ಬಿಜೆಪಿಗೆ ಜನತೆ ಪಾಠ ಕಲಿಸಲಿದ್ದಾರೆ

| Published : Mar 17 2024, 01:48 AM IST

ಸಾರಾಂಶ

ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರಿಗೆ ಅದನ್ನು ಒದಗಿಸುತ್ತಿದೆ. ಕೇಂದ್ರ ಸರ್ಕಾರ ನೀಡಿದ ಯಾವುದೇ ಘೋಷಣೆಗಳು ಈಡೇರಿಲ್ಲ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಗೆ ಬೇಸತ್ತ ಜನತೆ ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ತಿಳಿಸಿದರು.

ತಾಲೂಕಿನ ಎಲ್ಲೋಡು ಗ್ರಾಮದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಮಂದಿರ, ಜಾತಿ ಗಳ ಹೆಸರಿನಲ್ಲಿ ಎಲ್ಲರಿಗೂ ಅನ್ಯಾಯ ಮಾಡುತ್ತಿದೆ ಎಂದರು.

ದಕ್ಷಿಣ ಭಾರತಕ್ಕೆ ಅನ್ಯಾಯ

ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ತುಂಬಾ ಅನ್ಯಾಯ ಮಾಡುತ್ತಿದೆ. ನಾವು ಕಟ್ಟುವ ತೆರಿಗೆಯ ಕಾಲುಭಾಗದಷ್ಟು ಸಹ ನೀಡುತ್ತಿಲ್ಲ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಇದೀಗ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿಯಾಗಲಿದೆ. ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರಿಗೆ ಅದನ್ನು ಒದಗಿಸುತ್ತಿದೆ. ಕೇಂದ್ರ ಸರ್ಕಾರ ನೀಡಿದ ಯಾವುದೇ ಘೋಷಣೆಗಳು ಈಡೇರಿಲ್ಲ. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್‌ ಸರ್ಕಾರ ನೀಡಿದ ಗ್ಯಾರಂಟಿಗಳು ಮತಗಳಾಗಿ ಬದಲಾವಣೆಯಾಗಲಿದ್ದು, ಕರ್ನಾಟಕದಲ್ಲಿ 20ರಿಂದ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಲಿದೆ ಎಂದರು.

ಬಿಜೆಪಿ- ಜೆಡಿಎಸ್‌ ಮೈತ್ರಿ

ಇನ್ನೂ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಮುಸ್ಲಿಂ ಆಗಿ ಹುಟ್ಟುವೆ ಎಂದು ಹೇಳಿದ್ದರು. ದೇಶದಲ್ಲಿ ಮುಸಲ್ಮಾನರಿಗೆ ಕಿರುಕುಳ ಆಗುತ್ತದೆ ಎಂದು ಹೇಳುತ್ತಿದ್ದರು. ಈಗ ಅದೇ ಬಿಜೆಪಿ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ. ಮುಂದೆ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ ಹುಟ್ಟಬೇಕು ಎಂದು ಹೇಳುತ್ತಾರೆ. ಅದೇ ರೀತಿ ಕುಮಾರಸ್ವಾಮಿಯವರು ರಾಜ್ಯ ಶಾಂತಿಯಿಂದ ಇರಬೇಕು ಎಂದು ಹೇಳುತ್ತಿದ್ದರು. ಆದರೆ ಇದೀಗ ಶಾಂತಿ ಹದೆಗೆಡಿಸುವ ಕೆಲಸ ಮಾಡೋಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೈತ್ರಿಯಿಂದ ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು.

ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಸಹ ಈ ಬಾರಿ ಕಾಂಗ್ರೆಸ್ ಜಯ ಗಳಿಸಲಿದೆ. ಯಾರೆ ಅಭ್ಯರ್ಥಿಯಾಗಲಿ ಜನರು ಬೆಂಬಲಿಸುತ್ತೇವೆ. ಯೂತ್ ಕಾಂಗ್ರೆಸ್‌ ವತಿಯಿಂದ ಮನೆ ಮನೆಗೂ ಭೇಟಿ ನೀಡಿ ಪಕ್ಷವನ್ನು ಗೆಲ್ಲಿಸಲು ಶ್ರಮ ವಹಿಸುತ್ತೇವೆ. ನಾನು ವಿದ್ಯಾರ್ಥಿಯಾಗಿದ್ದಾಗಿನಿಂದ ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇದೀಗ ಪಕ್ಷ ನನಗೆ ಯೂತ್ ಕಾಂಗ್ರೇಸ್ ಕಾರ್ಯದರ್ಶಿ ಹುದ್ದೆ ನೀಡಿದ್ದು, ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.

ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಬಾಲೇನಹಳ್ಳಿ ರಮೇಶ್, ಪಿಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮಂಜುನಾಥ್ ರೆಡ್ಡಿ, ಮುಖಂಡರಾದ ಹೆಚ್.ಪಿ. ಲಕ್ಷ್ಮೀನಾರಾಯಣ, ನವೀನ್ ರಾಜ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.