ಸಾರಾಂಶ
ನವದೆಹಲಿ: ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಬಹುಮತ ಬಾರದ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ 30 ಲಕ್ಷ ಕೋಟಿ ರು. ನಷ್ಟವಾಗಿರುವುದು ಬಿಜೆಪಿ ಪ್ರಾಯೋಜಿತ ಅತಿದೊಡ್ಡ ಷೇರುಪೇಟೆ ಹಗರಣವಾಗಿದ್ದು, ಈ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ‘ಬಿಜೆಪಿ ನಾಯಕರಿಗೆ ಷೇರುಪೇಟೆ ಕುಸಿತವಾಗುವುದು ಮೊದಲೇ ಗೊತ್ತಿದ್ದರೂ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಷೇರುಪೇಟೆಯ ಕುರಿತು ನರೇಂದ್ರ ಮೋದಿಯೂ ಸೇರಿದಂತೆ ಬಿಜೆಪಿ ನಾಯಕರು ಮಾತನಾಡಿ ಜನರನ್ನು ಹೂಡಿಕೆ ಮಾಡುವಂತೆ ಪ್ರಚೋದಿಸಿದರು. ಇದಕ್ಕೆ ಪೂರಕವಾಗಿ ಚುನಾವಣೋತ್ತರ ಸಮೀಕ್ಷೆಯಲ್ಲೂ ಬಿಜೆಪಿಗೆ ಭಾರೀ ಬಹುಮತ ಬರುವಂತೆ ಸುಳ್ಳುಸುದ್ದಿ ಪ್ರಕಟಿಸಲಾಯಿತು. ಇದರಿಂದಾಗಿ ಭಾರತೀಯರಿಗೆ ಭಾರೀ ನಷ್ಟವಾಗಿದ್ದು, ಈ ಕುರಿತು ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ ಸಂಸ್ಥೆಗಳ ಮೇಲೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಪಟ್ಟು ಹಿಡಿದರು.
ಭಾರತೀಯರಿಗೆ ಲಾಭ: ಈ ನಡುವೆ ಮಾಜಿ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯಿಸಿ ಭಾರತೀಯರಿಗೆ ಭಾರೀ ಲಾಭವಾಗಿದ್ದು, ಷೇರುಪೇಟೆಯ ಪರಿಜ್ಞಾನವಿಲ್ಲದ ರಾಹುಲ್ ಗಾಂಧಿ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸೆನ್ಸೆಕ್ಸ್ ಮತ್ತೆ 693 ಅಂಕಗಳ ಏರಿಕೆ: 2 ದಿನದಲ್ಲಿ 21 ಲಕ್ಷ ಕೋಟಿ ವಾಪಸ್‌ಮುಂಬೈ: ಬಾಂಬೆ ಷೇರು ಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ 693 ಅಂಕಗಳ ಏರಿಕೆ ಕಂಡು 75074ರಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಕಳೆದ 2 ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆ 2996 ಅಂಕಗಳ ಏರಿಕೆ ಕಂಡಂತಾಗಿದೆ. ಮಂಗಳವಾರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ದಿನ ಸೂಚ್ಯಂಕ 4389 ಅಂಕ ಕುಸಿದು ಹೂಡಿಕೆದಾರರ 31 ಲಕ್ಷ ಕೋಟಿ ರು. ಸಂಪತ್ತು ಕರಗಿ ಹೋಗಿತ್ತು. ಆದರೆ ಬಳಿಕ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಖಚಿತವಾದ ಬಳಿಕ ಸೆನ್ಸೆಕ್ಸ್ ಬುಧವಾರ ಕೂಡಾ ಏರಿಕೆ ಕಂಡಿತ್ತು. ಇದೀಗ ಗುರುವಾರ ಕೂಡಾ ಏರಿಕೆ ಕಂಡಿದೆ. ಎರಡು ದಿನಗಳ ಏರಿಕೆ ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ 21 ಲಕ್ಷ ಕೋಟಿ ರು. ಏರಿಕೆಯಾಗಿದೆ.