ಸಾರಾಂಶ
ಬೆಂಗಳೂರು : ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಿಂಪಿ ಸಮುದಾಯ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಕರೆ ನೀಡಿದರು.
ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜ ನಗರದಲ್ಲಿ ಆಯೋಜಿಸಿದ್ದ ನಾಮದೇವ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕದಾಗಿರುವ ಸಿಂಪಿ ಸಮುದಾಯ ಪ್ರಗತಿ ಸಾಧಿಸಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಮುದಾಯದ ಮಕ್ಕಳ ಶಿಕ್ಷಣಕ್ಕೆ ತಮ್ಮ ಟ್ರಸ್ಟ್‌ನಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರವು ಈ ಸಮುದಾಯಕ್ಕೆ ಪ್ರೋತ್ಸಾಹ ನೀಡಿತ್ತು. ಪ್ರಸಕ್ತ ಸರ್ಕಾರವೂ ಸಮುದಾಯಕ್ಕೆ ಅಗತ್ಯವಾದ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಚಿತ್ರ ನಿರ್ಮಾಪಕ ಎಂ.ಎನ್.ಸುರೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಂಪಿ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ನೆರವು ನೀಡಿದ್ದಾರೆ, ಅಭಿವೃದ್ಧಿ ಕಾರ್ಯಗಳಿಗೆ ಒಂದು ಕೋಟಿ ರುಪಾಯಿ ನೀಡುವುದಾಗಿ ಭರವಸೆ ನೀಡಿದ್ದು ಈಗಾಗಲೇ ಐವತ್ತು ಲಕ್ಷ ರು. ನೀಡಿದ್ದಾರೆ, ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಫಂಡರಪುರದ ಜ್ಞಾನೇಶ್ವರ ತುಳಸಿದಾಸ್ ನಾಮದಾಸ್ ಸ್ವಾಮೀಜಿ, ಶಾಸಕರಾದ ಪ್ರಕಾಶ್ ಕೋಳಿವಾಡ, ನಾಗರಾಜ ಯಾದವ್, ಸಂಘದ ರಾಜ್ಯಾಧ್ಯಕ್ಷ ನಾರಾಯಣರಾವ್ ವಿ.ಕೋಪರ್ಡೆ ಉಪಸ್ಥಿತರಿದ್ದರು.