ಕೇರಳ ರೀತಿ ವೇತನಕ್ಕಾಗಿ ಗ್ರಾಪಂ ಸದಸ್ಯರಿಂದ ಬೆಂಗ್ಳೂರಲ್ಲಿ ಪ್ರತಿಭಟನೆ

| Published : Feb 09 2024, 01:50 AM IST / Updated: Feb 09 2024, 07:50 AM IST

ಕೇರಳ ರೀತಿ ವೇತನಕ್ಕಾಗಿ ಗ್ರಾಪಂ ಸದಸ್ಯರಿಂದ ಬೆಂಗ್ಳೂರಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಗ್ರಾಮ ಪಂಚಾಯಿತಿಗಳಿಗೆ ಬೇಕಾದ ಜವಾಬ್ದಾರಿ  ಕೇರಳ ಮಾದರಿಯಲ್ಲಿ ಗೌರವಧನ ಹೆಚ್ಚಳ, ಗ್ರಾ.ಪಂ. ಸದಸ್ಯರನ್ನು ರಾಜ್ಯ ಶಿಷ್ಟಾಚಾರಕ್ಕೆ ಒಳಪಡಿಸುವ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ  ಗ್ರಾಮ ಪಂಚಾಯಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಗ್ರಾಮ ಪಂಚಾಯಿತಿಗಳಿಗೆ ಬೇಕಾದ ಜವಾಬ್ದಾರಿ ನಕ್ಷೆ ರಚನೆ, ಕೇರಳ ಮಾದರಿಯಲ್ಲಿ ಗೌರವಧನ ಹೆಚ್ಚಳ, ಗ್ರಾ.ಪಂ. ಸದಸ್ಯರನ್ನು ರಾಜ್ಯ ಶಿಷ್ಟಾಚಾರಕ್ಕೆ ಒಳಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. 

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ನೇತೃತ್ವದಲ್ಲಿ ಗ್ರಾ.ಪಂ. ಸದಸ್ಯರು ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. 

ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಗಳ ಆಡಳಿತ, ನಿರ್ಣಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಗ್ರಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮೂಕ ಪ್ರೇಕ್ಷಕರಾಗಬೇಕಾಗಿದೆ. ಮೀಸಲಾತಿಯ ಸಂಪೂರ್ಣ ಉದ್ದೇಶ ವಿಫಲವಾಗಿದೆ. 

ಅಧಿಕಾರವಿದ್ದರೂ ಚಲಾಯಿಸದಂತಾಗಿದೆ. ಹಾಗಾಗಿ ಸಂವಿಧಾನ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ ಆಶಯದಂತೆ ಗ್ರಾ.ಪಂ.ನಲ್ಲಿ ಆಡಳಿತ ನಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಾಪೂಜಿ ಸೇವಾ ಕೇಂದ್ರಗಳ ಬಲವರ್ಧನೆ, ಮುಂಚೂಣಿ ಕಾರ್ಯಾಲಯ ಸ್ಥಾಪನೆ, 29 ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳು ಪಂಚಾಯತ್‌ ರಾಜ್‌ ಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರ ವಿಕೇಂದ್ರೀಕರಣ ಕಾಯ್ದೆ ರಚನೆ, ಗ್ರಾ.ಪಂ. ಕಚೇರಿ ನಿರ್ವಹಣೆಗೆ ಕೈಪಿಡಿ ರಚನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.