಿದ್ದೇವೆ. ಅವರ ಪತ್ನಿ ಬಿಇ ಎಲೆಕ್ಟ್ರಿಕಲ್ ಆಗಿರುವುದರಿಂದ ರಾಯಚೂರು ಕೃಷಿ ವಿವಿಯಲ್ಲಿ ಅಥವಾ ಜೆಸ್ಕಾಂನಲ್ಲಿ ಸರ್ಕಾರಿ ಉದ್ಯೋಗ ನೀಡುವಂತೆ ಕೋರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಬೇರೆ ಇಲಾಖೆಯ ಹುದ್ದೆಯಾದರೆ ಅದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಗೃಹ ಇಲಾಖೆಯಲ್ಲಿ ಅವರ ಪತಿಯ ತತ್ಸಮಾನ ಹುದ್ದೆ ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಪರಶುರಾಮ ಕುಟುಂಬಕ್ಕೆ ಸರ್ಕಾರದಿಂದ ₹50 ಲಕ್ಷ ವಿಶೇಷ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಉಳಿದಂತೆ ಸರ್ಕಾರದ ನಿಯಮಾನುಸಾರ ಇರುವ ಪರಿಹಾರಗಳು ದೊರೆಯುತ್ತವೆ ಎಂದರು.