ಬಿಜೆಪಿಯಿಂದಲೇ ಜನರ ಜೇಬಿಗೆ ಕನ್ನ: ಡಿಕೆಶಿ

| Published : Apr 24 2024, 02:21 AM IST

ಸಾರಾಂಶ

ಬಿಜೆಪಿಯಿಂದಲೇ ಜನರ ಹಣ ಲೂಟಿ ಆಗುತ್ತಿದೆ. ದಿನ ನಿತ್ಯದ ವಸ್ತುಗಳ ದರವನ್ನು ಏರಿಕೆ ಮಾಡಿ ಲೂಟಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯ್ಕಷ ಡಿ.ಕೆ.ಶಿವಕುಮಾರ್‌ ಅವರು ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಹೊಡೆಯುವ ಮೂಲಕ ಜನರ ಜೇಬನ್ನು ಕನ್ನ ಹಾಕಿತ್ತು. ಈಗ ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ನಿರಂತರವಾಗಿ ಪಿಕ್‌ ಪಾಕೆಟ್‌ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಜನರ ಜೇಬಿಗೆ ಕಾಂಗ್ರೆಸ್‌ ಕನ್ನ ಎಂಬ ಬಿಜೆಪಿ ಜಾಹೀರಾತು ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ಜನರ ಜೇಬನ್ನು ಪಿಕ್‌ ಪಾಕೆಟ್‌ ಮಾಡುತ್ತಿದೆ ಎಂದು ಬಿಜೆಪಿ ಜಾಹೀರಾತು ನೀಡಿದೆ. ಆದರೆ, ಬಿಜೆಪಿ ಪಿಕ್‌ ಪಾಕೆಟ್‌ ಮಾಡಿ ನಮ್ಮ ಮೇಲೆ ಆರೋಪಿಸುತ್ತಿದೆ. ಕಳೆದ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಹೆಸರಿನಲ್ಲಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿ ನಿರಂತರವಾಗಿ ಪಿಕ್‌ ಪಾಕೆಟ್‌ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಪ್ರತಿ ಯುನಿಟ್‌ ವಿದ್ಯುತ್‌ ಬೆಲೆಯಲ್ಲಿ 1.10 ರು. ಕಡಿಮೆ ಮಾಡಿದ್ದೇವೆ. 200 ಯುನಿಟ್‌ವರೆಗೂ ಉಚಿತ ವಿದ್ಯುತ್‌ ನೀಡುತ್ತಿದ್ದೇವೆ. ನಮ್ಮ ಸರ್ಕಾರದ ಕೆಲಸಗಳನ್ನು ನೋಡಿದರೆ ಬಿಜೆಪಿ ನೀಡಿರುವ ಪಿಕ್ ಪಾಕೆಟ್‌ ಜಾಹೀರಾತು ಅವರಿಗೇ ನಾಚಿಕೆಯಾಗುವಂತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಚೊಂಬು ನೀಡಿರುವ ಕುರಿತು ಕಾಂಗ್ರೆಸ್ ನೀಡಿರುವ ಜಾಹೀರಾತು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.

ದೇವೇಗೌಡರ ಕಣ್ಣೀರುಅಗತ್ಯವಿಲ್ಲ: ಡಿಕೆಶಿ ವ್ಯಂಗ್ಯಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕಣ್ಣೀರು ಹಾಕಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ದೇವೇಗೌಡ ಅವರು ಕಣ್ಣೀರು ಹಾಕುವಂತೆ ಯಾರು, ಏನು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕು.

ಕಾಂಗ್ರೆಸ್‌ ಪಕ್ಷ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದೆ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಹಾಸನ ಜಿಲ್ಲೆಯಲ್ಲ. ಬದಲಿಗೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರು. ಹೀಗಾಗಿ ಅವರು ಕಣ್ಣೀರು ಹಾಕುವ ಅವಶ್ಯಕತೆಯಿಲ್ಲ ಎಂದರು.

ರಾಜ್ಯಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಹೇಳಲಾಗದ ಕಾರಣ, ಅವರು ಕಣ್ಣೀರು ಹಾಕಿರಬಹುದು. ಅಲ್ಲದೆ, ಜೆಡಿಎಸ್‌ನ ಅಧಿಕೃತವಾಗಿ ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೈ’ಗೆ ತಮಿಳುನಾಡಿನವಿಸಿಕೆ ಪಕ್ಷದಿಂದ ಬೆಂಬಲ

ಬೆಂಗಳೂರು: ತಮಿಳುನಾಡು ಮೂಲದ ವಿಸಿಕೆ ಪಕ್ಷದ ಅಧ್ಯಕ್ಷ ಮತ್ತು ಸಂಸದ ತೋಳ್ಕಪ್ಪಿಯನ್‌ ತಿರುಮವಳವನ್‌ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಈ ವೇಳೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲದೆ, ಬೆಂಗಳೂರು ಗ್ರಾಮಾಂತರದಲ್ಲಿ ಚಂದ್ರಶೇಖರ್‌, ಕೋಲಾರದಲ್ಲಿ ಎಂ.ಸಿ. ವೇಣು, ಬೆಂಗಳೂರು ದಕ್ಷಿಣದಲ್ಲಿ ರಾಜಕುಮಾರ್‌ ಅವರು ವಿಸಿಕೆ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಅದನ್ನು ಹಿಂಪಡೆದಿರುವುದಾಗಿ ತಿಳಿಸಿದರು. ಜತೆಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿಯೂ ತಿಳಿಸಿದರು.