ಸಾರಾಂಶ
ನವದೆಹಲಿ: ‘ದುರ್ಬಲ ಜನಾದೇಶದೊಂದಿಗೆ ಈ ಸಲ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಏರಿದ್ದಾರೆ. ಮೋದಿ ನೈತಿಕವಾಗಿ, ರಾಜಕೀಯವಾಗಿ ಸೋತಿದ್ದಾರೆ. ಆದರೆ ಅದನ್ನು ಅರಿಯದ ಅವರು ಈಗಲೂ ಪ್ರತಿಪಕ್ಷಗಳ ಜತೆ ಹಿಂದಿನಂತೆಯೇ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ಅವರ ಮನೋಭಾವ ಬದಲಾಗಬಹುದು ಎಂದುಕೊಂಡಿದ್ದೆವು. ಆದರೆ ನಮ್ಮ ಈ ಆಶಾವಾದ ಭಗ್ನಗೊಂಡಿದೆ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಹಾರ ನಡೆಸಿದ್ದಾರೆ.‘
ದ ಹಿಂದೂ’ ಪತ್ರಿಕೆಗೆ ಲೇಖನ ಬರೆದಿರುವ ಅವರು, ‘ಜೂ.4ರಂದು ಜನತೆ ನೀಡಿದ ತೀರ್ಪು ಚಾಣಾಕ್ಷ ತೀರ್ಪಾಗಿದೆ. ಅದು ತಮ್ಮನ್ನು ತಾವು ದೈವಿಕ ಎಂದು ಕರೆದುಕೊಂಡಿದ್ದ ಮೋದಿ ಅವರ ವೈಯಕ್ತಿಕ, ರಾಜಕೀಯ ಹಾಗೂ ನೈತಿಕ ಸೋಲು’ ಎಂದು ಟೀಕಿಸಿದ್ದಾರೆ.ಆದಾಗ್ಯೂ ‘18ನೇ ಲೋಕಸಭೆಯ ಮೊದಲ ಕೆಲವು ದಿನಗಳು ದುಃಖಕರವಾಗಿವೆ. ಅವು ಉತ್ತೇಜನಕಾರಿಯಾಗಿಲ್ಲ. ಬದಲಾದ ಮನೋಭಾವವನ್ನು ನಾವು ನೋಡಬಹುದು ಎಂಬ ಯಾವುದೇ ಭರವಸೆ ಈಡೇರಿಲ್ಲ. ಪ್ರಧಾನಿ ಏನೂ ಆಗೇ ಇಲ್ಲ ಎಂಬಂತೆ ಮುಂದುವರಿಯುತ್ತಿದ್ದಾರೆ. ಅವರು ಒಮ್ಮತದ ಮೌಲ್ಯವನ್ನು ನಮ್ಮ ಮುಂದೆ ಬೋಧಿಸುತ್ತಾರೆ. ಆದರೆ ಅವರು ನಂತರ ಸಂಘರ್ಷಕ್ಕೆ ಇಳಿಯುತ್ತಾರೆ’ ಎಂದು ಕಿಡಿಕಾರಿದ್ದಾರೆ.ಉಪ ಸ್ಪೀಕರ್ ಹುದ್ದೆ:
ಇದೇ ವೇಳೆ, ‘ಕಳೆದ 5 ವರ್ಷ ಉಪ ಸ್ಪೀಕರ್ ಸ್ಥಾನವನ್ನು ಮೋದಿ ಸರ್ಕಾರ ಖಾಲಿ ಬಿಟ್ಟಿತ್ತು. ಅಂಥ ಸಾಂವಿಧಾನಿಕ ಹುದ್ದೆ ಖಾಲಿ ಬಿಡುವುದು ಸ್ವೀಕಾರಾರ್ಹವಲ್ಲ. ಈ ಸಲ ಅದರ ಹಿಂದಿನ ಸಂಪ್ರದಾಯದಂತೆ ವಿಪಕ್ಷಗಳಿಗೆ ಬಿಟ್ಟುಕೊಡಿ ಎಂದು ಕೋರಿದರೂ ನಮ್ಮ ಮಾತು ಕೇಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತುರ್ತುಸ್ಥಿತಿ ಪ್ರಸ್ತಾಪಕ್ಕೆ ಗರಂ:ತುರ್ತುಪರಿಸ್ಥಿತಿಯ ಬಗ್ಗೆ ಮೋದಿ ಪದೇ ಪದೇ ಪ್ರಸ್ತಾಪಿಸಿ ಕಾಂಗ್ರೆಸ್ಸನ್ನು ಟೀಕಿಸುತ್ತಿದ್ದಾರೆ.
ಸ್ಪೀಕರ್ ಕೂಡ ನಿಷ್ಪಕ್ಷಪಾತಿ ಆಗದೇ ತುರ್ತುಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದು ವಿಸ್ಮಯಕಾರಿ. ಈ ಮೂಲಕ ಬಿಜೆಪಿಯು ಸಂವಿಧಾನದ ಮೇಲೆ ನಡೆಸಿದ್ದ ದಾಳಿಯನ್ನು ಮುಚ್ಚಿ ಹಾಕಿ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸೋನಿಯಾ ಕಿಡಿಕಾರಿದ್ದಾರೆ.‘1977ರಲ್ಲಿ ತುರ್ತುಸ್ಥಿತಿ ಮುಗಿದ ನಂತರ ದೇಶದ ಜನರು ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸ್ಪಷ್ಟ ತೀರ್ಪು ನೀಡಿದರು.
ಅದನ್ನು ಪಕ್ಷ ಹಿಂಜರಿಕೆಯಿಲ್ಲದೆ ಮತ್ತು ನಿಸ್ಸಂದಿಗ್ಧವಾಗಿ ಒಪ್ಪಿಕೊಂಡಿತಿ. ಆದರೆ ಅದಾದ ಮೂರು ವರ್ಷಗಳ ನಂತರ, ಜನರೇ ವಿನಮ್ರವಾಗಿದ್ದ ಪಕ್ಷಕ್ಕೆ ಮತ್ತೆ ಅಧಿಕಾರ ನೀಡಿದರು. ಮೋದಿ ಹಾಗೂ ಅವರ ಪಕ್ಷವು ಬಹುಮತ ಸಾಧಿಸದೇ ಅಧಿಕಾರಕ್ಕೆ ಬಂದಿದ್ದು ಕೂಡ ಈಗ ಇದೇ ಇತಿಹಾಸದ ಭಾಗವಾಗಿದೆ’ ಎಂದು ಅವರು ಕುಟುಕಿದ್ದಾರೆ.