ಸಾರಾಂಶ
ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದು ರಾಜ್ಯದ ಜನರು ಇದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆ.ಆರ್.ನಗರ : ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದು ರಾಜ್ಯದ ಜನರು ಇದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗಮಂದಿರ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿನಿಂದ ಶುಕ್ರವಾರ ಆಯೋಜಿಸಿದ್ದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ₹513 ಕೋಟಿ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಈ ಎರಡು ಪಕ್ಷಗಳವರು ಬೊಗಳೆ ಬಿಡುತ್ತಿದ್ದಾರೆ, ಆದರೆ ನಾವು ಕಳೆದ ಎರಡು ವರ್ಷದ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರು. ಖರ್ಚು ಮಾಡುವುದರ ಜತೆಗೆ ಇತರೆ ಯೋಜನೆಗಳಿಗೆ 60 ಸಾವಿರ ಕೋಟಿ ರು. ವ್ಯಯಿಸಿದ್ದು, ಹಣ ಇಲ್ಲದಿದ್ದರೆ ಈ ಕೆಲಸಗಳು ಸಾಧ್ಯವಾಗುತ್ತಿತ್ತೆ ಎಂದರು.
ನಮ್ಮ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿದೆ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಔಷಧಿ ಮತ್ತು ಚಿನ್ನಬೆಳ್ಳಿ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಮಾಡಿದ್ದರೂ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿದರು.
16 ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರ: ಸಿಎಂ
ಮೈಸೂರು : ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲು 16 ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಮೇಟಗಳ್ಳಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಕಿಮೋಥೆರಪಿ ಆರೈಕೆ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮೈಸೂರಿನಲ್ಲಿ 20 ಬೆಡ್‌ಗಳ ಹಾಗೂ ಇತರೆಡೆ 10 ಬೆಡ್‌ಗಳ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಈ ಕೇಂದ್ರಗಳನ್ನು ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಹಲವು ಜನ ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಿತ್ತು. ಇದನ್ನು ತಪ್ಪಿಸಲು ಕಿಮೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪ್ರತಿ ವರ್ಷ 70 ಸಾವಿರ ಜನ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇವರೆಲ್ಲಾ ಚಿಕಿತ್ಸೆ ಪಡೆಯಲು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋಗಬೇಕಿತ್ತು. ಇವರಿಗೆ ಹತ್ತಿರದಲ್ಲಿ ಚಿಕಿತ್ಸೆ ನೀಡಲು 16 ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದೆ. ಕಿಮೊಥೆರಪಿ ಚಿಕಿತ್ಸೆ ಪಡೆದು 10, 15 ವರ್ಷ ಬದುಕಿದ್ದಾರೆ. ಕ್ಯಾನ್ಸರ್ ಬಂದರೆ ಯಾರು ಧೃತಿಗೆಡಬಾರದು. ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಬಾರಿ ಆದರೂ ದೇಹವನ್ನು ಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹಿಂದೆ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಇರಲಿಲ್ಲ, ಜಯದೇವ ಆಸ್ಪತ್ರೆ ಇರಲಿಲ್ಲ. ನಾನು ಅಧಿಕಾರಕ್ಕೆ ಬಂದ ನಂತರ ಇವುಗಳನ್ನು ಮೈಸೂರಿನಲ್ಲಿ ಪ್ರಾರಂಭಿಸಿದೆ. ಜಿಲ್ಲಾಸ್ಪತ್ರೆಗೆ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯವನ್ನು ನೀಡಲಾಗುತ್ತಿದೆ. ರಾಜ್ಯದ 240 ಕೇಂದ್ರಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ಸ್ಥಾಪನೆ: ದಿನೇಶ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅನೇಕ ಬಡಜನರು ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಪರದಾಡುತ್ತಾರೆ. ಅವರಿಗೆ ಚಿಕಿತ್ಸೆ ಕೊಡಿಸಲು ಹಣ ಇರುವುದಿಲ್ಲ. ಆದ್ದರಿಂದ ಕ್ಯಾನ್ಸರ್ ಚಿಕಿತ್ಸೆ ಕಿದ್ವಾಯಿ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ಕ್ಯಾನ್ಸರ್ ರೋಗವು ನಾವು ಬಳಸುವ ಆಹಾರ, ನಮ್ಮ ಜೀವನ ಶೈಲಿಯಿಂದ ಬರುತ್ತದೆ. ಬಡವರು ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುವುದು ಬಹಳ ಕಷ್ಟ ಆಗುತ್ತಿತ್ತು. ಇದನ್ನು ಮನಗಂಡು 16 ಜಿಲ್ಲಾಸ್ಪತ್ರೆಗಳಲ್ಲಿ 10 ಬೆಡ್ ನ ಕಿಮೋಥೆರಪಿ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಹೆಚ್ಚು ಅನುಭವ, ಪರಿಣಿತಿ ಇರುವ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಇದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಎಲ್ಲರಿಗೂ ಶಿಕ್ಷಣ ಸಿಗಬೇಕು. ಎಲ್ಲರಿಗೂ ಸಮಾನವಾಗಿ ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ದೊರೆಯಬೇಕು. ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು.
-ಸಿದ್ದರಾಮಯ್ಯ, ಮುಖ್ಯಮಂತ್ರಿ.