ಸಾರಾಂಶ
ಬೆಂಗಳೂರು : ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಲವು ಹಿಂದೂಪರ ಸಂಘಟನೆಗಳು ಸೋಮವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದವು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ದೋ.ಕೇಶವಮೂರ್ತಿ, ವಕ್ಫ್ ಕಾಯ್ದೆಯ ವಿರೋಧದ ಹೆಸರಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ರಾಷ್ಟ್ರ ಮತ್ತು ಹಿಂದೂ ವಿರೋಧಿ ಶಕ್ತಿಗಳಿಗೆ ಅಲ್ಲಿ ಮುಕ್ತ ಸ್ವಾತಂತ್ರ್ಯ ನೀಡಿರುವುದರಿಂದ ಹಿಂಸಾಚಾರ ಹೆಚ್ಚಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ಹಿಂಸೆಯ ಬಗ್ಗೆ ಎನ್‌ಐಎ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಕೇಂದ್ರದ ಭದ್ರತಾ ಪಡೆಗಳ ಕೈಗೆ ಒಪ್ಪಿಸಬೇಕು. ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಗೂಢಚಾರಿಗಳನ್ನು ಗುರುತಿಸಿ ತಕ್ಷಣ ದೇಶದಿಂದ ಹೊರದಬ್ಬಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿದ್ದಲಿಂಗ ಸ್ವಾಮೀಜಿ, ಸತ್ಯವರ್ಧನ ಪರಿವಾಜಕ ಸ್ವಾಮೀಜಿ, ಅವಧೂತ ನರಸಿಂಹಮೂರ್ತಿ ಸ್ವಾಮೀಜಿ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಹಿಂದೂ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷದ್, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರೂ ಪಾಲ್ಗೊಂಡಿದ್ದರು.