ಸಾರಾಂಶ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮೇಲ್ಮನೆಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇರೆಗೆ ಬಂಧಿಸಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿ ಪೊಲೀಸರು ಗುರುವಾರ ರಾತ್ರಿಯಿಡೀ ಸುತ್ತಾಡಿಸಿದ್ದಾರೆ.
ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮೇಲ್ಮನೆಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇರೆಗೆ ಬಂಧಿಸಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿ ಪೊಲೀಸರು ಗುರುವಾರ ರಾತ್ರಿಯಿಡೀ ಸುತ್ತಾಡಿಸಿದ್ದಾರೆ.
ಖಾನಾಪುರ, ಕಿತ್ತೂರು, ರಾಮದುರ್ಗ, ಲೋಕಾಪುರ, ಅಂಕಲಿ ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 500 ಕಿ.ಮೀ.ಗೂ ಹೆಚ್ಚು ದೂರ ಸುತ್ತಾಡಿಸಿದ್ದಾರೆ.
ಪೊಲೀಸರ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ನಾಯಕರು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ಸುರಕ್ಷಿತತೆ ದೃಷ್ಟಿಯಿಂದ ಶಾಸಕರನ್ನು ವಿವಿಧೆಡೆ ಕರೆದುಕೊಂಡು ಹೋಗಬೇಕಾಯಿತು ಎಂದು ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ನೈಟ್ ರೌಂಡ್ಸ್:
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಗುರುವಾರ ಸಂಜೆ ಸುವರ್ಣ ವಿಧಾನಸೌಧದಲ್ಲಿ ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು, ಅವರನ್ನು ಬಲವಂತವಾಗಿ ಹೊತ್ತೊಯ್ದು ಪೊಲೀಸ್ ವಾಹನದಲ್ಲಿ ಕೂರಿಸಿದರು. ನಂತರ, ಅವರನ್ನು ಖಾನಾಪುರ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಮೊದಲಿಗೆ ವಕೀಲರ ಭೇಟಿಗೂ ಅವಕಾಶ ನೀಡಲಿಲ್ಲ. ಬಳಿಕ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಆಗಮನ ಬಳಿಕ ವಕೀಲರ ಭೇಟಿಗೆ ಅವಕಾಶ ನೀಡಲಾಯಿತು.
ಖಾನಾಪುರದಲ್ಲಿ ಅವರನ್ನು ಮತ್ತೆ ಬಲವಂತವಾಗಿ ವಾಹನಕ್ಕೆ ಹತ್ತಿಸಲಾಯಿತು. ಈ ವೇಳೆ, ಅವರ ತಲೆಗೆ ಗಾಯವಾಗಿ ರಕ್ತ ಸುರಿಯಲು ಆರಂಭವಾಯಿತು. ಅಲ್ಲಿಂದ ನಂದಗಾಡೆ ಠಾಣೆ, ಬಳಿಕ, ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಕರೆದುಕೊಂಡು ಹೋಗಲಾಯಿತು. ಕಿತ್ತೂರಿನಲ್ಲಿ ಮಧ್ಯರಾತ್ರಿ 1.45ರ ಸುಮಾರಿಗೆ ಅರ್ಧ ಗಂಟೆ ಕಾಲ ಪೊಲೀಸ್ ವಾಹನ ನಿಂತೆ ಇತ್ತು. ನಂತರ, ಸವದತ್ತಿ ಬಳಿಯ ಸ್ಟೋನ್ ಕ್ರಶರ್ ಬಳಿ ಕರೆದೊಯ್ಯಲಾಯಿತು.
ತಡರಾತ್ರಿ ರಸ್ತೆಯಲ್ಲೇ ಧರಣಿ:
ನಂತರ, ಬೈಲಹೊಂಗಲ, ರಾಮದುರ್ಗಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸ್ವಲ್ಪ ಹೊತ್ತು ವಾಹನ ನಿಲ್ಲಿಸಲಾಯಿತು. ಇದರಿಂದ ಆಕ್ರೋಶಗೊಂಡ ರವಿ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ನನ್ನನೇಕೆ ಬಂಧಿಸಿದ್ದಿರಿ?, ನನ್ನನೇಕೆ ಸುತ್ತಾಡಿಸುತ್ತಿದ್ದೀರಿ? ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ, ರಾಮದುರ್ಗದಲ್ಲಿ ಅವರ ತಲೆಗೆ ಗಾಯಗೊಂಡಿದ್ದರಿಂದ ಚಿಕಿತ್ಸೆ ಕೊಡಿಸಿ, ತಲೆಗೆ ಬ್ಯಾಂಡೇಜ್ ಹಚ್ಚಲಾಯಿತು.
ಬಳಿಕ, ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಬೆಳಗಿನ ಜಾವ 5 ಗಂಟೆ ಬಳಿಕ ಗೌಪ್ಯ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಲಾಯಿತು.