ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌

| N/A | Published : Sep 19 2025, 10:20 AM IST

BJP Flag pic
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದ ನಾಯಕರು ಒಗ್ಗಟ್ಟಿನಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಾದಿಸಿದ್ದಾರೆ.

  ಬೆಂಗಳೂರು :  ಪಕ್ಷದ ನಾಯಕರು ಒಗ್ಗಟ್ಟಿನಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಾದಿಸಿದ್ದಾರೆ.

ಗುರುವಾರ ನಗರದ ಯಲಹಂಕ ಬಳಿಯ ರೆಸಾರ್ಟ್‌ವೊಂದರಲ್ಲಿ ಆರಂಭಗೊಂಡ ಎರಡು ದಿನಗಳ ‘ರಾಜಕೀಯ ಚಿಂತನ ಶಿಬಿರ’ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸುಳ್ಳು. ಮನಸ್ಸು ಮಾಡಿದರೆ ಅಧಿಕಾರಕ್ಕೆ ಬರಲು ಸಾಧ್ಯ. ಏನೇ ಬಂದರೂ ಒಗ್ಗಟ್ಟಾಗಿರಬೇಕು. ಒಂದಾಗಿ ಹೋರಾಟ ಮಾಡಬೇಕು. ಪಕ್ಷದ ವರ್ಚಸ್ಸು ಹೆಚ್ಚಿಸಬೇಕು. ಆಗ ಜನರ ಬೆಂಬಲ ತಾನಾಗಿಯೇ ಲಭಿಸುತ್ತದೆ ಎಂದರು.

ಹಿಂದೆ ಎರಡು ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳು ಪಕ್ಷಕ್ಕೆ ಲಭಿಸಿವೆ. ಇತರರ ನೆರವಿನಿಂದ ಸರ್ಕಾರ ರಚಿಸಿದರೂ ಉತ್ತಮ ಆಡಳಿತ ನೀಡಲಾಗಿದೆ. ರಾಜ್ಯ ಘಟಕದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಇದನ್ನು ಹೋಗಲಾಡಿಸಬೇಕಿದೆ. ಎಲ್ಲ ಮುಖಂಡರೂ ಒಗ್ಗಟ್ಟಿನಿಂದ ಸಾಗಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಯಬೇಕು ಎಂದು ತಿಳಿಸಿದರು ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಮಾತನಾಡಿದ ಹಲವು ಶಾಸಕರು ಹಾಗೂ ಸಂಸದರು, ಪಕ್ಷದ ನಾಯಕರು ಒಗ್ಗಟ್ಟಿನಿಂದ ಮುನ್ನಡೆಯುವ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂಬ ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಮೊದಲ ದಿನವಾದ ಗುರುವಾರ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಅವರು ‘ಒಂದು ದೇಶ , ಒಂದು ಚುನಾವಣೆ’ ಕುರಿತು ಉಪನ್ಯಾಸ ನೀಡಿದರು. ನಂತರ ಮಾಜಿ ಸಚಿವ ಹಾಗೂ ಶಾಸಕ ಎಸ್‌.ಸುರೇಶ್‌ಕುಮಾರ್ ಅವರು ‘ಬಿಜೆಪಿ ಬೆಳೆದು ಬಂದ ದಾರಿ’ ಕುರಿತು ಮಾತನಾಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್‌ವಾಲ್‌, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಇಂದು ಸರ್ಕಾರದ ವೈಫಲ್ಯ ಬಗ್ಗೆ-ರವಿಕುಮಾರ್‌:

ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿಬಿರದ ಸಂಚಾಲಕರೂ ಆಗಿರುವ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯ ಕುರಿತು ಶುಕ್ರವಾರ ಈ ಶಿಬಿರದಲ್ಲಿ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.

Read more Articles on