ಕಸಬ್‌ ಗಲ್ಲಿಗೇರಲು ಶ್ರಮಿಸಿದ್ದ ನಿಕಂ, ಶ್ರಿಂಗ್ಲಾ, ಮಾಸ್ಟರ್‌ ಸೇರಿ ನಾಲ್ವರು ರಾಜ್ಯಸಭೆಗೆ

| N/A | Published : Jul 14 2025, 05:56 AM IST

rajyasabha
ಕಸಬ್‌ ಗಲ್ಲಿಗೇರಲು ಶ್ರಮಿಸಿದ್ದ ನಿಕಂ, ಶ್ರಿಂಗ್ಲಾ, ಮಾಸ್ಟರ್‌ ಸೇರಿ ನಾಲ್ವರು ರಾಜ್ಯಸಭೆಗೆ
Share this Article
  • FB
  • TW
  • Linkdin
  • Email

ಸಾರಾಂಶ

26/11 ಮುಂಬೈ ದಾಳಿ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಕೇರಳ ಬಿಜೆಪಿ ನಾಯಕ ಸಿ. ಸದಾನಂದನ್ ಮಾಸ್ಟರ್ ಮತ್ತು ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ರಾಜ್ಯಸಭೆಗೆ ನಾಮನಿರ್ದೇಶನ

ನವದೆಹಲಿ : 26/11 ಮುಂಬೈ ದಾಳಿ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಕೇರಳ ಬಿಜೆಪಿ ನಾಯಕ ಸಿ. ಸದಾನಂದನ್ ಮಾಸ್ಟರ್ ಮತ್ತು ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

ಸಂವಿಧಾನದ 80(1)ಎ ವಿಧಿಯಡಿ ನೀಡಲಾದ ವಿಶೇಷ ಅಧಿಕಾರದಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕಸಬ್‌ ಗಲ್ಲಿಗೇರಿಸಲು ನಿಕಂ ಶ್ರಮ:

ರಾಜ್ಯಸಭೆಗೆ ಆಯ್ಕೆಯಾಗಿರುವ ವಕೀಲ ಉಜ್ವಲ್ ನಿಕಂ ಮುಂಬೈ ದಾಳಿ, ಪ್ರಮೋದ್ ಮಹಾಜನ ಹತ್ಯೆ ಪ್ರಕರಣ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದಾರೆ. 26/11 ಮುಂಬೈ ದಾಳಿಕೋರ ಉಗ್ರ ಕಸಬ್‌ ಗಲ್ಲಿಗೇರಲು ನಿಕಂ ಕೊಡುಗೆ ಅಭೂತಪೂರ್ವವಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುಂಬೈ ಉತ್ತರ ಕೇಂದ್ರ ಸ್ಥಾನದಿಂದ ಸ್ಪರ್ಧಿಸಿ, ಸೋತಿದ್ದರು.

ವಿದೇಶಾಂಗ ನೀತಿಗೆ ಶ್ರಿಂಗ್ಲಾ ಕೊಡುಗೆ ಅಪಾರ:

ಹರ್ಷವರ್ಧನ್ ಶ್ರಿಂಗ್ಲಾ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದು, ವಿದೇಶಾಂಗ ನೀತಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಶ್ರಿಂಗ್ಲಾ ಜನವರಿ 2020 ಮತ್ತು ಏಪ್ರಿಲ್ 2022ರ ನಡುವೆ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು 2023 ರಲ್ಲಿ ಭಾರತ ಆಯೋಜಿಸಿದ್ದ ಜಿ20 ಶೃಂಗಸಭೆಯ ಮುಖ್ಯ ಸಂಯೋಜಕರಾಗಿದ್ದರು. ಇದಕ್ಕೂ ಮೊದಲು, ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಮತ್ತು ಬಾಂಗ್ಲಾದೇಶಕ್ಕೆ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.

ಸಂಶೋಧಕಿ, ಇತಿಹಾಸ ತಜ್ಞೆ ಮೀನಾಕ್ಷಿ:

ಡಾ. ಮೀನಾಕ್ಷಿ ಜೈನ್ ದೆಹಲಿ ವಿವಿಯ ಗಾರ್ಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ರಾಜಕೀಯ ವಿಜ್ಞಾನಿ ಮತ್ತು ಇತಿಹಾಸಕಾರರಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2020ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅವರು ಈ ಹಿಂದೆ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ವೈರಿಗಳಿಂದ ಕಾಲು ಕಳಕೊಂಡಿದ್ದ ಮಾಸ್ಟರ್:

ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಸದಾನಂದನ್ ಮಾಸ್ಟರ್‌ ಅವರು ಕೇರಳದ ಕಣ್ಣೂರು ಜಿಲ್ಲೆಯಲ್ಲಿ 2016 ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದಕ್ಕೂ ಮುನ್ನ1994ರಲ್ಲಿ ಪಕ್ಷ ಬದಲಾಯಿಸಿದ ನಂತರ ಅವರ ಎರಡೂ ಕಾಲುಗಳನ್ನು ಸಿಪಿಎಂ ಕಾರ್ಯಕರ್ತರು ಕತ್ತರಿಸಿದ್ದರು. ಆ ಬಳಿಕವೂ ಧೃತಿಗೆಡದೆ ಸಮಾಜಸೇವೆಯಲ್ಲಿ ತೊಡಗಿದ್ದಾರೆ.

ರಾಜ್ಯಸಭೆಗೆ ನೇಮಕವಾದ ನಿಕಂ ಜತೆ ಮೋದಿ ಮರಾಠಿ ಮಾತು!

ಮುಂಬೈ: ಮಹಾರಾಷ್ಟ್ರ ಮೂಲದ ಖ್ಯಾತ ವಕೀಲ ಉಜ್ವಲ್ ನಿಕಂ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬೆನ್ನಲ್ಲೆ, ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ ನಾನು ಮರಾಠಿಯಲ್ಲೇ ಮಾತಾಡಬೇಕೆ? ಎಂದು ಪ್ರಶ್ನಿಸಿದರು. ಆ ಬಳಿಕ ಮರಾಠಿಯಲ್ಲೇ ಸಂಭಾಷಣೆ ಮುಂದುವರಿಸಿದರು ಎಂಬ ಅಚ್ಚರಿಯ ಸಂಗತಿಯನ್ನು ಸ್ವತಃ ಉಜ್ವಲ್ ನಿಕಂ ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠಿಯೇತರ ಭಾಷಿಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಮೋದಿಯವರ ಈ ನಡೆ ಮಹತ್ವ ಪಡೆದುಕೊಂಡಿದೆ.

ಪತ್ರಕರ್ತರ ಜತೆ ಮಾತನಾಡಿದ ನಿಕಂ, ‘ಪ್ರಧಾನಿ ಮೋದಿಯವರು ಮರಾಠಿಯಲ್ಲೇ ಮಾತಾಡಲು ಆರಂಭಿಸಿದರು. ತಾನು ಹಿಂದಿಯಲ್ಲಿ ಮಾತಾಡಬೇಕೋ ಅಥವಾ ಮರಾಠಿಯಲ್ಲಿ ಮಾತಾಡಬೇಕೋ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ನಗಲು ಆರಂಭಿಸಿದೆ. ಅದನ್ನು ಕೇಳಿ ಅವರೂ ನಗಲು ತೊಡಗಿದರು’ ಎಂದು ಹೇಳಿದ್ದಾರೆ.

ಅಲ್ಲದೆ, ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಭಾಷಾ ಸಂಘರ್ಷದ ಕುರಿತು ಪ್ರತಿಕ್ರಿಯಿಸಿದ ನಿಕಂ, ‘ಹಿಂದಿ ಕಲಿಕೆ ನನ್ನ ಬೆಳವಣಿಗೆಗೆ ಸಹಾಯ ಮಾಡಿತು. ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ಸ್ಥಳೀಯ ಭಾಷೆ ಕಲಿಯಲು ಯತ್ನಿಸುತ್ತೇನೆ’ ಎಂದರು.

Read more Articles on