ಬಡತನ ನಿರ್ಮೂಲನೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ರಕ್ಷಾ ರಾಮಯ್ಯ

| Published : Apr 24 2024, 02:25 AM IST

ಸಾರಾಂಶ

ದೊಡ್ಡಬಳ್ಳಾಪುರ ಟೌನ್ ವ್ಯಾಪ್ತಿಯಲ್ಲಿ ಮಾಜಿ ಶಾಸಕರಾದ ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಎಲೆಪೇಟೆ, ಚಿಕ್ಕಪೇಟೆ ಹಾಗೂ ವಿವಿಧ ರಸ್ತೆಗಳಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ಹೆಸರಘಟ್ಟ

ಬಹಿರಂಗ ಪ್ರಚಾರಕ್ಕೆ ಕೇವಲ ಒಂದು ದಿನ ಬಾಕಿ ಇರುವಂತೆಯೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪ್ರಚಾರದ ಕಣವನ್ನು ರಂಗೇರಿಸಿದರು. ಕ್ಷೇತ್ರದ ಹಲವೆಡೆ ಮಿಂಚಿನ ಸಂಚಾರ ನಡೆಸಿ ಧೂಳೆಬ್ಬಿಸಿದರು. ಯಲಹಂಕದ ಹೆಸರಘಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಪರಾಕ್ ಘೋಷಣೆ ಕೂಗಿದರು. ವಿವಿಧೆಡೆ ಪ್ರಚಾರ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿಯಿಂದ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.

ದೊಡ್ಡಬಳ್ಳಾಪುರ ಟೌನ್ ವ್ಯಾಪ್ತಿಯಲ್ಲಿ ಮಾಜಿ ಶಾಸಕರಾದ ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಎಲೆಪೇಟೆ, ಚಿಕ್ಕಪೇಟೆ ಹಾಗೂ ವಿವಿಧ ರಸ್ತೆಗಳಲ್ಲಿ ಪ್ರಚಾರ ನಡೆಸಿದರು.

ಮತದಾರರನ್ನುದ್ದೇಶಿಸಿ ಮಾತನಾಡಿದ ರಕ್ಷಾ ರಾಮಯ್ಯ, ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ಲಾಭವಾಗಿದೆ. ರಾಜ್ಯದ ಪ್ರತಿಯೊಂದು ಮನೆಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲವಾಗುತ್ತಿದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಬಡತನ ನಿರ್ಮೂಲನೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿದರು.

ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸುವುದು ಕಾಂಗ್ರೆಸ್ ಗುರಿಯಾಗಿದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ಉದ್ಯೋಗ ತರಬೇತಿ ನೀಡುವುದನ್ನು ಕಾಂಗ್ರೆಸ್ ಆಡಳಿತ ಕಡ್ಡಾಯಗೊಳಿಸಲಿದೆ. ಯುವ ಸಮೂಹದ ಸ್ವಾವಲಂಬಿ ಬದುಕು ನಮ್ಮ ಗುರಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಬಿಜೆಪಿ ಭರವಸೆ ಹುಸಿಯಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಯೋಜನೆಗಳ ಕುರಿತು ಎಲ್ಲೆಡೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸರ್ವರ ಪ್ರಗತಿಗಾಗಿ ಕಾಂಗ್ರೆಸ್ ಬೆಂಬಲಿಸಿ, ನನ್ನ ಕ್ರಮ ಸಂಖ್ಯೆ 3. ಹಸ್ತದ ಗುರುತಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ರಕ್ಷಾ ರಾಮಯ್ಯ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ, ರೈತರು, ಮಹಿಳೆಯರು, ಯುವಕರ ರಕ್ಷಣೆಗಾಗಿ ಕಟಿಬದ್ಧವಾಗಿದ್ದು, ಜನರ ನೋವು ಶಮನ ಮಾಡುತ್ತದೆ. ಬಿಜೆಪಿ ಶ್ರೀಮಂತರ ಪರವಾಗಿದ್ದು, ಬಡವರ ಬಗ್ಗೆ ಕಾಳಜಿ ಮಾಡುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಗರಾಜ್ ಗೌಡರು, ದೇವರಾಜ್, ಸಂಧ್ಯಾನಾಗರಾಜ್, ಗ್ರಾ.ಪಂ ಸದಸ್ಯರು,ಯುವಕರು, ಮಹಿಳೆಯರು ಉಪಸ್ಥಿತರಿದ್ದರು.