ಸಾರಾಂಶ
ಭಾರತದ ಆರ್ಥಿಕತೆ ನಿರ್ಜೀವವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ, ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಭಿನ್ನಮತವನ್ನು ಬಹಿರಂಗಪಡಿಸಿದೆ.
ನವದೆಹಲಿ: ಭಾರತದ ಆರ್ಥಿಕತೆ ನಿರ್ಜೀವವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ, ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಭಿನ್ನಮತವನ್ನು ಬಹಿರಂಗಪಡಿಸಿದೆ. ಟ್ರಂಪ್ ಹೇಳಿಕೆಯನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಲವಾಗಿ ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್ ಸಂಸದರಾದ ಶಶಿ ತರೂರ್, ರಾಜೀವ್ ಶುಕ್ಲಾ ಅವರೇ ಬಹಿರಂಗವಾಗಿ ವಿರೋಧಿಸಿದ್ದಾರೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಮಹಾ ಅಘಾಡಿ ಒಕ್ಕೂಟದ ಭಾಗವಾಗಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ ಕೂಡಾ ಟ್ರಂಪ್ ಹೇಳಿಕೆಯನ್ನು ಟೀಕಿಸಿದ್ದಾರೆ.
ರಾಹುಲ್ ಸಮರ್ಥನೆ:
ಭಾರತದ ಆರ್ಥಿಕತೆ ನಿರ್ಜೀವ ಎಂಬ ಟ್ರಂಪ್ ಹೇಳಿಕೆಯನ್ನು ರಾಹುಲ್ ಗಾಂಧಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್, ‘ಟ್ರಂಪ್ ಹೇಳಿದ್ದು ಸತ್ಯ. ಪ್ರಧಾನಿ ಮೋದಿ ಮತ್ತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಉಳಿದೆಲ್ಲರಿಗೂ ಭಾರತದ ಆರ್ಥಿಕತೆ ಸತ್ತುಹೋಗಿದೆ ಎಂಬ ಅರಿವಿದೆ. ಟ್ರಂಪ್ ಅವರು ಈ ಸತ್ಯ ಹೇಳಿದ್ದಕ್ಕೆ ನನಗೆ ಖುಷಿ ಇದೆ. ಬಿಜೆಪಿಯು ಉದ್ಯಮಿ ಗೌತಮ್ ಅದಾನಿಗೆ ಅನುಕೂಲ ಮಾಡಿಕೊಡಲು ದೇಶದ ಆರ್ಥಿಕತೆಯನ್ನು ಹಾಳುಗೆಡವಿದೆ’ ಎಂದು ರಾಹುಲ್ ಹೇಳಿದ್ದಾರೆ.
ತರೂರ್ ವಿರೋಧ:
ವ್ಯಾಪಾರ ಒಪ್ಪಂದದ ವಿಚಾರವಾಗಿ ಭಾರತ ಯಾವುದೇ ಕಾರಣಕ್ಕೂ ಅಮೆರಿಕದ ಒತ್ತಡಕ್ಕೆ ಮಣಿಯಬಾರದು. ಒಂದು ವೇಳೆ ಅವರ ಬೇಡಿಕೆ ಈಡೇರಿಸಲು ಅಸಾಧ್ಯವೆನ್ನುವಂತಿದ್ದರೆ ಮಾತುಕತೆಯಿಂದ ಹಿಂದೆ ಸರಿಯಬೇಕು ಎಂದು ಕಾಂಗ್ರೆಸ್ ಹಿರಿಯ ಸಂಸದ ಶಶಿತರೂರ್ ಹೇಳಿದ್ದಾರೆ.
ಸದ್ಯ ಟ್ರಂಪ್ ಅವರಿಗೆ ಪಾಕಿಸ್ತಾನವೇ ಪರಮಾಪ್ತ ದೇಶ ಎಂದೂ ಕಾಲೆಳೆದ ತರೂರ್, ಅಮೆರಿಕ ಅಧ್ಯಕ್ಷರ ಇಂಥ ಹೇಳಿಕೆ ರಷ್ಯಾದ ಜತೆಗಿನ ಭಾರತದ ವ್ಯೂಹಾತ್ಮಕ ಸಂಬಂಧ ದುರ್ಬಲಗೊಳಿಸುವ ತಂತ್ರವಾಗಿದೆ ಎಂದರು.
ಶುಕ್ಲಾ ಹೇಳಿದ್ದೇನು?:
ಟ್ರಂಪ್ ಹೇಳಿಕೆ ಸಂಪೂರ್ಣ ಆಧಾರರಹಿತ. ನಮ್ಮ ಆರ್ಥಿಕತೆ ದುರ್ಬಲವಾಗಿಲ್ಲ. ಯಾರಾದರೂ ನಮ್ಮ ಆರ್ಥಿಕತೆ ಮುಗಿಸಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು ತಿಳಿವಳಿಕೆ. ಟ್ರಂಪ್ ಭ್ರಮೆಯಲ್ಲಿದ್ದಾರೆ. ನಾವು ಯಾರ ಜತೆ ವ್ಯವಹರಿಸಬೇಕು ಎಂದು ಹೇಳುವ ಅಧಿಕಾರ ಹೊರಗಿನವಿಗಿಲ್ಲ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಉದ್ಧವ್ ಬಣದ ಸಂಸದೆ ಬೆಂಬಲ:
ಒಂದು ಕಡೆ ರಾಹುಲ್ ಗಾಂಧಿ ಟ್ರಂಪ್ ಹೇಳಿಕೆಯನ್ನು ಬೆಂಬಲಿಸಿದರೆ, ಮತ್ತೊಂದು ಕಡೆ ಪ್ರತಿಪಕ್ಷ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ರಂಪ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದು ದುರಹಂಕಾರ ಮತ್ತು ಅಜ್ಞಾನದ ಮಾತು ಎಂದು ಹೇಳಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ.
ಮುಗಿಬಿದ್ದ ಬಿಜೆಪಿ:
ಟ್ರಂಪ್ ಹೇಳಿಕೆ ಬೆಂಬಲಿಸಿದ ರಾಹುಲ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಟ್ರಂಪ್ ಹೇಳಿಕೆ ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಅವರು ತೀರಾ ಕೆಳಮಟ್ಟಕ್ಕಿಳಿದಿದ್ದಾರೆ. ಇದು ದೇಶದ ಜನರ ಸಾಧನೆಗೆ ಮಾಡಿದ ಅವಮಾನ. ಇಲ್ಲಿ ಮೃತಪಟ್ಟಿದ್ದು ನಮ್ಮ ಆರ್ಥಿಕತೆ ಅಲ್ಲ, ಬದಲಾಗಿ ರಾಹುಲ್ ಗಾಂಧಿ ಅವರ ರಾಜಕೀಯ ಪರಂಪರೆ ಎಂದು ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವಿಯಾ ಕಿಡಿಕಾರಿದ್ದಾರೆ
ಬಿಜೆಪಿ ಮತ್ತೊಬ್ಬ ನಾಯಕ ಅಣ್ಣಾಮಲೈ ಕೂಡ ಶಶಿತರೂರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾನು ಇಂದು ಇಬ್ಬರು ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದ್ದೇನೆ. ಒಬ್ಬರು ರಾಷ್ಟ್ರೀಯ ಹಿತಾಸಕ್ತಿ ಬಗ್ಗೆ ಮಾತನಾಡಿದರೆ, ಮತ್ತೊಬ್ಬರು ವಿದೇಶದಲ್ಲಿರುವ ತಮ್ಮ ಮಾಸ್ಟರ್‌ಗಳನ್ನು ಖುಷಿಪಡಿಸಲು ಹೇಳಿಕೆ ನೀಡಿದ್ದಾರೆ ಎಂದು ಟಾಂಗ್ ನೀಡಿದರು.
- ರಾಹುಲ್ ಗಾಂಧಿ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ಭಿನ್ನಸ್ವರ
- ಭಾರತದ ಆರ್ಥಿಕತೆ ಸತ್ತುಹೋಗಿದೆ ಎಂದ ಟ್ರಂಪ್
- ಅವರು ಹೇಳಿದ್ದು ನಿಜ ಎಂದು ಬೆಂಬಲಿಸಿದ ರಾಹುಲ್
- ಟ್ರಂಪ್ ಹೇಳಿಕೆಗೆ ತರೂರ್, ಇತರ ಕೈ ನಾಯಕರ ಕಿಡಿ
- ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕರ ತೀವ್ರ ಆಕ್ರೋಶ
ಭಾರತದ ಮೇಲೆ ಟ್ರಂಪ್ ಆಕ್ರೋಶಕ್ಕೆ ರಷ್ಯಾ ಮಾಜಿ ಅಧ್ಯಕ್ಷ ಹೇಳಿಕೆ ಕಾರಣ
ವಾಷಿಂಗ್ಟನ್: ಭಾರತವನ್ನು ‘ಒಳ್ಳೆಯ ಮಿತ್ರ’ ಎಂದು ಕರೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದ್ದಕ್ಕಿದ್ದಂತೆ ಕೋಪಗೊಂಡು ಶೇ.25ರಷ್ಟು ಭಾರೀ ತೆರಿಗೆ ಹೇರಲು, ಕೆಲ ದಿನಗಳ ಹಿಂದೆ ಟ್ರಂಪ್‌ರನ್ನು ಕೆಣಕಿದ್ದ ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆದ್ವೆದೇವ್ ಹೇಳಿಕೆಯೇ ಕಾರಣ ಎಂದು ತಿಳಿದುಬಂದಿದೆ.
ವಿಶ್ವಾದ್ಯಂತ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸುವ ಸ್ವ-ಮುಂದಾಳತ್ವ ವಹಿಸಿಕೊಂಡಿರುವ ಟ್ರಂಪ್, ರಷ್ಯಾದೊಂದಿಗಿನ ಸುದೀರ್ಘ ಕದನಕ್ಕೆ ಆದಷ್ಟು ಬೇಗ ನಾಂದಿ ಹಾಡದಿದ್ದರೆ ಇನ್ನಷ್ಟು ನಿರ್ಬಂಧ ಹೇರುವುದಾಗಿ ಬೆದರಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ರಷ್ಯಾದ ಮಾಜಿ ಅಧ್ಯಕ್ಷ ಮೆದ್ವೆದೇವ್, ‘ಅಮೆರಿಕ ಹೇಳಿದಂತೆ ಕೇಳಲು ಅಥವಾ ಅದು ಒಡ್ಡುವ ಬೆದರಿಕೆಗಳಿಗೆ ಹೆದರಲು ರಷ್ಯಾ ಇಸ್ರೇಲ್ ಅಥವಾ ಇರಾನ್ ಅಲ್ಲ. ನಿಮ್ಮ ಪ್ರತಿಯೊಂದು ಹೊಸ ಆದೇಶವೂ ಬೆದರಿಕೆಯಾಗಿದ್ದು, ಯುದ್ಧದ ಕಡೆಗಿನ ಹೆಜ್ಜೆಯಾಗಲಿದೆ. ನೀವೂ ಸ್ಲೀಪೀ ಜೋ(ಬೈಡನ್) ಹಾದಿ ಹಿಡಿಯಬೇಡಿ’ ಎಂದು ತಾತ್ಸಾರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದು ಟ್ರಂಪ್ ಅವರ ಕೋಪವನ್ನು ಹೆಚ್ಚುಮಾಡಿತು.
ಭಾರತ ಮತ್ತು ರಷ್ಯಾದ ನಡುವಿನ ಸ್ನೇಹ ಮತ್ತು ವ್ಯಾಪಾರವನ್ನು ಸಹಿಸದ ಟ್ರಂಪ್, ಈಗಾಗಲೇ ಅನೇಕ ಬಾರಿ ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ತೈಲ ಆಮದನ್ನು ನಿಲ್ಲಿಸುವಂತೆ ಬೆದರಿಸಿದ್ದರು. ಆದರೆ ಭಾರತ ತನ್ನ ಹಳೆಮಿತ್ರನ ಕೈಬಿಡಲು ಸಿದ್ಧವಿಲ್ಲ. ಹೀಗಿರುವಾಗ, ರಷ್ಯಾದ ಮಾಜಿ ನಾಯಕನ ಹೇಳಿಕೆಯಿಂದ ಕೆರಳಿದ ಟ್ರಂಪ್, ಭಾರತದ ವಿರುದ್ಧವೂ ತೆರಿಗೆ ಪ್ರಹಾರ ಮಾಡಿದ್ದಾರೆ. ಜತೆಗೆ, ‘ಭಾರತ ಮತ್ತು ರಷ್ಯಾ ತಮ್ಮತಮ್ಮ ಸತ್ತ ಆರ್ಥಿಕತೆಯಗಳನ್ನು ಒಟ್ಟಿಗೆ ಮುಳುಗಿಸಿಕೊಳ್ಳಲಿ. ಭಾರತ ನಮ್ಮ ಮೇಲೆ ಅತ್ಯಧಿಕ ತೆರಿಗೆ ಹೇರುತ್ತದೆ. ರಷ್ಯಾದೊಂದಿಗೆ ನಮಗೆ ಹೇಳಿಕೊಳ್ಳುವಂತಹ ವ್ಯಾಪಾರ ಸಂಬಂಧವಿಲ್ಲ. ಡಿಮಿಟ್ರಿ ತಮ್ಮನ್ನು ತಾವು ಇನ್ನೂ ಅಧ್ಯಕ್ಷರೆಂದು ಭಾವಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದರು.ಇದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಡಮಿಟ್ರಿ, ‘ಮಾಜಿ ಅಧ್ಯಕ್ಷನ ಮಾತಿಂದಲೇ (ಟ್ರಂಪ್‌ಗೆ) ಅಷ್ಟು ಆತಂಕವಾಗಿದ್ದರೆ, ರಷ್ಯಾ ಮಾಡುತ್ತಿರುವುದು ಸರಿಯಿದೆ. ಟ್ರಂಪ್ ತಮ್ಮ ಇಷ್ಟದ ದ ವಾಕಿಂಗ್ ಡೆಡ್ ಚಿತ್ರವನ್ನು ನೆನಪಿಸಿಕೊಳ್ಳಲಿ’ ಎಂದು ಕಿಚಾಯಿಸಿದ್ದಾರೆ.